5 ವರ್ಷ ನಮ್ಮದೇ ಸರಕಾರ ಇರುತ್ತದೆ; ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ: ಸಿದ್ದರಾಮಯ್ಯ
ಹೊಸಪೇಟೆ: ʼʼಐದು ವರ್ಷ ನಮ್ಮದೇ ಸರಕಾರ ಇರುತ್ತದೆ. ನಾನು ಈಗ ಮುಖ್ಯಮಂತ್ರಿಯಾಗಿದ್ದೇನೆ. ಐದು ವರ್ಷ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು (ಗುರುವಾರ) ಹೊಸಪೇಟೆಯ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ʼʼನಮ್ಮದು ರಾಷ್ಟ್ರೀಯ ಪಕ್ಷ. ಏನೇ ತೀರ್ಮಾನವಾದರು ಅದು ಹೈಕಮಾಂಡ್ ಜೊತೆ ಚರ್ಚೆ ಮಾಡಿಯೇ ಆಗೋದು. ಡಿಸಿಎಂ ವಿಚಾರ ತೀರ್ಮಾನ ಮಾಡೋದು ಕೂಡ ಹೈಕಮಾಂಡ್ʼʼ ಎಂದು ಸ್ಪಷ್ಟಪಡಿಸಿದರು.
ʼʼರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿ 136 ಸ್ಥಾನ ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ನಾವೇ ಆಡಳಿತ ಮಾಡುತ್ತೇವೆʼʼ ಎಂದು ಸಿದ್ದರಾಮಯ್ಯ ಹೇಳಿದರು.
ʼʼಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮʼʼ
ಗಣಿಗಾರಿಕೆಗೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ,ʼʼ ರಾಜ್ಯ ಸರಕಾರ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತದೆ. ಯಾವುದೇ ವರ್ಗದ ಗಣಿಗಾರಿಕೆ ಕಾನೂನುಬದ್ಧವಾಗಿ ಪರವನಾಗಿ ತೆಗೆದುಕೊಂಡಲ್ಲಿ, ಎಲ್ಲ ಸಂಬಂಧಪಟ್ಟ ಇಲಾಖೆಗಳಿಂದ ಸಂಪೂರ್ಣ ಸಹಕಾರ ದೊರೆಯಲಿದೆʼʼ ಎಂದರು.
ʼಅರಣ್ಯ ಇಲಾಖೆಯೊಂದಿಗೆ ಈ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗಿದ್ದು, ಎ,ಬಿ, ಸಿ ಅಥವಾ ಯಾವುದೇ ವರ್ಗದ ಗಣಿಗಾರಿಕೆಗೆ ತೊಂದರೆ ನೀಡದಂತೆ ಸೂಕ್ತ ನಿರ್ದೇಶನ ನೀಡಲಾಗಿದೆ. ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಪರ್ಯಾಯ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ. ನಾವು ಹಿಂದೆ ಅಕ್ರಮ ಗಣಿಗಾರಿಕೆ ಬಗ್ಗೆ ಹೋರಾಟ ನಡೆಸಿದ್ದೆವು. ಅಕ್ರಮ ಗಣಿಗಾರಿಕೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆʼ ಎಂದು ಸಿದ್ದರಾಮಯ್ಯ ತಿಳಿಸಿದರು.