‘ಭತ್ತಕ್ಕೆ 2300 ರೂ.ಬೆಂಬಲ ಬೆಲೆ’ ಅನ್ನದಾತರಿಗೆ ದೀಪಾವಳಿ ಕೊಡುಗೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2024-10-27 15:56 GMT

PC :x/@JoshiPralhad

ಹೊಸದಿಲ್ಲಿ : ಕೇಂದ್ರ ಸರಕಾರವು ಭತ್ತದ ಬೆಂಬಲ ಬೆಲೆಯನ್ನು 2300 ರೂ.ಗಳಿಗೆ ಹೆಚ್ಚಿಸುವ ಮೂಲಕ ಅನ್ನದಾತರಿಗೆ ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ರವಿವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ʼ2013-14 ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 1310 ರೂ.ಗಳಿತ್ತು. ಈಗ ಅದನ್ನು 2300 ರೂಪಾಯಿಗೆ ಹೆಚ್ಚಿಸಲಾಗಿದೆ. ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 185 ಲಕ್ಷ ಟನ್ ಭತ್ತ ಮತ್ತು 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ ಹಾಕಿಕೊಂಡಿದೆ ಎಂದರು.

ಭತ್ತದ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಮುಂಗಾರು ಹಂಗಾಮು ಭತ್ತ ಸಂಗ್ರಹಕ್ಕೆ ಸಾಕಷ್ಟು ಸ್ಥಳವಿದೆ. ಪ್ರಸ್ತುತ 14 ಎಲ್‍ಎಂಟಿ ಭತ್ತ ಸಂಗ್ರಹಕ್ಕೆ ಸ್ಥಳಾವಕಾಶವಿದೆ. ಪಂಜಾಬಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು.

2700 ಮಂಡಿಗಳಲ್ಲಿ ಸಂಗ್ರಹ: ಅಕ್ಟೋಬರ್ 1ರಿಂದ 2700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭಿಸಿದ್ದು, ಇಂದಿಗೆ ಒಟ್ಟು 50 ಎಲ್‍ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ. ನಾಮನಿರ್ದೇಶನದ ಆಧಾರದ ಮೇಲೆ ಸಿಡಬ್ಲ್ಯುಸಿ ಹಾಗೂ ಎಸ್‍ಡಬ್ಲ್ಯುಸಿ ಗೋದಾಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ. ಗೋಧಿ ದಾಸ್ತಾನು ತ್ವರಿತ ಸ್ಥಳಾಂತರ ಜೊತೆಗೆ ಪಿಇಜಿ ಯೋಜನೆಯಡಿ 31 ಎಲ್‍ಎಂಟಿ ಶೇಖರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‍ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಪ್ರಹ್ಲಾದ್ ಜೋಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News