ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳ ಒಕ್ಕೂಟಕ್ಕೆ ಗೆಲುವು: ಸಿಎಂ ಸಿದ್ದರಾಮಯ್ಯ ವಿಶ್ವಾಸ
ಬೆಂಗಳೂರು, ಜು.17: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷಗಳು ಸೋಲನ್ನು ಅನುಭವಿಸಲಿದ್ದು, ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸಲಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ನಡೆಯುತ್ತಿರುವ ವಿಪಕ್ಷಗಳ ಒಕ್ಕೂಟದ ಎರಡನೆ ಸಭೆಯಾಗಿದ್ದು, ಸುಮಾರು 24 ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ಎಲ್ಲ ವಿಪಕ್ಷಗಳ ನಾಯಕರು ಇಂದು ಮತ್ತು ನಾಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವ ಕುರಿತು ಚರ್ಚೆ ನಡೆಸಲಿದ್ದಾರೆ ಎಂದರು.
ದೇಶವನ್ನು ಲೂಟಿ ಮಾಡಿದಂತಹ ಪಕ್ಷಗಳು ಇಂದು ಒಂದಾಗುತ್ತಿವೆ ಎಂಬ ಬಿಜೆಪಿ ಪಕ್ಷದ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈ ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದೆ ಬಿಜೆಪಿ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆ, ಬಡವರು, ರೈತರು, ದಲಿತರು ಇಂದು ಬದುಕಲು ಅಸಾಧ್ಯವಾದ ಪರಿಸ್ಥಿತಿ ಬಂದಿದೆ. ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುವಂತಾಗಿದೆ. ಇದು ಬಿಜೆಪಿಯ ಕೊಡುಗೆ ಎಂದರು.
ಮೋದಿಯನ್ನು ಎದುರಿಸಲು ಎಲ್ಲ ಪಕ್ಷಗಳು ಒಟ್ಟಾಗುತ್ತಿವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಮೋದಿಯನ್ನು ಸಮರ್ಥವಾಗಿ ಎದುರಿಸಲಾಗಿದೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮೋದಿ 28 ಕಡೆ ಪ್ರವಾಸ ಕೈಗೊಂಡಿದ್ದು, ಅವರು ಬಂದ ಕಡೆಗಳೆಲ್ಲಾ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕರ್ನಾಟಕದಿಂದಲೆ ಬಿಜೆಪಿಯ ಅವನತಿ ಪ್ರಾರಂಭವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಸ್ಪಷ್ಟವಾದ ಬಹುಮತ ದೊರೆಯಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ ತನ್ನ ಸಿದ್ಧಾಂತ ಬಲಿ ಕೊಡುತ್ತಿದೆ: ಸಿದ್ಧಾಂತವಿಲ್ಲದ ಪಕ್ಷಗಳು ಒಂದೆಡೆ ಸೇರುತ್ತಿರುವುದರಿಂದ, ನಾವು ಎನ್ಡಿಎ ಕಡೆ ಹೋದರೆ ತಪ್ಪಲ್ಲ, ಪಕ್ಷ ಉಳಿಸಿಕೊಳ್ಳುವುದು ಮುಖ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಉತ್ತರಿಸಿದ ಅವರು, ಜೆಡಿಎಸ್ಗೆ ಸಿದ್ಧಾಂತವೆ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯತೀತತೆ ಏನಾಯಿತು. ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಎಂದರ್ಥ ಎಂದರು.
ಮೈತ್ರಿ ಸರಕಾರ ರಚನೆ ಸಂದರ್ಭದಲ್ಲಿಯೂ 21 ಪಕ್ಷಗಳ ಮುಖಂಡರು ಬಂದರೂ ಪ್ರಯೋಜನವಾಗಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರೆನ್ನಲ್ಲಾ ಕರೆದಿದ್ದು ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅವರು ಆ ಸಂಬಂಧವನ್ನು ಮುಂದುವರೆಸಲಿಲ್ಲ ಎಂದರು.