ಸಾಲಮನ್ನಾ, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲು ವಿಜಯೇಂದ್ರ ಆಗ್ರಹ

Update: 2023-12-13 18:38 GMT

ಬೆಳಗಾವಿ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ರಾಜ್ಯ ಸರಕಾರವು ರೈತರಿಗೆ 7 ಗಂಟೆಗಳ ಕಾಲ ತ್ರೀಫೇಸ್ ವಿದ್ಯುತ್ ನೀಡಬೇಕು, ಸಾಲಮನ್ನಾ ಮಾಡಬೇಕು ಹಾಗೂ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳಿಗೆ ಆದ್ಯತೆ ಮೇಲೆ ಅನುದಾನ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 456 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಕಾರವು ಸಮರೋಪಾದಿಯಲ್ಲಿ ಬರಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲಿದೆ ಎಂಬ ನಿರೀಕ್ಷೆಯನ್ನು ರೈತರು ಇಟ್ಟುಕೊಂಡಿದ್ದರು ಎಂದರು.

ರಾಜ್ಯದಲ್ಲಿ 60-70 ಲಕ್ಷ ಮೆಟ್ರಿಕ್ ಟನ್ ಭತ್ತ, 40-50 ಲಕ್ಷ ಮೆಟ್ರಿಕ್ ಟನ್ ಜೋಳ ಹಾಗೂ 10 ಲಕ್ಷ ಮೆಟ್ರಿಕ್ ಟನ್ ತೊಗರಿ ಬೆಳೆಯುತ್ತಾರೆ. ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬೋರ್ ವೆಲ್‍ಗಳನ್ನು ಆಧರಿಸಿ ಕೃಷಿ ಮಾಡುವಂತಾಗಿದೆ. ಆದರೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ರೈತರ ಸಾಲಮನ್ನಾ ಮಾಡಬೇಕು. ಸಾಲ ವಸೂಲಾತಿಯನ್ನು ನಿಲ್ಲಿಸಬೇಕು. ಹೊಸ ಸಾಲ ಸಿಗುವಂತೆ ಮಾಡಬೇಕು. ಈ ಸರಕಾರ ಕಣ್ಣಿದ್ದು ಕುರುಡರಂತೆ, ಕಿವಿ ಇದ್ದರೂ ಕಿವುಡರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ರಾಜ್ಯ ಸರಕಾರವು ಕೇಂದ್ರದ ಮೇಲೆ ಗೂಬೆ ಕೂರಿಸುವ ಬದಲು ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಸಂಕಷ್ಟದ ಪರಿಸ್ಥಿತಿಯಲ್ಲಿ ಪಶು ಆಹಾರದ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ. ರಾಜ್ಯದಲ್ಲಿ 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ, ಉತ್ಪಾದನೆ ಆಗುತ್ತಿರುವುದು 10-11 ಸಾವಿರ ಮೆಗಾವ್ಯಾಟ್ ಮಾತ್ರ. ಸುಮಾರು 4-5 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆಯಿದೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡುತ್ತಿದ್ದೇವೆ ಎಂಬ ಸರಕಾರದ ಆಶ್ವಾಸನೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ ಎಂದು ವಿಜಯೇಂದ್ರ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News