ಉಡುಪಿ ಪ್ರಕರಣದ ಕುರಿತು ಕೇಂದ್ರ ಮಹಿಳಾ ಆಯೋಗವೇ ಸ್ಪಷ್ಟನೆ ನೀಡಿದೆ, ಬಿಜೆಪಿ ಈಗ ಏನು ಹೇಳುತ್ತೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2023-07-28 15:15 GMT

ಬೆಂಗಳೂರು: ಉಡುಪಿ ಕಾಲೇಜಿನಲ್ಲಿ ನಡೆದ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಶೌಚಾಲಯದಲ್ಲಿ ಗುಪ್ತ ಕ್ಯಾಮೆರಾ ಇರಲಿಲ್ಲ ಎಂದು ಸ್ವತಃ ಕೇಂದ್ರ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಸ್ಪಷ್ಟಪಡಿದ್ದು, ಇದಕ್ಕೆ ಬಿಜೆಪಿ ನಾಯಕರ ಉತ್ತರವೇನು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಅವರ ಪಕ್ಷದವರೇ ಬಂದು ಅಲ್ಲಿ ಕ್ಯಾಮೆರಾ ಇರಲಿಲ್ಲ ಎಂದಿದ್ದಾರೆ. ನಾವೂ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಸಿಕ್ಕಿಲ್ಲ ಎಂದು ಹೇಳಿದ್ದೆವು. ಈಗ ಅವರೆಲ್ಲಾ ಎಲ್ಲಿ ಹೋದರು ಎಂದು ಅವರು ಪ್ರಶ್ನಿಸಿದರು.

ಉಡುಪಿ ವಿಚಾರವಾಗಿ ವಿಪಕ್ಷದವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ಹಿಂದೆ ಎಬಿವಿಪಿ ಅವರು ಬಿಜೆಪಿ ಪಕ್ಷದ ಗೃಹ ಸಚಿವರನ್ನೆ ಬಿಟ್ಟಿಲ್ಲ. ಆರಗ ಜ್ಞಾನೇಂದ್ರ ಅವರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇವಾಗ ಉಡುಪಿ ಪ್ರಕರಣವನ್ನು ಬಿಡುತ್ತಾರಾ? ಎಂದ ಅವರು, ಸಿಎಲ್‍ಪಿ ಸಭೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅನುದಾನ ಬಿಡುಗಡೆ ಬಗ್ಗೆ ಸವಿಸ್ತಾರವಾಗಿ ಹೇಳಿದ್ದಾರೆ. ಇಲಾಖಾವಾರು ಅನುದಾನ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ ಎಂದರು.

ಸಮೀಕ್ಷೆಯಲ್ಲಿ ಸರಕಾರಕ್ಕೆ ಜನಪ್ರಿಯತೆ ಸಿಕ್ಕಿದೆ. ಇದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಶಾಸಕರು ಪತ್ರ ಬರೆದಿರೋದು ತಪ್ಪಲ್ಲ. ಆದರೆ, ಆ ಪತ್ರವನ್ನು ಬಿಜೆಪಿಯವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News