ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೇರಿದ ಕಾಂಗ್ರೆಸ್ ಪಕ್ಷ ಹಗರಣಗಳಲ್ಲಿ ತೊಡಗಿಸಿಕೊಂಡಿದೆ : ವಿಜಯೇಂದ್ರ
ಬೆಂಗಳೂರು: ನಮ್ಮದು ವಿರೋಧ ಪಕ್ಷ. ರಾಜ್ಯದ ಜನರ ಪರವಾಗಿ ನಾವು ಕೇಳುವ ಪ್ರಶ್ನೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಉತ್ತರ ನೀಡಬೇಕು. ಅದರ ಬದಲಾಗಿ ನಮಗೇ ಪ್ರಶ್ನೆ ಹಾಕುತ್ತಿದ್ದು, ಇದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ಮೈಸೂರು ಚಲೋ ಪಾದಯಾತ್ರೆಯ ಎರಡನೇ ದಿನವಾದ ರವಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸದನದಲ್ಲೂ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇವತ್ತೂ ಉತ್ತರ ಸಿಕ್ಕಿಲ್ಲ. ಈ ಪಾದಯಾತ್ರೆ ಮೂಲಕ ಇವರಿಗೆ ಚಾಟಿ ಬೀಸುವ ಮತ್ತು ಬುದ್ಧಿ ಕಲಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಹಿರಿಯಕ್ಕನ ಚಾಳಿ ಮನೆಮಂದಿಗೆ: ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ದಿನಗಳು ಹತ್ತಿರ ಆಗುತ್ತಿವೆಯೇ ಎಂಬ ಪ್ರಶ್ನೆಗೆ ‘ನನಗೇನೂ ಇದರಲ್ಲಿ ಅನುಮಾನ ಇಲ್ಲ’ ಎಂದು ಉತ್ತರಿಸಿದರು. ಸಿದ್ದರಾಮಯ್ಯನವರು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳು, ತಮ್ಮ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲ ಎಂದು ಮೊಂಡುವಾದ ಮಾಡುತ್ತಿದ್ದರು. ಇವತ್ತು ಅವರು ಹಗರಣಗಳ ಸರಮಾಲೆಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ನಿನ್ನೆ ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹಿಂದಿನ ಕಾರಣ ರಾಜ್ಯದ ಜನತೆಗೆ ಗೊತ್ತಿದೆ. ರಾಜ್ಯದ ಆಡಳಿತ ಪಕ್ಷದ ಪರಿಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆ ಎಂಬಂತಾಗಿದೆ ಎಂದು ಟೀಕಿಸಿದರು.
ಹಗರಣಗಳಲ್ಲಿ ತೊಡಗಿಸಿಕೊಂಡಿದೆ: ಕರ್ನಾಟಕದಲ್ಲಿ ಸರಕಾರಿ ಅಧಿಕಾರಿಗಳು, ಗುತ್ತಿಗೆ ಹಣ ಸಿಗದೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಾಸಕರು ಕೇಳಿದ ಲಂಚ ಕೊಡಲಾಗದೆ ಪಿಎಸ್‌ಐ ಪರಶುರಾಮ್ ನಿನ್ನೆ ಸಾವನ್ನಪ್ಪಿದ್ದಾರೆ. ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಇಂದು ಹಗರಣಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಟೀಕಿಸಿದರು.