"ಬಿಜೆಪಿ ಸಂಸದರು ಬರ ನಿರ್ವಹಣೆಗಾಗಿ ಮಾಡಿದ ಕೆಲಸವೇನು?"

Update: 2024-03-08 14:49 GMT

ಬೆಂಗಳೂರು: ಬಿಜೆಪಿಯ 25 ಸಂಸದರು ಬರ ನಿರ್ವಹಣೆಗೆ ಮಾಡಿದ ಕೆಲಸವೇನು? ಎಂದು ಸಾಕ್ಷಿ ಸಮೇತ ಉತ್ತರಿಸಿದರೆ ರಾಜ್ಯ ಬಿಜೆಪಿಯ ಐಟಿ ಸೆಲ್‍ಗೆ ಸೂಕ್ತ ಬಹುಮಾನ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

‘ನೀರಿಲ್ಲ, ನೀರಿಲ್ಲ ರಾಜಧಾನಿ ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಕುಡಿಯಲು ನೀರಿಲ್ಲ’ ಎಂದು ಬಿಜೆಪಿ ಮಾಡಿರುವ ಟ್ವೀಟ್‍ಗೆ ತಿರುಗೇಟು ನೀಡಿರುವ ಕಾಂಗ್ರೆಸ್, ರಾಜ್ಯ ಭೀಕರ ಬರ ಎದುರಿಸುತ್ತಿದೆ, ನೈಸರ್ಗಿಕ ಅಸಮತೋಲನದಿಂದಾಗಿ ನೀರಿಗೆ ಕೊರತೆ ಎದುರಾಗಿದೆ. ನಮ್ಮ ಸರಕಾರ ನೀರಿನ ಕೊರತೆ ನೀಗಿಸಲು ಕ್ರಮ ಕೈಗೊಂಡಿದೆ, ಟ್ಯಾಂಕರ್ ಗಳ ಸುಲಿಗೆಗೆ ಕಡಿವಾಣ ಹಾಕಿದೆ ಎಂದು ತಿಳಿಸಿದೆ.

ಇದೆಲ್ಲದರ ನಡುವೆ, ಕನ್ನಡಿಗರ ತೆರಿಗೆ ಸುಲಿಗೆ ಮಾಡುವ ಕೇಂದ್ರ ಸರಕಾರ ಬರ ಎದುರಿಸುತ್ತಿರುವ ರಾಜ್ಯಕ್ಕೆ ನೀಡಿದ ನೆರವು ಏನು? ಬಿಜೆಪಿಯ 25 ಸಂಸದರು ಬರ ನಿರ್ವಹಣೆಗೆ ಮಾಡಿದ ಕೆಲಸವೇನು? ಸಾಕ್ಷಿ ಸಮೇತ ಉತ್ತರಿಸಿದರೆ ರಾಜ್ಯ ಬಿಜೆಪಿಯ ಐಟಿ ಸೆಲ್ ಗೆ ಸೂಕ್ತ ಬಹುಮಾನ ನೀಡುತ್ತೇವೆ ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿ ಟ್ವೀಟ್‍ನಲ್ಲಿ ಏನಿದೆ?: ನೀರಿಲ್ಲ, ನೀರಿಲ್ಲ ರಾಜಧಾನಿ ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಕುಡಿಯಲು ನೀರಿಲ್ಲ. ಸಿಎಂ ಸಿದ್ದರಾಮಯ್ಯ ಅವರ ಸ್ಲೀಪಿಂಗ್ ಸರಕಾರ ಬಿಸ್ಲೇರಿ ನೀರು ಕುಡಿದು ಮಲಗುತ್ತಿದೆ. ಕೈ ತೊಳೆದುಕೊಳ್ಳಲು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದೆ. ಆದರೆ, ಜನರಿಗೆ ಮಾತ್ರ ಕುಡಿಯಲು ಹನಿ ನೀರಿಗೂ ಹಾಹಾಕಾರ.

12 ದಿನಕ್ಕೊಮ್ಮೆ ನೀರು ಬರುತ್ತಿದೆ. ಟ್ಯಾಂಕರ್ ನೀರು ಬೇಕೆಂದರೆ ದುಬಾರಿ ಬೆಲೆ ನೀಡಬೇಕು. ಡಬಲ್ ಬೆಲೆ ಕೊಟ್ಟರೂ ನೀರು ಸಿಗುತ್ತಿಲ್ಲ. ಬ್ರ್ಯಾಂಡ್ ಬೆಂಗಳೂರನ್ನು ಟ್ರಬಲ್ ಬೆಂಗಳೂರು ಮಾಡಿದ್ದೇ ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಸಾಧನೆ ಎಂದು ಬಿಜೆಪಿ ಟೀಕಿಸಿದೆ.‌

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News