ಕುತೂಹಲಕ್ಕೆ ಕಾರಣವಾದ ವಿಜಯೇಂದ್ರ ದಿಲ್ಲಿ ಭೇಟಿ

Update: 2024-12-18 11:35 GMT

ಹೊಸದಿಲ್ಲಿ : ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ನೇತೃತ್ವದ ನಾಲ್ಕೈದು ಮಂದಿಯ ತಂಡ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಹಂತದ ಹೋರಾಟಕ್ಕೆ ಮುಂದಾಗಿರುವ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಧಾನಿ ಮೋದಿ ಭೇಟಿ ಮಾಡಿರುವುದು ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಕಲಾಪದಲ್ಲಿ ಪ್ರತಿಪಕ್ಷ ಬಿಜೆಪಿ, ಆಡಳಿತ ಪಕ್ಷದಲ್ಲಿನ ವೈಫಲ್ಯಗಳನ್ನು ಎತ್ತಿತೋರಿಸಬೇಕಿತ್ತು. ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಿಟ್ಟಿನಲ್ಲಿ ಚರ್ಚೆಗೆ ಒತ್ತು ನೀಡಬೇಕಿತ್ತು. ಆದರೆ, ತಮ್ಮ ನಡುವಿನ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ಭಿನ್ನಮತದ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ ಹೊಸದಿಲ್ಲಿಯಲ್ಲಿ ಪ್ರಧಾನಿ ಭೇಟಿ ಬಳಿಕ ಮಾತನಾಡಿದ ವಿಜಯೇಂದ್ರ, ‘ಪ್ರ್ರಧಾನಿ ಮೋದಿ ಅವರ ಭೇಟಿಯ ಅಪೂರ್ವ ಕ್ಷಣಗಳು ಕರ್ನಾಟಕ ರಾಜ್ಯದಲ್ಲಿ ಪಕ್ಷ ಬಲವರ್ಧನೆಗೆ ದೊರೆತ ಪ್ರೇರಣೆಯ ಕಿರಣಗಳು. ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೋದಿ ಜೀ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ಪ್ರಧಾನಿ ಮೋದಿ ಅವರ ಕಾರ್ಯಶೈಲಿ ನಮ್ಮಂಯಹ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆಯಾಗಿದೆ ಎಂದರು.

ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ತುಂಬಿದೆ. ಇಂದಿನ ಅವರ ಭೇಟಿಯ ಸಂದರ್ಭದ ಮಾತುಗಳು ಸಂಘಟನೆಯ ಬಲವೃದ್ಧಿಯ ಜೊತೆ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿತು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News