ಕೋರ್ಟ್ ಆದೇಶ ಉಲ್ಲಂಘನೆ | ಮುಡಾ ಆಯುಕ್ತರ ಬಂಧನಕ್ಕೆ ಕುಮಾರಸ್ವಾಮಿ ಆಗ್ರಹ

Update: 2024-10-02 12:52 GMT

ಬೆಂಗಳೂರು : ಸಾಕ್ಷ್ಯ ನಾಶ ಮಾಡಿ ಮುಡಾ ಹಗರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ನೇರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ನ್ಯಾಯಾಲಯಗಳ ಆದೇಶ ಉಲ್ಲಘಿಸಿ ಸಿಎಂ ಪತ್ನಿ ಅವರಿಂದ ನಿವೇಶನಗಳನ್ನು ವಾಪಸ್ ಪಡೆದಿರುವ ಮುಡಾ ಆಯುಕ್ತರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜೆಡಿಎಸ್ ಪಕ್ಷದ ಕಚೇರಿ ಬಳಿ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ʼಮುಡಾ ಹಗರಣವನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಲೋಕಾಯುಕ್ತ ಅಧಿಕಾರಿಗಳು ಹಾಗೂ ಮುಡಾ ಅಧಿಕಾರಿಗಳು ವ್ಯವಸ್ಥಿತವಾಗಿ ಶಾಮೀಲಾಗಿದ್ದಾರೆʼ ಎಂದು ಅವರು ಗಂಭೀರ ಆರೋಪ ಮಾಡಿದರು.

ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ 14 ನಿವೇಶನಗಳನ್ನು ವಾಪಸ್ ನೀಡಿರುವ ಕ್ರಮದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರು, ನಿವೇಶನಗಳನ್ನು ಹಿಂದಕ್ಕೆ ಪಡೆದಿರುವುದು ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆ ಮತ್ತು ನ್ಯಾಯಾಂಗ ನಿಂದನೆ. ಹೀಗಾಗಿ ಮುಡಾ ಆಯುಕ್ತರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

ನಿವೇಶನಗಳನ್ನು ಹಿಂದಕ್ಕೆ ಕೊಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವ ಅವರು ತಮ್ಮ ಅಧಿಕಾರದ ಪ್ರಭಾವದಿಂದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇದೆಲ್ಲವನ್ನೂ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಮುಡಾ ತನಿಖೆಯನ್ನು ಜಾರಿ ನಿರ್ದೇಶನಾಲಯ (ಈ.ಡಿ) ಕೈಗೆತ್ತಿಕೊಂಡು ಈಸಿಆರ್ ದಾಖಲು ಮಾಡಿದ ಕೂಡಲೇ ಬಿರುಸಿನ ಬೆಳವಣಿಗೆಗಳು ನಡೆದಿವೆ. ಮಂಗಳವಾರದ ದಿನ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಖುದ್ದು ಮುಡಾ ಕಚೇರಿಗೆ ಬಂದು ನಿವೇಶನ ವಾಪಸ್ ನೀಡುವುದಾಗಿ ಹೇಳಿದ್ದರು. ಈ ಹೇಳಿಕೆ ಹೊರಬಿದ್ದ ನಂತರ ಎಲ್ಲಾ ನಿವೇಶನಗಳು ಮುಡಾ ವಶಕ್ಕೆ ಹೋಗಿವೆ. ಹದಿನಾಲ್ಕು ನಿವೇಶನಗಳ ಕ್ರಯಪತ್ರಗಳು ರದ್ದಾಗಿವೆ ಎಂದು ಮುಡಾ ಆಯುಕ್ತರೇ ಹೇಳಿಕೆ ಕೊಟ್ಟಿದ್ದಾರೆ. ಇದೆಲ್ಲಾ ರಾಕೆಟ್ ವೇಗದಲ್ಲಿ ಆಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದೆಲ್ಲವೂ ಸಂಶಯಾಸ್ಪದವಾಗಿ ನಡೆದಿದೆ. ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಯಾಲಗಳ ಆದೇಶಗಳಿವೆ. ಹೀಗಿದ್ದೂ ಮುಡಾ ಆಯುಕ್ತರು ನಿವೇಶನಗಳನ್ನು ವಾಪಸ್ ಪಡೆಯುವ ನಿರ್ಧಾರ ಮಾಡುತ್ತಾರೆ. ಅವರಿಗೆ ಈ ಅಧಿಕಾರ ಇಲ್ಲ. ಇಲ್ಲಿ ಸಿಎಂ ಅಧಿಕಾರದ ದುರುಪಯೋಗ ಮಾಡಿದ್ದಾರೆ. ಯಾವ ಆಧಾರದ ಮೇಲೆ ವಾಪಸ್ ಪಡೆಯಲಾಗಿದೆ? ಮುಡಾ ಆಯುಕ್ತರು ತಮ್ಮ ಅಧಿಕಾರ ಮೀರಿ ವರ್ತಿಸಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News