ಬಹುಸಂಖ್ಯಾತ ಹಿಂದುಗಳಿಗೆ ಅನುಕೂಲವಾಗುವ ಜಾತಿ ಗಣತಿಗೆ ಬಿಜೆಪಿ ವಿರೋಧವೇಕೆ?: ಸಂಸದ ಸಸಿಕಾಂತ್ ಸೆಂಥಿಲ್ ಪ್ರಶ್ನೆ
ಬೆಂಗಳೂರು: ದೇಶದಲ್ಲಿ ಜಾತಿ ಗಣತಿ ಅನುಷ್ಟಾನಕ್ಕೆ ಬಂದರೆ ಪರಿಶಿಷ್ಟ ಜಾತಿ, ಪಂಗಡ ಸೇರಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುತ್ತದೆ. ಆದರೆ ಬಹುಸಂಖ್ಯಾತ ಹಿಂದುಗಳಿಗೆ ಅನುಕೂಲವಾಗುವ ಜಾತಿ ಗಣತಿಯನ್ನು ಬಿಜೆಪಿಯು ಏಕೆ ವಿರೋಧಿಸುತ್ತದೆ ಎಂದು ಸಂಸದ ಸಸಿಕಾಂತ್ ಸೆಂಥಿಲ್ ಪ್ರಶ್ನಿಸಿದ್ದಾರೆ.
ಶುಕ್ರವಾರ ಇಲ್ಲಿನ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ಜಾಗೃತ ಕರ್ನಾಟಕವು ಆಯೋಜಿಸಿದ್ದ ‘ಚುನಾವಣೆಯ ಸೋಲು-ಗೆಲುವಿನ ಆಚೆಗೆ ಸಂವಿಧಾನದ ಮೌಲ್ಯಗಳನ್ನು ಸಮಾಜದಲ್ಲೂ ನೆಲೆಗೊಳಿಸುವ ರಾಜಕಾರಣದ ಅಗತ್ಯವಿದೆಯೇ?’ ಎಂಬ ಮರಳಿ ಸಂವಿಧಾನದೆಡೆಗೆ ಸರಣಿ ಸಂವಾದಲ್ಲಿ ಅವರು ಮಾತನಾಡಿದರು.
ಆರೆಸ್ಸೆಸ್ ಹಾಗೂ ಬಿಜೆಪಿಗೆ ಪರಿಶಿಷ್ಟ ಜಾತಿ, ಪಂಗಡ ಸೇರಿ ಹಿಂದುಳಿದ ವರ್ಗಗಳು ಬಲಿಯಾಗುತ್ತಿವೆ ಎಂದು ನಾವು ಅವರಿಗೆ ಅರ್ಥ ಮಾಡಿಸಬೇಕು. ಜಾತಿ ವ್ಯವಸ್ಥೆಯು ಈ ದೇಶದಲ್ಲಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಜಾತಿ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಂತಹ ಬುದ್ದಿವಂತಿಕೆ ಮಾರ್ಗವನ್ನು ಬಿಜೆಪಿಯವರು ಕಂಡುಕೊಂಡಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಾತಿ ವ್ಯವಸ್ಥೆಯ ಬಗ್ಗೆ ಹೆಚ್ಚು ಜನರಿಗೆ ಅರ್ಥವಾಗುತ್ತಿಲ್ಲ. ಜಾತಿ ವ್ಯವಸ್ಥೆಯ ನೋವು ಸಂಪೂರ್ಣವಾಗಿ ದಲಿತ ಸಮುದಾಯಗಳಿಗೆ ಹೋಗುತ್ತದೆ. ಆದುದರಿಂದ ತಮಿಳುನಾಡಿನಲ್ಲಿ ನಮ್ಮ ಹೆಸರಿನಲ್ಲಿ ಜಾತಿಯನ್ನು ಬಿಟ್ಟಿದ್ದೇವೆ. ಈ ಎಲ್ಲದರ ನಡುವೆಯೂ ನೋವು ಅನುಭವಿಸುತ್ತಿರುವ ಜಾತಿ ಎಂದರೆ ಮಹಿಳೆಯರೇ ಆಗಿದ್ದಾರೆ ಎಂದು ಅವರು ಹೇಳಿದರು.
ಆರೆಸ್ಸೆಸ್‍ನವರಿಗೂ ಸ್ವತಂತ್ರ ಬೇಕಿತ್ತು. ಆದರೆ ಅವರು ಸ್ವತಂತ್ರ ಹೋರಾಟದಲ್ಲಿ ಏಕೆ ಭಾಗವಹಿಸಲಿಲ್ಲ? ಅವರಿಗೆ ಸ್ವತಂತ್ರ ಬೇಕಿದ್ದರೂ, ಸಮಾನತೆ ಬೇಕಿರಲಿಲ್ಲ. ಸ್ವತಂತ್ರ ಬಂದರೆ, ದೇಶದಲ್ಲಿ ಸಮಾನತೆ ಬರುತ್ತದೆ ಎಂದು ಅವರಿಗೆ ಭಯ ಇತ್ತು. ಹೀಗಾಗಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆರೆಸ್ಸೆಸ್ ಮತ್ತು ಬಿಜೆಪಿ ದೇಶದಲ್ಲಿ ಶೇ.20ರಷ್ಟಿರುವ ಮುಸ್ಲಿಮರನ್ನು ಶತ್ರುಗಳು ಎಂದು ಹೇಳುತ್ತಾ, ಬಹುಸಂಖ್ಯಾತ ಹಿಂದುಗಳ ಮತಗಳನ್ನು ಪಡೆಯಲು ಹವಣಿಸುತ್ತಿದೆ. ಆದರೆ ಅವರ ಗುರಿ ಮುಸ್ಲಿಮರು ಅಲ್ಲ, ಬದಲಾಗಿ ಸಮಾನತೆ ಅನುಷ್ಟಾನವಾಗದಂತೆ ನೋಡಿಕೊಳ್ಳುವುದೇ ಅವರ ನಿಜವಾದ ಗುರಿಯಾಗಿದೆ. ಈ ಫ್ಯಾಸಿಸ್ಟ್ ಸೂತ್ರವನ್ನು ಆರೆಸ್ಸೆಸ್ ಮತ್ತು ಬಿಜೆಪಿ ಇಟ್ಟುಕೊಂಡಿದೆ. ಸಂವಿಧಾನ ಬದಲಾವಣೆಯೇ ಆರೆಸ್ಸೆಸ್ ಮತ್ತು ಬಿಜೆಪಿಯವರ ಪ್ರಮುಖ ಗುರಿಯಾಗಿದೆ ಎಂದು ಅವರು ಹೇಳಿದರು.
ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಗಲಿ, ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿಯವರ ನಡುವೆ ಆಗಲಿ ಜಗಳ ನಡೆಯುತ್ತಿಲ್ಲ. ಬದಲಾಗಿ ಮನಸ್ಥಿತಿಗಳ ನಡುವೆ ಜಗಳ ನಡೆಯುತ್ತಿದೆ. ಒಂದು ಕಡೆ ದ್ವೇಷ ಇದೆ, ಇನ್ನೊಂದು ಕಡೆ ಪ್ರೀತಿ ಇದೆ. ಇವೆರಡರ ನಡುವೆ ಜಗಳ ಆಗುತ್ತಿದೆ ಎಂದು ಅವರು ತಿಳಿಸಿದರು.
ಸಂವಿಧಾನಕ್ಕಿಂತ ಹೆಚ್ಚಿನ ದಾಖಲೆಯನ್ನು ನಾವು ನೋಡಿಲ್ಲ. ಕಾಂಗ್ರೆಸ್ ಶಾಶ್ವತ ಪ್ರಣಾಳಿಕೆ ಸಂವಿಧಾನವೇ ಆಗಿದೆ. ನಾನು ಕಾಂಗ್ರೆಸ್‍ಗಿಂತ ಸಿದ್ದಾಂತಕ್ಕೆ ಬದ್ಧನಾಗಿದ್ದೇನೆ. ಹೀಗಾಗಿ ನಾನು ಕಾಂಗ್ರೆಸ್‍ನಲ್ಲಿ ಇದ್ದೇನೆ. ಹೊಸ ಪಕ್ಷದ ಮೊರೆ ಹೋಗುವ ಅಗತ್ಯ ಇರಲಿಲ್ಲ. ಕಾಂಗ್ರೆಸ್ ಪಕ್ಷವು ಆರೆಸ್ಸೆಸ್‍ನಂತೆ ಅಲ್ಲ. ಕೇವಲ ಮಾತುಗಳಲ್ಲಿ ಕೆಲಸ ಮಾಡುತ್ತದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಒಂದು ಸಂಘಟನೆಯಾಗಿ ಕೆಲಸ ಮಾಡುತ್ತಿದೆ. ನನ್ನಂತವರಿಗೆ ಯಾವ ಪಕ್ಷವೂ ಅವಕಾಶ ನೀಡುವುದಿಲ್ಲ. ಆದರೆ ಕಾಂಗ್ರೆಸ್ ಅವಕಾಶ ನೀಡುತ್ತಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತದೆ ಎಂದು ಅವರು, ನಾನು ಸಂವಿಧಾನ ಜಾರಿಯಾಗಿರುವುದರಿಂದಲೇ ನಾವು ಅಂಗಿಯನ್ನು ತೊಟ್ಟಿದ್ದೇನೆ. ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ಅದನ್ನು ಬಿಚ್ಚಿಸಲು ಪ್ರಯತ್ನ ಪಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮೀಸಲಾತಿಯನ್ನು ತೆಗೆದು ಬಿಡಿ, ಜಾತಿ ಪ್ರಮಾಣ ಪತ್ರವನ್ನು ತೆಗೆದುಬಿಡಿ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಕೆಲವರು ಅಸಂಬದ್ಧವಾಗಿ ವಾದ ಮಾಡುತ್ತಾರೆ. ದೇಶದಲ್ಲಿ ಹತ್ತು ವರ್ಷಗಳಿಂದ ದ್ವೇಷದ ರಾಜಕಾರಣ ಇದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ನಾವು ಪ್ರಬಲ ವಿರೋಧ ಪಕ್ಷವಾಗಿ ಸಂಸತ್ತಿನಲ್ಲಿ ದ್ವನಿ ಎತ್ತುತ್ತೇವೆ ಎಂದು ಅವರು ತಿಳಿಸಿದರು.