ತುಂಗಭದ್ರಾ ಅಣೆಕಟ್ಟು ಗೇಟ್ ದುರಸ್ತಿ ಕಾರ್ಯ ಆರಂಭ: ಡಿ.ಕೆ.ಶಿವಕುಮಾರ್
ಬೆಂಗಳೂರು: ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದೆ. ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲೆ ಮೊಕ್ಕಾಂ ಹೂಡಿದ್ದಾರೆ ಎಂದು ಹೇಳಿದರು.
ಅಣೆಕಟ್ಟೆಗೆ ಗೇಟ್ ಯಾವ ರೀತಿ ಸಿದ್ಧಪಡಿಸಲಾಗಿತ್ತು ಎಂಬ ನಕ್ಷೆ ಹಾಗೂ ದಾಖಲೆಗಳನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಈ ಘಟನೆಗೆ ಅಧಿಕಾರಿಗಳನ್ನು ಹೊಣೆ ಮಾಡುವುದಕ್ಕಿಂತ ಅಣೆಕಟ್ಟು ಉಳಿಸಿ, ರೈತರನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ. ಇದು 70 ವರ್ಷಗಳ ಹಳೆಯ ಅಣೆಕಟ್ಟು. ಅದರ ಸರಪಳಿ ಕಟ್ ಆಗಿದೆ. ಬೇರೆ ಕಡೆಗಳಲ್ಲಿ ಎರಡು ಬಗೆಯ ಸುರಕ್ಷತೆಗಳಿರುತ್ತವೆ. ಆದರೆ, ಈ ಅಣೆಕಟ್ಟೆಗೆ ಒಂದೇ ಅವಕಾಶ ಇರುವುದು ಎಂದು ಅವರು ಹೇಳಿದರು.
ತುಂಗಭದ್ರಾ ಅಣೆಕಟ್ಟು ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಅಣೆಕಟ್ಟೆಯ 19ನೇ ಗೇಟ್‍ಗೂ ಈಗ ನೀರು ಹೊರಗೆ ಬಿಡುತ್ತಿರುವ ಗೇಟ್‍ಗಳಿಗೂ ವ್ಯತ್ಯಾಸವಿದೆ. ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಎಲ್ಲ ಗೇಟ್‍ಗಳ ಮೂಲಕ ಹೊರಗೆ ಬಿಡಲಾಗುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.
ವಿರೋಧ ಪಕ್ಷದವರು ನನ್ನನ್ನು, ಮುಖ್ಯಮಂತ್ರಿಯನ್ನು ಮತ್ತು ಅಧಿಕಾರಿಗಳನ್ನು ನಿಂದಿಸಲಿ. ನಾನು ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೂರುವುದಿಲ್ಲ. ನಮಗೆ ವಿಪಕ್ಷಗಳಿಗಿಂತ ಈ ವಿಚಾರದಲ್ಲಿ ತಾಂತ್ರಿಕ ತಜ್ಞರು ಏನು ಸಲಹೆ ನೀಡುತ್ತಾರೆ ಅದು ಮುಖ್ಯ ಎಂದು ಉಪ ಮುಖ್ಯಮಂತ್ರಿ ಹೇಳಿದರು.
50-60 ಟಿಎಂಸಿ ನೀರನ್ನು ಉಳಿಸಿ ರೈತರಿಗೆ ಕೊಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಯುವಂತೆ ಮಾಡಿದ್ದೇವೆ. ಸಾಧ್ಯವಾದಷ್ಟು ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಂಡಿದ್ದೇವೆ. ಅಣೆಕಟ್ಟೆಯ 2 ಕಿ.ಮೀ. ಅಂತರದಲ್ಲಿ ಎಚ್ಚರಿಕೆಯಿಂದ ಇರುವಂತೆ ಅಲ್ಲಿನ ಜನರಿಗೆ ಸೂಚನೆ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಸಚಿವರು ಬಂದಿದ್ದರು. ಅಲ್ಲದೇ, ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಗೇಟ್ ಕೊಚ್ಚಿಕೊಂಡು ಹೋಗಿರುವ ವಿಚಾರದ ಕುರಿತು ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲಾ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ
ಅಣೆಕಟ್ಟು ಸುರಕ್ಷತಾ ಸಮಿತಿ ರಚನೆ ಮಾಡಲಾಗುತ್ತಿದ್ದು, ಈ ಸಮಿತಿಯು ರಾಜ್ಯದ ಎಲ್ಲ ಅಣೆಕಟ್ಟುಗಳಿಗೆ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ವರದಿ ನೀಡಲಿದೆ. ರಾಜ್ಯದ ಜನತೆ ಹಾಗೂ ರೈತರು ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಿತಿಯು ಎಲ್ಲ ಅಣೆಕಟ್ಟುಗಳ ಅಧ್ಯಯನ ನಡೆಸಲಿದ್ದು, ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗುವುದು. ತುಂಗಾಭದ್ರಾ ಅಣೆಕಟ್ಟೆಯ ಗೇಟ್ ದುರಸ್ತಿ ಕಾರ್ಯಕ್ಕೂ ಈ ಸಮಿತಿಗೂ ಸಂಬಂಧವಿಲ್ಲ. ಉಳಿದ ವಿಚಾರದ ಬಗ್ಗೆ ವರದಿ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯಪಾಲರು ಸಂಪುಟ ಸಭೆ ತೀರ್ಮಾನ ಗೌರವಿಸುತ್ತಾರೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ಹಿಂಪಡೆಯುವಂತೆ ರಾಜ್ಯ ಮಂತ್ರಿ ಪರಿಷತ್ ಮಾಡಿದ ಸಲಹೆ ಕುರಿತು ರಾಜ್ಯಪಾಲರ ನಡೆ ಮೌನವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ರಾಜ್ಯಪಾಲರು ಪ್ರಜ್ಞಾವಂತರಿದ್ದಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಾರೆ, ನಮ್ಮ ಮಾತಿಗೆ ಗೌರವ ಕೊಡುತ್ತಾರೆ ಎಂದು ನಂಬಿದ್ದೇವೆ ಎಂದು ತಿಳಿಸಿದರು.
ನಾನು ಅವರ ಮೇಲೆ ಆತ್ಮವಿಶ್ವಾಸವನ್ನಿಟ್ಟಿದ್ದೇನೆ. ಅವರು ಸಹ ಹಿರಿಯ ರಾಜಕಾರಣಿಯಾಗಿದ್ದು ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಗೌರವಿಸುತ್ತಾರೆ ಎಂದು ಅಂದುಕೊಂಡಿದ್ದೇನೆ ಎಂದು ಶಿವಕುಮಾರ್ ಹೇಳಿದರು.
ಹೈಕಮಾಂಡ್ ಸಭೆಯಲ್ಲಿ ಭಾಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ಕಾಯದರ್ಶಿಗಳು ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಸಭೆ ಮಂಗಳವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾನು ದಿಲ್ಲಿಗೆ ತೆರಳುತ್ತಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಬೆಂಗಳೂರಿಗೆ ಹಿಂದಿರುಗಲಿದ್ದೇನೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.