ನನ್ನನ್ನು ಜೈಲಿಗೆ ಕಳಿಸಲು ಸರಕಾರದಿಂದ ಸಂಚು : ಎಚ್.ಡಿ.ಕುಮಾರಸ್ವಾಮಿ ಆರೋಪ
ಹೊಸದಿಲ್ಲಿ: ಈ ಹಿಂದೆ ಇದೇ ಸಿದ್ದರಾಮಯ್ಯರ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು. ಇದೀಗ ಅವರ ಪಟಾಲಂ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಮಂಗಳವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಮಾಧ್ಯಮಗಳ ಮುಂದೆ ಅವರ ಕಥೆಯನ್ನು ಬಯಲು ಮಾಡಿದ್ದೆ. ಆದರೆ, ಅವರು ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್‌ನಲ್ಲಿ ಕುಳಿತು ಮಾತಾಡಿದ್ದಾರೆ ಎನ್ನುವ ಮಾಹಿತಿ ನನಗೆ ಇದೆ ಎಂದು ದೂರಿದರು.
ನಾನು ಜಾಮೀನು ತೆಗೆದುಕೊಂಡಿದ್ದೇನೆ, ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ, ಈ ಸರಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಅದಕ್ಕೆ ಜಾಮೀನು ಪಡೆದಿದ್ದೇನೆ. ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ ಎಂದು ಟೀಕಿಸಿದರು.
80 ಕೋಟಿ ರೂ.ಗುಳುಂ ಮಾಡಿರೋ ಪ್ರಕರಣದಲ್ಲಿ ಏನಾಯಿತು? ಎಸ್‍ಐಟಿ ಯಾರನ್ನೋ ಬಂಧನ ಮಾಡಿದ್ದರು. ಯಾರೋ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪ್ರಕರಣದಲ್ಲಿ ಸೇರಿಸಿದಿರಿ. ನಾನು ಯಾವುದೇ ಅಧಿಕಾರಯನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ನಾನು ಆ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ ಬಗ್ಗೆ ಅಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡುವುದಕ್ಕೆ ಅವಕಾಶ ಕೇಳಿ ಪತ್ರ ಬರೆದು, ಒಂದು ಖಾಸಗಿ ಚಾನೆಲ್‍ಗೆ ಲೀಕ್ ಮಾಡಿರುವ ಹಿನ್ನಲೆಯಲ್ಲಿ ನಾನು ಪ್ರಶ್ನೆ ಮಾಡಿದ್ದು ಎಂದು ಅವರು ಹೇಳಿದರು.
ನಾನು ಆ ಪೊಲಿಸ್ ಅಧಿಕಾರಿಯ ಉದ್ದಟನವನ್ನು ಖಂಡಿಸಿದ್ದೆ. ಆ ಅಧಿಕಾರಿಯ ಹಿನ್ನೆಲೆ ಏನಿದೆ ಎನ್ನುವುದನ್ನು ಹೇಳಿದ್ದೇನೆ. ಬೆಂಗಳೂರಿನ ಲ್ಯಾಂಡ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜತೆ ಅವರ ನೇರ ನಂಟಿದೆ. ಸಮಾಜ ದ್ರೋಹಿ ಶಕ್ತಿಗಳಿಗೆ ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ? ಕ್ರಿಮಿನಲ್ ಪ್ರಕರಣದಲ್ಲಿ ಅಧಿಕಾರಿಯೇ ಆರೋಪಿ ನಂಬರ್ 2 ಆಗಿದ್ದಾರೆ. ಸದ್ಯ ಜಾಮೀನು ಮೇಲೆ ಹೊರಗಡೆ ಇದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಅಧಿಕಾರಿಗಳು ಸಿಎಂ ಬಳಿ ಬಂದು ನೀವು ಕ್ರಿಮಿನಲ್ ಸಿಎಂ ಅಂದ್ರೆ ಏನು ಮಾಡುತ್ತೀರಿ? ಶನಿವಾರ ಕಚೇರಿ ರಜೆ ಇದ್ದರೂ ಸಹೋದ್ಯೋಗಿಗಳಿಗೆ ಪತ್ರ ಬರೆಯುವ ನೆಲದಲ್ಲಿ ನನ್ನ ಬಗ್ಗೆ ಅಶ್ಲೀಲ ಭಾಷೆ ಬಳಕೆ ಮಾಡಿದ್ದಾರೆ. ಅದು ಕಚೇರಿ ಮೆಮೊ ಅಲ್ಲ, ಅದರಲ್ಲಿ ಸೀಲ್ ಇಲ್ಲ, ಆ ಇಲಾಖೆಯ ಮೊಹರು ಇಲ್ಲ ಎಂದು ಅವರು ಹೇಳಿದರು.
ಇಂತಹ ಅಧಿಕಾರಿಗಳು ಸರಕಾರವನ್ನು ಮೆಚ್ಚಿಸಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಸಲುವಾಗಿ ಜಾಮೀನು ತೆಗೆದುಕೊಂಡೆ. ಆ ಅಧಿಕಾರಿ ಮೇಲೆಯೂ ಪ್ರಕರಣ ಇದೆ. ಅವರು ಆರೋಪಿ ನಂಬರ್ 2. ಹೈಕೋರ್ಟ್‍ನಲ್ಲಿ ತನಿಖೆಗೆ ತಡೆಯಾಜ್ಞೆ ತೆಗೆದಯಕೊಂಡಿದ್ದಾರೆ. ನಾನು ಬರೀ ಜಾಮೀನು ತಗೊಂಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
‘ಗೃಹ ಸಚಿವ ಡಾ.ಪರಮೇಶ್ವರ್ ಶಬ್ದಪಂಡಿತರು. ನನ್ನ ಹೆಸರು ಉಲ್ಲೇಖಿಸಿಲ್ಲ ಎನ್ನುತಾರೆ. ಸಿಎಂ ಮೇಲೂ ಆರೋಪ ಇದೆ, ನಾಳೆ ಬೆಳಗ್ಗೆ ಬಂದು ನಿಮ್ಮ ಅಧಿಕಾರಿ ನಿಮ್ಮನ್ನು ಕ್ರಿಮಿನಲ್ ಮುಖ್ಯಮಂತ್ರಿ ಎಂದು ಕರೆದರೆ ಏನು ಮಾಡುತ್ತೀರಿ. ನನ್ನ ವಿರುದ್ಧ ಬರೆದ ಪತ್ರ ಹೇಗೆ ಹಂಚಲಾಯಿತು? ನನ್ನ ವಿರುದ್ಧ ಸಿಎಂ ಕಚೇರಿಯಿಂದ ಸೋಮವಾರ ರಾತ್ರಿ ಮತ್ತೊಂದು ಪತ್ರ ದಾಖಲೆಗಳು ಹೋಗಿವೆ. ಪತ್ರದಲ್ಲಿ ಉಲ್ಲೇಖಿಸಿರುವ ಕಿಶೋರ್ ಕುಮಾರ್ ಇವರು ಎಲ್ಲಿಗೆ ಕರೆಸಿಕೊಂಡಿದ್ದರು?’
-ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ