ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣ: ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್ ಮನೆ-ಕಚೇರಿ‌ ಮೇಲೆ ಈಡಿ ದಾಳಿ

Update: 2024-07-10 13:35 GMT

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಮನೆ, ಕಚೇರಿ, ಬ್ಯಾಂಕ್ ಸೇರಿದಂತೆ ಒಟ್ಟು 18 ಕಡೆ ಏಕಕಾಲಕ್ಕೆ ಜಾರಿ ನಿದೇರ್ಶನಾಲಯದ(ಈ.ಡಿ.) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜು.9ರ ಮಂಗಳವಾರವಷ್ಟೇ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮ ಮಂಡಳಿ ಅಧ್ಯಕ್ಷ ಬಸನಗೌಡ ದದ್ದಲ್ ಅವರು ಎಸ್‍ಐಟಿ ವಿಚಾರಣೆಗೆ ಹಾಜರಾಗಿದ್ದರು.

ಇದರ ಬೆನ್ನಲ್ಲೇ ಬುಧವಾರ ಸಿಆರ್‌ ಪಿಎಫ್ ಯೋಧರ ಸಹಕಾರದೊಂದಿಗೆ ಐದು ಈ.ಡಿ. ಅಧಿಕಾರಿಗಳ ತಂಡ ಪ್ರತ್ಯೇಕವಾಗಿ ಬೆಂಗಳೂರು, ಬಳ್ಳಾರಿ ಹಾಗೂ ರಾಯಚೂರಿನಲ್ಲಿರುವ ಬಿ.ನಾಗೇಂದ್ರ ಮತ್ತು ಬಸವನಗೌಡ ದದ್ದಲ್ ಮನೆ ಹಾಗೂ ಕಚೇರಿಗಳು, ಜೊತೆಗೆ ಬೆಂಗಳೂರಿನ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿ, ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಕಚೇರಿ ಹಾಗೂ ಹೈದರಾಬಾದ್ ಸೇರಿದಂತೆ ಒಟ್ಟು 18 ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳು, ಹಣದ ವಹಿವಾಟಿನ ಕಾಗದ ಪತ್ರಗಳು, ಮೊಬೈಲ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಈ.ಡಿ. ಮೂಲಗಳು ತಿಳಿಸಿವೆ.

ಬಿ.ನಾಗೇಂದ್ರ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ರಾಮ್ಕಿ ಉತ್ಸವ್ ಫ್ಲಾಟ್ ಜೊತೆಗೆ ಅವರ ಆಸ್ತಿಗಳಿರುವ ನಗರದ ಬಿಇಎಲ್ ರೋಡ್, ಮತ್ತಿಕೆರೆ ಹಾಗೂ ಮಲ್ಲೇಶ್ವರಂ ಸೇರಿದಂತೆ ನಾಲ್ಕು ಕಡೆ ಈ.ಡಿ. ದಾಳಿ ನಡೆಸಲಾಗಿದೆ. ಶಾಸಕ ಬಸವನಗೌಡ ದದ್ದಲ್ ಅವರ ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ರಾಮ್‍ರಹೀಮ್ ಕಾಲೋನಿಯ ಮನೆ ಹಾಗೂ ಬೆಂಗಳೂರಿನ ಯಲಹಂಕ, ಕೋರಮಂಗಲ, ಶಾಸಕರ ಭವನದಲ್ಲಿ ಅಧಿಕಾರಿಗಳು ದಾಳಿ ಮಾಡಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ ಎಂ.ಜಿ.ರಸ್ತೆ ಶಾಖೆಯ ಮುಖ್ಯಸ್ಥೆ ಸುಚಿಸಿತಾ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ. ಆದರೆ, ಅವರು ಮನೆಯಲ್ಲಿಲ್ಲದ ಕಾರಣ ಮನೆಗೆ ನೋಟಿಸ್ ಅಂಟಿಸಲಾಗಿದೆ. ಅಲ್ಲದೆ, ಅದೇ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ಆಗಿರುವ ದೀಪಾ.ಡಿ ಅವರ ಮನೆಯನ್ನು ಅಧಿಕಾರಿಗಳು ಸೀಲ್ ಮಾಡಲಾಗಿದೆ. ಬ್ಯಾಂಕ್‍ನ ಕ್ರೆಡಿಟ್ ಆಫೀಸರ್ ಕೃಷ್ಣಮೂರ್ತಿ ಸೇರಿ ಹಲವರ ಮನೆಗಳ ಮೇಲೂ ದಾಳಿ ಕೈಗೊಂಡು ವಿಚಾರಣೆ ನಡೆಸಲಾಗಿದೆ ಎಂದು ಈ.ಡಿ. ಮೂಲಗಳು ತಿಳಿಸಿವೆ.

ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜೆ.ಪದನಾಭ್, ಲೆಕ್ಕಪರಿಶೋಧಕ ಪರಶುರಾಮ್ ಮನೆ ಹಾಗೂ ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ್ ವರ್ಮಾ ಸೇರಿ ಹಲವರ ಮನೆ, ಕಚೇರಿಯಲ್ಲೂ ಈ.ಡಿ. ಅಧಿಕಾರಿಗಳು ಪರಿಶೀಲನೆ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಮೂವರು ವಶಕ್ಕೆ..!

ಮಾಜಿ ಸಚಿವ ಬಿ.ನಾಗೇಂದ್ರ ಅವರ ಪಿಎ ಹರೀಶ್ ಹಾಗೂ ಇಬ್ಬರು ಆಪ್ತ ಸಹಾಯಕರಾಗಿದ್ದ ವಿಜಯಕುಮಾರ್ ಮತ್ತು ಚೇತನ್ ಎಂಬುವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಏನಿದು ಹಗರಣ..!

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿತ್ತು. ಈ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲದಿನಗಳ ಹಿಂದೆಯಷ್ಟೇ ಶಿವಮೊಗ್ಗದ ತಮ್ಮ ನಿವಾಸದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿಟ್ಟ ಡೆತ್‍ನೋಟ್‍ನಲ್ಲಿ ಮೂವರು ಹೆಸರನ್ನು ಉಲ್ಲೇಖಿಸಲಾಗಿತ್ತು. ಇದರ ಬೆನ್ನಲ್ಲೇ ಬ್ಯಾಂಕ್‍ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಇಮೇಲ್, ಮೆಸೇಜ್ ಬಂದಿಲ್ಲ. ಈ ಕುರಿತು ಬ್ಯಾಂಕ್ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ನಿಗಮದ ಈ ಪ್ರಕರಣದ ತನಿಖೆಗೆ ರಾಜ್ಯ ಸರಕಾರ ಎಸ್‍ಐಟಿಗೆ ವಹಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News