ವಿಧಾನಸಭೆಯಲ್ಲಿ ಸಹಕಾರ ಸಂಘಗಳ ತಿದ್ದುಪಡಿ ಸೇರಿ ಎರಡು ವಿಧೇಯಕ ಮಂಡನೆ

Update: 2024-02-15 16:13 GMT

ಬೆಂಗಳೂರು: ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ-2024 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಗುರುವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧೇಯಕಗಳನ್ನು ಮಂಡಿಸಿ, ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕದಲ್ಲಿ ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸುಗಳ ಅನುಸಾರ ಮತ್ತು ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವಿದೆ. ಈ ದೃಷ್ಟಿಯಿಂದ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡಿ, ರಿಜಿಸ್ಟ್ರಾರ್ ನಿಯಂತ್ರಣದಡಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಪ್ರಕರಣ 39 ಎಎ ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ ಎಂದರು.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28 ಎ (3)ರ ಉಪ ಪ್ರಕರಣ (3)ರಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಮಂಡಳಿಯಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿ ಕಲ್ಪಿಸಲಾಗಿದೆ. ಅದಕ್ಕನುಸಾರವಾಗಿ, ಮಾಧ್ಯಮಿಕ ಫೆಡರಲ್ ಮತ್ತು ಅಪೆಕ್ಸ್ ಸಹಕಾರ ಸಂಘಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ ಈ ತಿದ್ದುಪಡಿ ತರಲಾಗುತ್ತಿದೆ ಎಂದು ಅವರು ವಿವರಿಸಿದರು.

ಅದೇ ರೀತಿ, ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997ರ 20 ಬಿ ಪ್ರಕರಣದ ಉಪಪ್ರಕರಣ (1)ರ (ಸಿ)ಖಂಡದ ಉಪಪ್ರಕರಣ (1) ಮತ್ತು (2) ರ ಉಪಬಂಧಗಳನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅಸಂಖ್ಯಾತ ರಿಟ್ ಅರ್ಜಿಗಳು ದಾಖಲಾಗಿವೆ. ಉಚ್ಚನ್ಯಾಯಾಲಯವು ಎಲ್ಲಾ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸಿರುತ್ತದೆ. ಆದ್ದರಿಂದ ಎಲ್ಲಾ ಸದಸ್ಯರಿಗೆ ಮತದಾನ ಮಾಡುವುದನ್ನು ಖಾತರಿಪಡಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ ಎಂದರು.

ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸ್ಸಿಗನುಸಾರವಾಗಿ ಮತ್ತು ಸಹಕಾರಿ ಚುನಾವಣೆ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಹಕಾರಿ ಚುನಾವಣಾ ಪ್ರಾಧಿಕಾರವನ್ನು ರದ್ದುಪಡಿಸಿ, ರಿಜಿಸ್ಟ್ರಾರ್ ನಿಯಂತ್ರಣದಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 39 ಎಎ-ಗೆ ತಿದ್ದುಪಡಿ ತರುವ ತತ್ಪರಿಣಾಮವಾಗಿ 26ಎ ಪ್ರಕರಣಕ್ಕೆ ತಿದ್ದುಪಡಿ ಮಾಡಲು ಪ್ರಸ್ರಾಪಿಸಲಾಗಿದೆ.

ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 ರ ಪ್ರಕರಣ 24 (1) (ಇ) ರಲ್ಲಿ ಪ್ರಾಥಮಿಕ ಸಹಕಾರಿಗಳ ಮಂಡಳಿಯಲ್ಲಿ ಅನುಸೂಚಿತ ಜಾತಿಗಳು, ಅನುಸೂಚಿ ಬುಡಕಟ್ಟುಗಳು, ಹಿಂದುಳಿದ ವರ್ಗಳು ಮತ್ತು ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿಯನ್ನು ಕಲ್ಪಿಸಲಾಗಿದೆ.

ಅದಕ್ಕನುಸಾರವಾಗಿ, ಪೂರಕ ಸಹಕಾರಿ, ಸಂಯುಕ್ತ ಸಹಕಾರಿ ಮತ್ತು ಅಪೆಕ್ಸ್ ಸಹಕಾರಿಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ ಈ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಹಾಗಾಗಿ, ಈ ವಿಧೇಯಕವನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಅವರು ಸದನಕ್ಕೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News