ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹಳ ಅನುಕೂಲಕರ ವಾತಾವರಣ: ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಸೆ.8: ಶಿಕ್ಷಕರು ಮತ್ತು ನಾಡಿನ ಪದವೀಧರರು ನಾಡಿನ ಅಭಿವೃದ್ಧಿ ಪರವಾಗಿ ಇದ್ದಾರೆ. ಹೀಗಾಗಿ ಅವರೆಲ್ಲ ನಮ್ಮ ಪರವಾಗಿರುವುದರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಚುನಾವಣೆ ಸಂಬಂಧ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿಯಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಕಾರ್ಯಕ್ರಮ ಆರಂಭವಾಗಲಿದೆ. ನಾವು ವಿದ್ಯಾವಂತ ಯುವಕ, ಯುವತಿಯರಿಗೆ 24 ತಿಂಗಳ ಕಾಲ ಯುವನಿಧಿ ಕೊಡುವ ಜತೆಗೆ ಉದ್ಯೋಗ ಸೃಷ್ಟಿಗೆ ಹಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಟಿಕೆಟ್ ಆಕಾಂಕ್ಷಿಗಳು ಶಿಕ್ಷಕ ಸದಸ್ಯರು ಮತ್ತು ಪದವೀಧರ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದು ಅವರ ಮಾತು ಮತ್ತು ಬೇಡಿಕೆಗಳನ್ನು ಕೇಳಿಸಿಕೊಂಡು ನಮಗೆ ತಿಳಿಸಿ. ನಾಡಿನ ಅಭಿವೃದ್ಧಿ ಒಂದೆ ನಮ್ಮ ಗುರಿ. ಇದಕ್ಕಾಗಿ ಪಕ್ಷ ಮತ್ತು ಸರಕಾರ ಶ್ರಮಿಸಲಿದೆ. ಇದನ್ನು ಮತದಾರರಿಗೆ ಸರಿಯಾಗಿ ಅರ್ಥ ಮಾಡಿಸಿ ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಅವರು ಹಾರೈಸಿದರು.
ಟಿಕೆಟ್ ಆಕಾಂಕ್ಷಿಗಳು ಮತ್ತು ಎಲ್ಲ ಶಾಸಕರು ಮತ್ತು ಜಿಲ್ಲಾ ಪದಾಧಿಕಾರಿಗಳ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತೇವೆ. ಟಿಕೆಟ್ ಯಾರಿಗೆ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಸಿದ್ದರಾಮಯ್ಯ ಹೇಳಿದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಶಾಸಕ ಡಾ.ಅಜಯ್ ಸಿಂಗ್ ಉಪಸ್ಥಿತರಿದ್ದರು.