ಬಿಜೆಪಿ ಕಚೇರಿಗೆ ಯಾವ ಮುಖ ಇಟ್ಟುಕೊಂಡು ಹೋಗಲಿ...: ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರಶ್ನೆ
ಬೆಂಗಳೂರು, ಆ. 31: ‘ನನಗೆ ಶೋಕಾಸ್ ನೋಟಿಸ್ ನೀಡಿದ್ದು, ನಾನು ಯಾವ ಮುಖ ಇಟ್ಟುಕೊಂಡು ನಾನು ಬಿಜೆಪಿ ಕಚೇರಿಗೆ ಹೋಗಲಿ, ನೋಟಿಸ್ ಹಿಂಪಡೆಯುವವರೆಗೂ ನಾನು ಬಿಜೆಪಿ ಕಚೇರಿಗೆ ಭೇಟಿ ನೀಡುವುದಿಲ್ಲ’ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನನಗೆ ಶೋಕಾಸ್ ನೋಟಿಸ್ ನೀಡಿದ್ದು, ಅದನ್ನು ಹಿಂಪಡೆಯುವವರೆಗೆ ಬಿಜೆಪಿ ಸಭೆಗೆ ಹೋಗುವುದಿಲ್ಲ. ಅಲ್ಲದೆ, ಅವರ ನೋಟಿಸ್‍ಗೆ ಉತ್ತರವನ್ನು ನೀಡುವುದಿಲ್ಲ. ಬೇಷರತ್ ಆಗಿ ನೋಟಿಸ್ ವಾಪಸ್ ಪಡೆಯಬೇಕು. ಇಲ್ಲವಾದರೆ ನಾನು ಯಾವ ಮುಖ ಹೊತ್ತು ಪಕ್ಷದ ಕಚೇರಿಗೆ ಹೋಗಲಿ’ ಎಂದು ಪ್ರಶ್ನಿಸಿದರು.
‘ವಿಧಾನಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡ ಪರಿಣಾಮ ಪಕ್ಷಕ್ಕೆ ಸೋಲು ಆಯಿತು. ಅಲ್ಲದೆ, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಹೀಗಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ’ ಎಂದ ಅವರು, ‘ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಪಕ್ಷದಲ್ಲೇ ಇದ್ದೇನೆ ನಾನು ಯಾವುದನ್ನೂ ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ’ ಎಂದು ನುಡಿದರು.
‘ನಾನು ನೇರವಾಗಿ ಮಾತನಾಡಿದ್ದೇನೆ, ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಪ್ರಧಾನಿ ಮೋದಿ, ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತನಾಡಿಲ್ಲಾ. ನಾನು ಮಾತನಾಡಿರುವುದು ಕೆಲ ವ್ಯಕ್ತಿಗಳ ದೌರ್ಬಲ್ಯದ ಬಗ್ಗೆ, ಅದನ್ನ ನೇರವಾಗಿ ಖಂಡಿಸಿದ್ದೇನೆ ಎಂದು ಅವರು ಸ್ಪಷ್ಟಣೆ ನೀಡಿದರು.