ಸ್ಪೀಕರ್ ಸರ್, ಸಂವಿಧಾನದ ಆಶಯ ವಿರೋಧಿಸುವವರಿಂದ ಯಾವ ಮೌಲ್ಯಗಳ ತರಬೇತಿ ಕೊಡಿಸುತ್ತೀರಿ ?; ವಿಧಾನಸಭಾಧ್ಯಕ್ಷರಿಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ ಬಹಿರಂಗ ಪತ್ರ

Update: 2023-06-24 08:01 GMT

ಬೆಂಗಳೂರು, ಜೂನ್‌ 24: 16ನೇ ವಿಧಾನಸಭೆಗೆ ಮೊದಲ ಬಾರಿಗೆ ನೂತನವಾಗಿ ಆಯ್ಕೆಯಾದ 70 ಶಾಸಕರಿಗೆ 3 ದಿನಗಳ ಕಾಲ ಏರ್ಪಡಿಸಿರುವ ತರಬೇತಿ ಶಿಬಿರದಲ್ಲಿ ಭಾಗವಹಿಸಲಿರುವ ಕೆಲವು ಭಾಷಣಕಾರರ ಹಿನ್ನೆಲೆಯ ಬಗ್ಗೆ ಹಲವರು ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರಿಗೆ ಬಹಿರಂಗ ಪತ್ರ ಬರೆದಿರುವ ಶಿಕ್ಷಣ ತಜ್ಞ ನಿರಂಜನಾರಾಧ್ಯ. ವಿ.ಪಿ, 'ತಾವು ಸರಳ ಸಜ್ಜನ ಮೃದು ಸ್ವಭಾವದ ವ್ಯಕ್ತಿ . ತಾವು ಶಾಸಕರಾಗಿ ಮರು ಆಯ್ಕೆಗೊಂಡಾಗ ನಮಗೆಲ್ಲ ಸಂತೋಷವಾಗಿತ್ತು . ಕರೆ ಮಾಡಿ ಅಭಿನಂದಿಸಿದೆವು . ಸಭಾಧ್ಯಕ್ಷರಾಗಿ ಒಮ್ಮತದಿಂದ ಆಯ್ಕೆಯಾದಾಗ ಮತ್ತೊಮ್ಮೆ ಸಂತೋಷ ಪಟ್ಟವರಲ್ಲಿ ನಾನು ಒಬ್ಬ . ಕಾರಣ , ರಾಜಕಾರಣದಲ್ಲಿ ನಿಮ್ಮಂಥವರು ಅಪರೂಪ . ಸಭಾಧ್ಯಕ್ಷರಾಗಿ ಆಯ್ಕೆಯಾದಾಗ ತಮ್ಮ ಬಗ್ಗೆ ನಾವೆಲ್ಲರೂ ಬೇರೆಯೇ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು .ಆದರೆ, ತಾವು ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಆಯೋಜಿಸುವ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ನಾವು ತಮ್ಮ ಮೇಲೆ ಇಟ್ಟಿದ್ದ ಭರವಸೆಗಳನ್ನು ಹುಸಿಗೊಳಿಸಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರಂಜನಾರಾಧ್ಯ ಅವರ ಪತ್ರದ ಸಾರಾಂಶ ಹೀಗಿದೆ...

''ತರಬೇತಿ ಸ್ವಾಗತಾರ್ಹ . ಆದರೆ , ತರಬೇತಿ ನೀಡಲು ತಾವು (ಮಾಧ್ಯಮದಲ್ಲಿ ವರದಿಯಾದಂತೆ) ಆಯ್ಕೆ ಮಾಡಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಆ ಬಗ್ಗೆ ನಾಗರೀಕ ಸಮಾಜದಿಂದ ವಿರೋಧ ಬಂದಾಗ ತಾವು ಪ್ರತಿಕ್ರಿಯಿಸುತ್ತಿರುವ ರೀತಿ ಬೇಸರ ತರಿಸಿದೆ.ಹೊಸ ಶಾಸಕರಿಗೆ ತರಬೇತಿ ಸಂಬಂಧಿಸಿದಂತೆ ಒಂದೆರಡು ವಿಷಯ ಅವಲೋಕಿಸೋಣ. ಒಂದು , ಭಾರತದ ಸಂವಿಧಾನದ ಅನ್ವಯ ನಾವು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ ಅಂಗೀಕರಿಸಿ ಅದನ್ನು ಜಾರಿಗೊಳಿಸಲು ಒಪ್ಪಿದ್ದೇವೆ. ಇದನ್ನು ಕಾಯಾ ವಾಚಾ ಮನಸಾ ಜಾರಿಗೊಳಿಸಬೇಕಾದರೆ ನಮ್ಮ ಶಾಸಕಾಂಗದ ಹೊಸ ಸದಸ್ಯರಿಗೆ ಸಂವಿಧಾನದ ಭಾಗ ಗಿ ಮತ್ತು ಗಿI ರಲ್ಲಿರುವ ವಿಷಯಗಳನ್ನು ಸಂಪೂರ್ಣವಾಗಿಯಲ್ಲದಿದ್ದರೂ ಮುಖ್ಯ ಅಂಶಗಳನ್ನು ತಿಳಿಸಿಕೊಡಬೇಕಾಗುತ್ತದೆ. ಜೊತೆಗೆ , ನೀತಿ ನಿರೂಪಣೆ , ಕಾನೂನು ಮತ್ತು ಅವುಗಳ ಜಾರಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಜನಸೇವಕರಿಗೆ, ನೀತಿ - ಕಾನೂನುಗಳನ್ನು ರೂಪಿಸುವಾಗ ಭಾಗ Iಗಿ ರಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿಸ್ತೃತವಾಗಿ ತಿಳಿಸಿ ಕೊಡಬೇಕಾಗುತ್ತದೆ''

''ಜನಸೇವಕರಾದ ಇವರು ಸದಾ ಜನರ ಜೊತೆಗಿರುವಾಗ ಸಂವಿಧಾನದ III ನೇ ಭಾಗದಲ್ಲಿರುವ ಜನರ ಮೂಲಭೂತ ಹಕ್ಕುಗಳ್ಳನ್ನು ಎತ್ತಿಹಿಡಿದು , ಗೌರವಿಸಿ ಅವುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅವೆಲ್ಲವನ್ನು ಅವರು ರೂಪಿಸಬೇಕಾದ ನೀತಿ , ಕಾನೂನು ಹಾಗು ಕಾರ್ಯಕ್ರಮಗಳಲ್ಲಿ ಹೇಗೆ ಒಳಮಾಡಿಕೊಳ್ಳಬೇಕೆಂಬ ಅಂಶವನ್ನು ಕರಗತ ಮಾಡಿಸಬೇಕಿದೆ. ಜನರೊಂದಿಗೆ ಬೆರೆಯುವಾಗ, ಒಬ್ಬ ಜನ ಪ್ರತಿನಿಧಿಯಾಗಿ ಯಾವ ರೀತಿಯಲ್ಲಿ ತಮ್ಮ ಸಂವಿಧಾನ ಬದ್ಧ ಕರ್ತವ್ಯಗಳನ್ನು ನಿರ್ವಹಿಸಬೇಕೆಂಬುದನ್ನು ಮನಮುಟ್ಟುವಂತೆ ತಿಳಿಸಬೇಕಿದೆ. ಈ ಆದ್ಯ ಕರ್ತವ್ಯಗಳ ಅರಿವಿಲ್ಲದೆ , ಹಿಂದಿನ ಸರಕಾರದಲ್ಲಿ ಶಾಸಕರೊಬ್ಬರು , ಕಾಲೇಜು ಅಭಿವೃದ್ಧಿ ಮಂಡಳಿಯಲ್ಲಿ ಪ್ರಸ್ತಾಪಿಸಿದ ಅಂಶ ಹೇಗೆ ಇಡೀ ರಾಜ್ಯದಲ್ಲಿ ಸಾಮರಸ್ಯ ಹಾಗು ಭಾತೃತ್ವವನ್ನು ಹಾಳುಗೆಡವಿ ಸಾವಿರಾರು ಹೆಣ್ಣುಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ಕಸಿಯಿತು ಎಂಬುದು ಜನಮಾನಸದಲ್ಲಿ ಮರೆಯಾಗಿಲ್ಲ . ಈ ವಿಷಯ ನಮಗಿಂತಲೂ ಅದೇ ಜಿಲ್ಲೆಯವರಾದ ತಮಗೆ ಚೆನ್ನಾಗಿ ಗೊತ್ತು ''

''ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ , ಹೊಸ ಶಾಸಕರ ತರಬೇತಿಯ ಕೇಂದ್ರ ಬಿಂದು ಸಂವಿಧಾನವೇ ಹೊರತು ಪ್ರೇರಣೆ ,ಆಧ್ಯಾತ್ಮ , ಸತ್ಸಂಗ , ಒತ್ತಡ ನಿವಾರಣೆಯ ಕಾರ್ಯತಂತ್ರ, ಇತ್ಯಾದಿಗಳಂತೂ ಖಂಡಿತ ಅಲ್ಲ. ಎರಡು , ತಾವು ಒಂದು ಗುರುವಿನ ಜೊತೆ ನಿಕಟ ಸಂಬಂಧ ಹೊಂದಿರುವುದಾಗಿ ಮತ್ತು ಆಗಿಂದಾಗ್ಗೆ ಅಲ್ಲಿ ಭೇಟಿ ನೀಡುವುದಾಗಿ ಮಾಧ್ಯಮದಲ್ಲಿ ಹೇಳಿದ್ದೀರಿ . ಅದನ್ನು ನಾವು ಗೌರವಿಸುತ್ತೇವೆ . ಅದು ಪೂರ್ಣ ವೈಯುಕ್ತಿಕ ವಿಚಾರ. ಆದರೆ , ಅದನ್ನು ಉಪಯೋಗಿಸಿಕೊಂಡು ಅವರನ್ನು ತರಬೇತಿಗೆ ಆಹ್ವಾನಿಸಿರುವುದು ಸರಿಯೆನಿಸುವುದಿಲ್ಲ''

''ಇನ್ನು ಕೆಳಸ್ತರದ ಜನರಿಗೆ ಅವರದೇ ತೆರಿಗೆ ಹಣದಲ್ಲಿ ಒದಗಿಸುತ್ತಿರುವ ಜನ ಕಲ್ಯಾಣದ ( ಸಂವಿಧಾನದ ವಿಧಿ 41 , 46 ಮತ್ತು 47 ರ ಅನ್ವಯ ) ಕಾರ್ಯಕ್ರಮಗಳನ್ನು ನೇರವಾಗಿ ಅಪಹಾಸ್ಯ ಮಾಡುವು ಮೂಲಕ ಸಂವಿಧಾನ ಆಶಯಗಳನ್ನೇ ಹತ್ತಿಕ್ಕುವ ಧೋರಣೆ ಹೊಂದಿರುವ ವ್ಯಕ್ತಿಗಳಿಂದ ಸಂವಿಧಾನದ ಯಾವ ಮೌಲ್ಯಗಳ ತರಬೇತಿ ಒದಗಿಸುತ್ತೀರಿ! ನಾಡಿನ ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ನಮ್ಮ ಅಭಿಪ್ರಾಯ ತಿಳಿಸುವ ಕೆಲಸವನ್ನಷ್ಟೇ ನಾನು ಮತ್ತು ಅದೇ ರೀತಿಯಲ್ಲಿ ಯೋಚಿಸುವ ಸಮಾನ ಮನಸ್ಕರು ಮಾಡಿದ್ದೇವೆ . ಇದು ತಮ್ಮನ್ನು ವೈಯುಕ್ತಿಕವಾಗಿ ವಿರೋಧಿಸಲಾಗಲಿ ಅಥವಾ ಮುಜಗರಪಡಿಸಲಾಗಲಿ ಅಲ್ಲ . ಬದಲಿಗೆ ನಮಗೆ ತಮ್ಮ ಬಗ್ಗೆ ಇರುವ ಗೌರವ ಮತ್ತು ನಂಬಿಕೆಯಿಂದ ಮಾತ್ರ ಎಂಬುದನ್ನು ಮತ್ತೊಮ್ಮೆ ತಿಳಿಸಬಯಸುತ್ತೇವೆ''  ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News