ಬರದ ಸಂದರ್ಭದಲ್ಲಿ ಐಷಾರಾಮಿ ವಿಮಾನ ಪ್ರಯಾಣದ ಅಗತ್ಯವೇನು?: ವಿಪಕ್ಷ ನಾಯಕ ಆರ್.ಅಶೋಕ್

Update: 2023-12-22 14:45 GMT

ಬೆಂಗಳೂರು: ‘ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಇದ್ದರೂ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಝಮೀರ್ ಅಹ್ಮದ್ ಖಾನ್ ಐಷಾರಾಮಿ ಪ್ರಯಾಣ ಮಾಡಿದ್ದು ಎಷ್ಟು ಸರಿ? ಎಂದು ವಿರೋಧ ನಾಯಕ ಆರ್.ಅಶೋಕ್  ಪ್ರಶ್ನಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬರದಿಂದಾಗಿ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದು, ಲಕ್ಷಾಂತರ ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ. ಬೇರೆ ರಾಜ್ಯಗಳಿಗೆ ರೈತರು ಗೂಳೆ ಹೋಗುವ ಸ್ಥಿತಿ ಇದೆ. ಆದರೆ, ಸಿಎಂ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ದೌಲತ್ತು ಪ್ರದರ್ಶಿಸುವ ಅವಶ್ಯಕತೆ ಇತ್ತೇ?’ ಎಂದು ಕೇಳಿದರು.

ಕಾಂಗ್ರೆಸ್ ಪಕ್ಷದ ಬಿ.ಆರ್.ಪಾಟೀಲ್ ಒಬ್ಬರು ಮಾತ್ರ ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಶಾಸಕ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಚಿವರ ಮುಂದೆಯೇ ಹೇಳಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಕಲ್ಲು ಹಾಕಿಲ್ಲ. ನಮ್ಮನ್ನು ಅಯ್ಕೆ ಮಾಡಿ ಕಳಿಸಿದ ಜನ ಛೀಮಾರಿ ಹಾಕ್ತಿದ್ದಾರೆಂದು ಬಿ.ಆರ್.ಪಾಟೀಲ್ ಹೇಳಿದ್ದಾರೆ. ಆದರೆ, ಈ ಸರಕಾರ ರಾಜ್ಯದ ಆರೂವರೆ ಕೋಟಿ ಜನರ ಮೇಲೆ ಕಲ್ಲು ಹಾಕಿದ್ದಾರೆ ಎಂದು ಆರ್.ಅಶೋಕ್ ಟೀಕಿಸಿದರು.

‘ನಿನ್ನೆಯಷ್ಟೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನನಗೆ ಫೋನ್ ಮಾಡಿ ಪ್ರಧಾನಿ ಭೇಟಿ ಬಗ್ಗೆ ಹೇಳಿದರು. ಜೆಡಿಎಸ್-ಬಿಜೆಪಿ ಮೈತ್ರಿ ಪಾಸಿಟಿವ್ ಆಗುವ ಸಂಚಲನ ಮೂಡಿಸಿದೆ. ಈ ಭೇಟಿ ಸ್ಫೂರ್ತಿದಾಯಕ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಾವು ಎಲ್ಲ ಸ್ಥಾನಗಳನ್ನೂ ಗೆಲ್ಲುತ್ತೇವೆ’ ಎಂದು ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News