ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ; ಹಿಂ.ವರ್ಗದ ವಿದ್ಯಾರ್ಥಿಗಳಿಗೆ ಬೆಂಗಳೂರು, ದಿಲ್ಲಿಯಲ್ಲಿ ಉಚಿತ ವಸತಿ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು, ಜು.21: ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ಸಿ) ಪರೀಕ್ಷೆಗೆ ಸಿದ್ಧತೆ ನಡೆಸುವ ಹಿಂ.ವರ್ಗದ ವಿದ್ಯಾರ್ಥಿಗಳಿಗೆ ಬೆಂಗಳೂರು ಹಾಗೂ ದಿಲ್ಲಿಯಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಗತ್ಯ ಕ್ರಮ ವಹಿಸಬೇಕು ಎಂದು ಹಿಂ.ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ವಿವಿಧ ನಿಗಮದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಅವರು, ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿ ಬೇಡಿಕೆ ಸಲ್ಲಿಸಿದ್ದಾರೆ ಎಂದರು.
ಗ್ರಾಮೀಣ ಭಾಗದ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸಂಬಂಧ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ವರದಿ ಸಿದ್ಧಪಡಿಸುವಂತೆ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶೇ.100ರಷ್ಟು ಗುರಿ ಸಾಧಿಸಿ: ಬಜೆಟ್‍ನಲ್ಲಿ ಇಲಾಖೆಗೆ ನೀಡಲಾಗಿರುವ ಹಣವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮಾರ್ಚ್ ವೇಳೆಗೆ ಶೇ.100ರಷ್ಟು ಗುರಿ ಸಾಧಿಸಬೇಕು. ಮಾರ್ಚ್ ತಿಂಗಳ ವರೆಗೆ ಹಣ ಉಳಿಸಿಕೊಂಡು ತರಾತುರಿಯಲ್ಲಿ ಹಣ ವ್ಯಯಿಸುವ ಕೆಲಸ ಆಗಬಾರದು. ಅವಧಿಗೂ ಮುನ್ನ ಬಳಕೆ ಮಾಡಿದರೆ ಮುಖ್ಯಮಂತ್ರಿ ಬಳಿ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಪ್ರಸಕ್ತ ಕ್ಷೇತ್ರದಲ್ಲಿ ಆಯಾ ಶಾಸಕರು ಕಳುಹಿಸುತ್ತಿರುವುದು ತಡವಾಗುತ್ತಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಈ ಕೂಡಲೇ ಶಾಸಕರಿಗೆ ನವೆಂಬರ್ ಒಳಗೆ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.
ಇಲಾಖೆಯಲ್ಲಿನ ಶೈಕ್ಷಣಿಕ ಸಾಲ, ಸ್ವಾವಲಂಬಿ ಸಾಲ, ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಪ್ರತಿಯೊಂದು ಯೋಜನೆಗಳು ಜನರಿಗೆ ಪರಿಣಾಮಕಾರಿಯಾಗಿ ತಲುಪಬೇಕು. ಇಲಾಖೆ ವ್ಯಾಪ್ತಿಗೆ ಬರುವ ನಿಗಮಗಳ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳು ಗಮನವಹಿಸಬೇಕು ಎಂದು ಅವರು ತಿಳಿಸಿದರು.