ವಚನ ಪರಿಪಾಲನೆ ತಿಳಿಯದ ‘ಮೋದಿ ಯಾವ ಸೀಮೆಯ ರಾಮಭಕ್ತ?’: ಸಿಎಂ ಸಿದ್ದರಾಮಯ್ಯ

Update: 2024-01-22 14:02 GMT

ಬೆಂಗಳೂರು: ವಚನ ಪರಿಪಾಲನೆ ಎಂದರೇನು ಎಂಬುದೇ ತಿಳಿಯದ ಪ್ರಧಾನಿ ಮೋದಿ ಯಾವ ಸೀಮೆಯ ರಾಮಭಕ್ತ? ಮತ್ತೊಮ್ಮೆ ಹೇಳುತ್ತೇನೆ, ಅಧಿಕಾರದಲ್ಲಿರುವವರಿಂದ ರಾಮ ನಿರೀಕ್ಷಿಸುವುದು ಶಾಂತಿ, ನೆಮ್ಮದಿ, ಸಹಬಾಳ್ವೆಯ ರಾಮರಾಜ್ಯದ ನಿರ್ಮಾಣವನ್ನು ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಅವರು, "ಪ್ರಧಾನಿ ಮೋದಿ, ನೀವು ನಿಜವಾದ ರಾಮಭಕ್ತರೇ ಅಗಿದ್ದರೆ ಚುನಾವಣೆಯ ವೇಳೆ ನಿಮ್ಮ ಪ್ರಣಾಳಿಕೆಯ ಮೂಲಕ ಈ ದೇಶದ ಜನತೆಗೆ ನೀಡಿದ್ದ ವಾಗ್ದಾನದಲ್ಲಿ ಎಷ್ಟು ವಾಗ್ದಾನಗಳನ್ನು ಈಡೇರಿಸಿದ್ದೀರಿ? ಎಷ್ಟನ್ನು ಈಡೇರಿಸಬೇಕಿದೆ ಎನ್ನುವುದನ್ನು ಅಯೋಧ್ಯೆಯಲ್ಲಿ ತಾವು ಇಂದು ಉದ್ಘಾಟಿಸುತ್ತಿರುವ ರಾಮಮಂದಿರದಲ್ಲಿ ನಿಂತು ಪ್ರಮಾಣ ಮಾಡಿ ಹೇಳಿ" ಎಂದು ಸವಾಲು ಹಾಕಿದ್ದಾರೆ.

ನಿಮಗೆ ಆ ಧೈರ್ಯವಿಲ್ಲ, ಅದು ಬರುವುದೂ ಇಲ್ಲ. ಏಕೆಂದರೆ ರಾಮ, ನಿಮಗೆ ಚುನಾವಣಾ ಅಸ್ತ್ರ ಮಾತ್ರ. ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ನೀಡಿದ್ದಿರಿ. ಆದರೆ, ಇದಕ್ಕಾಗಿ ಏನು ಮಾಡಿದ್ದೀರಿ? ರೈತರ ಆದಾಯ ದ್ವಿಗುಣಗೊಳಿಸುವುದಿರಲಿ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಬಿಡಿಗಾಸು ಬರ ಪರಿಹಾರವನ್ನೂ ನೀವು ನೀಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅದೇ ರೀತಿ, ಒಕ್ಕೂಟ ವ್ಯವಸ್ಥೆಯಲ್ಲಿರುವ ಎಲ್ಲ ರಾಜ್ಯಗಳ ಸಶಕ್ತೀಕರಣಕ್ಕಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ನಿರ್ಮಾಣದ ಬಗ್ಗೆ ಭರವಸೆ ನೀಡಿದ್ದಿರಿ. ವಿಪರ್ಯಾಸವೆಂದರೆ, ಇಂದು ರಾಜ್ಯಗಳಿಗೆ ದಕ್ಕಬೇಕಾದ ಅವುಗಳ ನ್ಯಾಯಯುತ ಪಾಲನ್ನು ಕೂಡ ಕಸಿದುಕೊಂಡಿದ್ದೀರಿ. ಇದರೊಟ್ಟಿಗೆ ಕುತಂತ್ರದಿಂದ ಸೆಸ್, ಸರ್ಚಾರ್ಜ್‍ಗಳನ್ನು ಹೆಚ್ಚಿಸಿದ್ದೀರಿ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರೇ, ದೇಶದ ಭದ್ರತೆಯ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಪುಂಖಾನುಪುಂಖ ಆಶ್ವಾಸನೆಗಳನ್ನು ಕೊಟ್ಟಿದ್ದಿರಿ. ಆದರೆ, ಗಡಿಯೊಳಗೆ ಅತಿಕ್ರಮಣ ಮಾಡಿ ಅಕ್ರಮ ಸೇನಾ ನಿರ್ಮಾಣ ಚಟುವಟಿಕೆ ಕೈಗೊಂಡಿರುವ ಚೀನಾವನ್ನು ಹಿಂದಕ್ಕೆ ಕಳುಹಿಸಲಾಗದೆ ಚೀನಾ ನಮ್ಮ ಗಡಿಯನ್ನು ಪ್ರವೇಶಿಸಿಯೇ ಇಲ್ಲ ಎನ್ನುವ ಹೇಳಿಕೆ ನೀಡಿ ಬಿಟ್ಟಿರಿ ಎಂದು ಅವರು ಟೀಕಿಸಿದ್ದಾರೆ.

ಆ ಮೂಲಕ ಮುಂದಕ್ಕೆ ಇದ್ದ ಗಡಿ ರೇಖೆಯನ್ನು ಹಿಂದಕ್ಕೆ ಎಳೆದ ಶೂರ ನೀವು. ಯಾವ ಗಡಿ ರೇಖೆಯನ್ನು ಕಾಯುವುದಕ್ಕಾಗಿ ನಮ್ಮ ಪರಾಕ್ರಮಿ ಸೈನಿಕರು ಸಂಘರ್ಷ ನಡೆಸಿ ತಮ್ಮ ಪ್ರಾಣವನ್ನೇ ಸಮರ್ಪಿಸಿದರೋ ಆ ಸೈನಿಕರಿಗೆ ನೀವು ಮರಣೋತ್ತರ ಅವಮಾನ ಮಾಡಿದಿರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News