ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಬೇಕು, ಇಲ್ಲದಿದ್ದರೆ ದೇಶ ಪ್ರಬಲವಾಗಿರುವುದಿಲ್ಲ : ಫಾರೂಕ್ ಅಬ್ದುಲ್ಲಾ

Update: 2024-02-25 16:23 GMT

Photo :X/@kharge

ಬೆಂಗಳೂರು : ವಿವಿಧ ವಿಷಯಗಳನ್ನು ಮುನ್ನಲೆಗೆ ತಂದು ನಮ್ಮನ್ನು ಬೇರ್ಪಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಸಂವಿಧಾನವನ್ನು ಸಂರಕ್ಷಿಸಲು ನಾವು ಜೊತೆಯಾಗಿ ಮುಂದೆ ಸಾಗಬೇಕಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ತಿಳಿಸಿದರು.

ರವಿವಾರ ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆ ನಮ್ಮ ಹೆಮ್ಮೆ

ಈ ದೇಶ ನಮ್ಮೆಲ್ಲರಿಗೂ ಸೇರಿದ್ದು. ವಿವಿಧತೆಯಲ್ಲಿ ಏಕತೆ ನಮ್ಮ ಹೆಮ್ಮೆ. ಕಾಶ್ಮೀರದಿಂದ ಕನ್ಯಾಕುಮಾರಿ, ತ್ರಿಪುರದಿಂದ ಮಹಾರಾಷ್ಟ್ರದವರೆಗೆ ಅನೇಕ ಭಾಷೆಗಳು, ಅನೇಕ ಸಂಸ್ಕೃತಿಗಳು, ಅನೇಕ ಧರ್ಮಗಳು ಇವೆ. ನಮ್ಮ ಕಾಶ್ಮೀರದಲ್ಲಿ ತಾಪಮಾನ ಅತ್ಯಂತ ಕನಿಷ್ಠ ಮಟ್ಟಕ್ಕೆ ಇರುತ್ತದೆ. ಇಲ್ಲಿ ಬಿಸಿಯಾದ ವಾತಾವರಣ ಇದೆ. ಆದರೂ, ನಾವೆಲ್ಲರೂ ನವ ಭಾರತಕ್ಕಾಗಿ ಎದ್ದೇಳಬೇಕಿದೆ ಎಂದು ಅವರು ಹೇಳಿದರು.

ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಬೇಕು. ಇಲ್ಲದಿದ್ದರೆ ನಮ್ಮ ದೇಶ ಪ್ರಬಲವಾಗಿರುವುದಿಲ್ಲ. ಯಾವುದೇ ಧರ್ಮ ಕೆಡಕನ್ನು ಬೋಧಿಸುವುದಿಲ್ಲ. ಧರ್ಮವನ್ನು ಆಚರಿಸುವವರು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನಾವು ಮುಂದೆ ಹೋಗಾಬೇಕಾದರೆ ಸವಾಲುಗಳನ್ನು ಜೊತೆಯಾಗಿ ಎದುರಿಸಿ ಮುನ್ನುಗಬೇಕು ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

ದೇಶದ ಪ್ರತಿಯೊಬ್ಬ ನಾಗರಿಕನು ಇಂದು ಶಾಂತಿ, ಸೌಹಾರ್ದತೆ, ಅವರ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ, ಅವರ ಭವಿಷವನ್ನು ಸುರಕ್ಷಿತವಾಗಿರಿಸಲು ಬಯಸುತ್ತಾನೆ. ಉತ್ತಮ ಶಾಲೆ, ಆಸ್ಪತ್ರೆ, ಮೂಲಸೌಕರ್ಯ ಬಯಸುತ್ತಾರೆ. ನಾವು ಅವರ ಭವಿಷ್ಯ ರೂಪಿಸಲು ಬದ್ಧರಾಗಬೇಕಿದೆ ಎಂದ ಅವರು, ಕಾಶ್ಮೀರ ಭಾರತದ ಅಂಗವಾಗಿತ್ತು, ಅಂಗವಾಗಿದೆ ಹಾಗೂ ಅಂಗವಾಗಿಯೇ ಇರುತ್ತದೆ ಎಂದರು.

ಮನುವಾದದ ಕಾಲಕ್ಕೆ ಕೊಂಡೊಯ್ಯುತ್ತಿದೆ

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮಾತನಾಡಿ, ನಾವು ಭಾರತವನ್ನು ಭವಿಷ್ಯದ ಬೆಳಕಿನೆಡೆಗೆ ಕೊಂಡೊಯ್ಯುತ್ತಿದ್ದರೆ, ಆರೆಸ್ಸೆಸ್ ಬೆಂಬಲಿತ ಬಿಜೆಪಿ ಸರಕಾರವು ಮನುವಾದದ ಕಾಲಕ್ಕೆ ಕೊಂಡೊಯ್ಯುತ್ತಿದೆ. ದೇಶದಲ್ಲಿ ಬಡತನ, ಹಸಿವು ಹೆಚ್ಚಾಗಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದರು.

ಅಮೃತ ಕಾಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಸಮುದ್ರ ಮಂಥನದಲ್ಲಿ ಅಮೃತವೂ ಬಂತು, ವಿಷವೂ ಬಂತು. ದೇವತೆಗಳು ಅಮೃತವನ್ನು ರಾಕ್ಷಸರನ್ನು ನಿರ್ನಾಮ ಮಾಡಲು ಬಳಸಿದರು. ಈಗ ಅದೇ ರೀತಿ ಅಧಿಕಾರ(ಅಮೃತ) ತಪ್ಪು ವ್ಯಕ್ತಿಗಳ ಕೈಯಲ್ಲಿ ಇದೆ. ಜನರು ಅದನ್ನು ಹಿಂಪಡೆಯಬೇಕು ಎಂದು ಅವರು ಕರೆ ನೀಡಿದರು.

ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, ವಾಜಪೇಯಿ ಪ್ರಧಾನಿಯಾಗಿದ್ದಾಗ ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಡೆದಿತ್ತು. ಅಂತಹದೆ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಜ್ಯ ಸರಕಾರ ನಮ್ಮ ಸಂವಿಧಾನ ನಮ್ಮ ಜೀವನ ಎಂಬ ಘೋಷವಾಕ್ಯದಡಿ ಅರ್ಥಪೂರ್ಣವಾಗಿ ಈ ಸಮಾವೇಶ ಆಯೋಜಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರವು ನೇರವಾಗಿ ಆರೆಸ್ಸೆಸ್‍ನ ನಿಯಂತ್ರಣದಲ್ಲಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದರೆ ಕೇವಲ ಅಂಬಾನಿ ಮತ್ತು ಅದಾನಿಯದ್ದು ಆಗಿದೆ. ಜಾತ್ಯತೀತ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಈ ಸರಕಾರ ವಿಫಲವಾಗಿದೆ ಎಂದು ಅವರು ಹೇಳಿದರು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ತಮ್ಮ ಹಕ್ಕುಗಳನ್ನು ಕೇಳಲು ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಎದುರು ಪ್ರತಿಭಟನೆ ಮಾಡುವಂತಾಗಿದೆ. ಏಕೆಂದರೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಅಧಿಕಾರ ಕೇಳುವಂತಾಗಿದೆ. ರಾಜ್ಯ ಸರಕಾರ ದಿಲ್ಲಿಗೆ ಬಂದಿದ್ದೇಕೆ? ಕೇರಳ ಸಿಎಂ ಪಿಣರಾಯಿ ವಿಜಯನ್ ಆರ್ಥಿಕ ರಕ್ಷಣೆ ಕೇಳಿದ್ದೇಕೆ? ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಭಟಿಸಿದ್ದೇಕೆ? ಎಂದು ರಾಜಾ ಪ್ರಶ್ನಿಸಿದರು.

ಒಂದು ದೇಶ, ಒಂದು ಚುನಾವಣೆ ಏಕೆ? ಇದು ಫ್ಯಾಸಿಸಂನ ಸರ್ವಾಧಿಕಾರಿ ಧೋರಣೆ. ನಮ್ಮ ಸಂವಿಧಾನ ರಕ್ಷಿಸಿ ದೇಶ ರಕ್ಷಿಸೋಣ. ಬಿಜೆಪಿ ಅಧಿಕಾರದಲ್ಲಿದ್ದರೆ ಸಂವಿಧಾನ ರಕ್ಷಣೆ ಸಾಧ್ಯವಿಲ್ಲ. ದೇಶ್ ಬಚಾವೋ, ಬಿಜೆಪಿ ಹಠಾವೋ. ಬಲಪಂಥದ ವಿರುದ್ಧ ಹೋರಾಡಿ ದೇಶ ರಕ್ಷಿಸೋಣ ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News