ವಕ್ಫ್ ವಿಧೇಯಕ(ತಿದ್ದುಪಡಿ)-2024 | ಜಂಟಿ ಸಂಸದೀಯ ಸಮಿತಿಯಿಂದ ಅಭಿಪ್ರಾಯ ಸಂಗ್ರಹ

Update: 2024-10-01 13:45 GMT

ಬೆಂಗಳೂರು : ಕೇಂದ್ರ ಸರಕಾರದ ಉದ್ದೇಶಿತ ‘ವಕ್ಫ್ ವಿಧೇಯಕ(ತಿದ್ದುಪಡಿ)-2024’ಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲು ಬೆಂಗಳೂರಿಗೆ ಆಗಮಿಸಿರುವ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ ಎದುರು ರಾಜಕೀಯ, ಧಾರ್ಮಿಕ, ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ರಾಜ್ಯ ಸರಕಾರದ ಅಭಿಪ್ರಾಯವನ್ನು ಸಮಿತಿ ಎದುರು ಮಂಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ʼರಾಜ್ಯ ಸರಕಾರವು ಈ ಉದ್ದೇಶಿತ ವಕ್ಫ್ ತಿದ್ದುಪಡಿ ವಿಧೇಯಕವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆʼ ಎಂದರು.

ಕೇಂದ್ರ ಸರಕಾರವು ಸಂಸತ್ತಿನಲ್ಲಿ ಈ ವಿಧೇಯಕ ಮಂಡನೆ ಮಾಡುವ ಮುನ್ನ ಕೇಂದ್ರೀಯ ವಕ್ಫ್ ಕೌನ್ಸಿಲ್, ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ, ಮುಸ್ಲಿಮ್ ಧಾರ್ಮಿಕ ಮುಖಂಡರೊಂದಿಗೆ ಚರ್ಚೆ ನಡೆಸಬೇಕಿತ್ತು. ಆದರೆ, ಏಕಾಏಕಿ ವಿಧೇಯಕ ತಂದು ಸಂಸತ್ತಿನಲ್ಲಿ ಮಂಡನೆ ಮಾಡಿರುವುದು ಸರಿಯಲ್ಲ ಎಂದು ನಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ ಎಂದು ಅವರು ಹೇಳಿದರು.

ಭಾರತದಲ್ಲಿ ಮುಸ್ಲಿಮರು ಹಾಗೂ ಇತರ ಧರ್ಮೀಯರು ಅತ್ಯಂತ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ. ಈ ಕಾಯ್ದೆ ಜಾರಿಗೆ ಬಂದರೆ ಸಮಾಜದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುತ್ತವೆ. ಜನರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಈಗಿರುವ ವಾತಾವರಣವನ್ನು ಹಾಳು ಮಾಡಬೇಡಿ ಎಂದು ಸಮಿತಿಗೆ ನಾವು ತಿಳಿಸಿದ್ದೇವೆ ಎಂದು ನಸೀರ್ ಅಹ್ಮದ್ ತಿಳಿಸಿದರು.

ಕೇಂದ್ರ ಸರಕಾರ ಈ ವಿಧೇಯಕವನ್ನು ಹಿಂಪಡೆಯಬೇಕು. ನಮ್ಮ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿ ಈಗಾಗಲೇ ಈ ವಿಧೇಯಕವನ್ನು ಸಂಪೂರ್ಣವಾಗಿ ವಿರೋಧಿಸುವುದಾಗಿ ತಿಳಿಸಿದ್ದಾರೆ. ವಕ್ಫ್ ರಾಜ್ಯದ ವಿಷಯ. ಅದನ್ನು ನಾವು ನಮ್ಮದೇ ಆದ ರೀತಿಯಲ್ಲಿ ನಿರ್ವಹಣೆ ಮಾಡುತ್ತೇವೆ ಎಂದು ತಿಳಿಸಿದ್ದೇವೆ. ಅಲ್ಲದೇ, ನಮ್ಮ ಆಕ್ಷೇಪಣೆಗಳ ವಿವರವನ್ನು ಸಮಿತಿಗೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸರಕಾರವು ಒಂದು ಸಂಚಿನ ರೀತಿಯಲ್ಲಿ ಈ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದ್ದಾರೆ. ಜಂಟಿ ಸಂಸದೀಯ ಸಮಿತಿ ಈವರೆಗೆ ಯಾರನ್ನೆಲ್ಲ ಭೇಟಿ ಮಾಡಿದೆಯೋ ಅವರೆಲ್ಲರೂ ಕೇಂದ್ರ ಸರಕಾರದ ಈ ಕ್ರಮವನ್ನು ತಿರಸ್ಕರಿಸಿದ್ದಾರೆ. ಆದರೂ, ಬಿಜೆಪಿಯವರು ಸಂಸತ್ತಿನಲ್ಲಿ ಕಾಯ್ದೆಗೆ ಅನುಮೋದನೆ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಸಂಚುಗಳಿಗೆ ನಾವು ತಿರುಗೇಟು ನೀಡುತ್ತೇವೆ ಎಂದು ನಸೀರ್ ಅಹ್ಮದ್ ತಿಳಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ನಮ್ಮ ಅಹವಾಲುಗಳನ್ನು ಕೇಳಲು ಜಂಟಿ ಸಂಸದೀಯ ಸಮಿತಿ ಸಿದ್ಧವಿಲ್ಲ. ಅವರು ಮೊದಲೆ ಸಿದ್ಧವಾಗಿ ಬಂದಿದ್ದಾರೆ. ವಕ್ಫ್ ಆಸ್ತಿಗಳು ವಕ್ಫ್ ಬೋರ್ಡ್‍ಗೆ ಸೇರಿದ್ದಲ್ಲ. ಮಸೀದಿಗಳು, ದರ್ಗಾ, ಖಬರಸ್ಥಾನ್‍ಗಳು ಆಯಾ ಸಂಸ್ಥೆಗಳ ಆಸ್ತಿಗಳಾಗಿರುತ್ತವೆ. ವಕ್ಫ್ ಬೋರ್ಡ್ ಕೇವಲ ಮೇಲುಸ್ತುವಾರಿ ಮಾತ್ರ ವಹಿಸುತ್ತದೆ ಎಂದು ಗಮನ ಸೆಳೆದಿದ್ದೇವೆ ಎಂದು ಅವರು ಹೇಳಿದರು.

ಜಂಟಿ ಸಂಸದೀಯ ಸಮಿತಿಗೆ ವಿವಿಧ ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರ ನಿಯೋಗವು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿತು. ಈ ಸಂದರ್ಭದಲ್ಲಿ ಜಂಟಿ ಸಂಸದೀಯ ಸಮಿತಿಯ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News