ಕಾವೇರಿ ವಿವಾದ | ಸಂಕಷ್ಟದ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಮನಸ್ಥಿತಿ ನಮ್ಮದಲ್ಲ: ಬಸವರಾಜ ಬೊಮ್ಮಾಯಿ

Update: 2023-10-02 14:30 GMT

ಮಂಡ್ಯ, ಅ.2: ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ರಾಜ್ಯ ಸರಕಾರ ಎಲ್ಲರೊಂದಿಗೆ ಚರ್ಚಿಸಿ ಸರ್ವ ಸಮ್ಮತವಾದ ಸಂಕಷ್ಟ ಸೂತ್ರ ಸಿದ್ದಪಡಿಸಿ ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಡೆಸುತ್ತಿರುವ ಧರಣಿಯಲ್ಲಿ ಸೋಮವಾರ ನಿರಂತರ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ನ್ಯಾಯ ಪಡೆಯಲು ಕರ್ನಾಟಕ ಸಂಕಷ್ಟ ಸೂತ್ರ ಸಿದ್ಧಪಡಿಸಿ ರಾಜ್ಯದ ನಿಲುವು ಸ್ಪಷ್ಟಪಡಿಸಬೇಕು ಎಂದರು.

ಸಂಕಷ್ಟ ಸೂತ್ರ ಸಿದ್ದಪಡಿಸಿ ಕಾವೇರಿ ಜಲ ನಿಯಂತ್ರಣ ಸಮಿತಿ, ನಿರ್ವಹಣಾ ಪ್ರಾಧಿಕಾರ ಹಾಗು ಸುಪ್ರೀಂ ಕೋರ್ಟ್‍ನಲ್ಲಿ ಸಮರ್ಥವಾದ ಮಂಡಿಸಿ ನ್ಯಾಯ ಪಡೆಯಬೇಕಾಗಿದೆ. ಒಂದು ವೇಳೆ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ನಿರ್ದೇಶನ ಮಾಡಿದರೆ ಸಂಕಷ್ಟ ಸೂತ್ರ ರೂಪಿಸಲು ನಾವೆಲ್ಲರೂ ಸೇರಿ ಒತ್ತಡ ಹಾಕೋಣ ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿಯವರಿಗೆ ಈ ಹಿಂದೆ ಎಲ್ಲ ರೀತಿಯ ಅಧಿಕಾರ ಇತ್ತು. ಆದರೆ, ಪ್ರಾಧಿಕಾರ ರಚನೆಯಾದ ನಂತರ ಅವರು ನೀರು ಬಿಡಿ, ಬಿಡಬೇಡಿ ಎಂದು ಆದೇಶ ಮಾಡುವ ಅಧಿಕಾರ ಇಲ್ಲ. ಹಾಗಾಗಿ ಪ್ರಾಧಿಕಾರ ಮತ್ತು ನ್ಯಾಯಾಲಯದಲ್ಲಿ ಕರ್ನಾಟಕದ ವಾಸ್ತವಾಂಶ ಮನವರಕೆ ಮಾಡಿಕೊಡಬೇಕಾಗಿದೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಗೆ ದಶಕಗಳ ಕಾಲದಿಂದಲೂ ಒತ್ತಡ ಇದ್ದು, ತಮಿಳುನಾಡು ವಿರೋಧಿಸುತ್ತಾ ಬಂದಿದೆ. ಇದೀಗ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಡಿಪಿಆರ್‍ಗೆ ಒಪ್ಪಿಗೆ ಸೂಚಿಸಿದೆ. ಯೋಜನೆ ಜಾರಿ ಸುಲಭವಲ್ಲ. ರಾಜ್ಯದ ಹಿತ ದೃಷ್ಟಿಯಿಂದ ನಾವೆಲ್ಲರೂ ಒಗ್ಗೂಡಿ ಮೇಕೆದಾಟು ಯೋಜನೆಗೆ ಬೆಂಬಲ ನೀಡುತ್ತೇವೆ ಎಂದು ಅವರು ಭರವಸೆ ನೀಡಿದರು.

ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‍ಗೆ ರಾಜ್ಯ ಸರಕಾರ ವಾಸ್ತವ ಪರಿಸ್ಥಿತಿ ಮನದಟ್ಟು ಮಾಡಲು ವಿಫಲವಾಗಿದೆ. ದುಡಿಕಿನ ನಿರ್ಧಾರ ತೆಗೆದುಕೊಂಡು ತಮಿಳುನಾಡಿಗೆ ನೀರು ಹರಿಸಿದೆ. ಮೊದಲೇ ಸುಪ್ರೀಂ ಕೋರ್ಟ್ ಹೋಗಿದ್ದರೆ ನೀರು ಉಳಿಯುತ್ತಿತ್ತು ಎಂದು ಅವರು ಆರೋಪಿಸಿದರು.

ಸಂಕಷ್ಟದ ಸಮಯದಲ್ಲಿ ಇಕ್ಕಟ್ಟಿಗೆ ಸಿಲುಕಿಸುವ ಮನಸ್ಥಿತಿ ನಮ್ಮದಲ್ಲ. ರಾಜ್ಯ ಸರಕಾರದ ಮೇಲೆ ನಿರಂತರ ಒತ್ತಡ ಇರಲಿ ಎಂಬ ಹಿನ್ನಲೆಯಲ್ಲಿ ಹೋರಾಟ ಮಾಡುತ್ತಿದ್ದೇವೆ, ರೈತರ ಹಿತ ಕಾಪಾಡುವ ದೃಢ ನಿಲುವಿಗೆ ನಮ್ಮ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮಾಜಿ ಸಚಿವ ಆರ್.ಅಶೋಕ್, ಶಾಸಕ ರವಿ ಸುಬ್ರಮಣ್ಯ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ, ಇತರ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News