ʼಕರ್ನಾಟಕ ಬಂದ್ʼಗೆ ಮಂಡ್ಯದಲ್ಲಿ ವ್ಯಾಪಕ ಬೆಂಬಲ; ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ
ಮಂಡ್ಯ, ಸೆ.29: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಜಿಲ್ಲಾ ಕೇಂದ್ರ ಮಂಡ್ಯ ನಗರ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳು, ಹೋಬಳಿ ಕೇಂದ್ರಗಳು, ಇತೆ ವ್ಯಾಪಾರ ಕೇಂದ್ರಗಳಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್‍ಗೆ ಬೆಂಬಲ ನೀಡಿದರು.
ಸಾರಿಗೆ, ಖಾಸಗಿ ಬಸ್‍ಗಳು, ಆಟೋರಿಕ್ಷಾ, ಇತರೆ ವಾಹನಗಳು ಸಂಜೆವರೆಗೂ ರಸ್ತೆಗಿಳಿಯಲಿಲ್ಲ. ಪರಿಣಾಮವಾಗಿ ಸಾರ್ವಜನಿಕರು ಪರದಾಡುವಂತಾಯಿತು. ವಾಹನ ಸಂಚಾರವಿಲ್ಲದ ರಸ್ತೆಗಳು, ಜನರಿಲ್ಲದ ಸಾರಿಗೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.
ಆಸ್ಪತ್ರೆ, ಔಷಧಿ, ಹಾಲು, ಇತರೆ ತುರ್ತು ಸೇವೆಗೆ ಯಾವುದೇ ತೊಂದರೆ ಆಗಲಿಲ್ಲ. ನೌಕರರ ಹಾಜರಾತಿ ಇಲ್ಲದೆ ಸರಕಾರಿ ಕಚೇರಿಗಳ ವ್ಯವಹಾರ ಸ್ಥಗಿತವಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ರೈಲು ಸಂಚಾರ ಮಾಮೂಲಿಯಾಗಿತ್ತು. ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲಾಗಿತ್ತು.
ಹಲವೆಡೆ ಪ್ರತಿಭಟನೆ, ರಸ್ತೆ ತಡೆ:
ಬಂದ್ ಹಿನ್ನೆಲೆಯಲ್ಲಿ ರೈತ, ಕನ್ನಡಪರ, ಜನಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಕೇಂದ್ರ, ರಾಜ್ಯ ಸರಕಾರ, ಕಾವೇರಿ ಜಲ ನಿಯಂತ್ರಣ ಸಮಿತಿ ಮತ್ತು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶ್ರೀರಂಗಪಟ್ಟಣ ಬಳಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಸ್ವಲ್ಪ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಡ್ಯದ ಜೆ.ಸಿ.ವೃತ್ತದಲ್ಲಿ ಉರುಳು ಸೇವೆ ಮಾಡಿದ್ದಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಭಾವಚಿತ್ರಕ್ಕೆ ಕೈಕೊಯ್ದುಕೊಂಡು ರಕ್ತಚೆಲ್ಲಿದರು. ರಾಜ್ಯದ ಸಂಸದರ ವಿರುದ್ಧ ಕಿಡಿಕಾರಿದರು. ಕನ್ನಡ ಸೇನೆ ಕಾರ್ಯಕರ್ತರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದರು.
ದರ್ಶನ್ ಸೇನಾ ಸಮಿತಿ ನೇತೃತ್ವದಲ್ಲಿ ನಟ ದರ್ಶನ್ ಅಭಿಮಾನಿಗಳು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿಗೆ ಬೆಂಬಲ ನೀಡಿದರು. ಮಂಗಳಮುಖಿಯರೂ ಹೋರಾಟಕ್ಕೆ ಕೈಜೋಡಿಸಿದರು. ಎಸ್‍ಡಿಪಿಐ ಕಾರ್ಯಕರ್ತರು, ರಾಜಸ್ತಾನ ಸಮಾಜದವರು, ವಿಶ್ವಕರ್ಮ ಸಮಾಜದವರು ಸೇರಿದಂತೆ ವಿವಿಧ ಸಮುದಾಯದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮದ್ದೂರಿನಲ್ಲಿ ಬೃಹತ್ ಪ್ರತಿಭಟನೆ:
ಮದ್ದೂರು ಪಟ್ಟಣದಲ್ಲೂ ಬಂದ್ ಯಶಸ್ವಿಯಾಯಿತು. ಪ್ರಗತಿಪರ ಸಂಘಟನೆಗಳ ಒಕ್ಕೂಟ, ರೈತಸಂಘ, ಇತರೆ ಸಂಘಟನೆಗಳ ನೂರಾರು ಕಾರ್ಯಕರ್ತರು ನಿಷೇದಾಜ್ಞೆ ನಡುವೆಯೂ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರವಾಸಿಮಂದಿರ ವೃತ್ತದಲ್ಲಿ ವಾಹನ ಸಂಚಾರ ತಡೆದರು.
ತಾಲೂಕಿನ ಕೊಪ್ಪ, ಬೆಸಗರಹಳ್ಳಿ, ಕೆ.ಎಂ.ದೊಡ್ಡಿ, ಕೆಸ್ತೂರು, ಕೆ.ಹೊನ್ನಲಗೆರೆ, ಇತರೆಡೆಯೂ ಬಂದ್ ಯಶಸ್ವಿಯಾಯಿತು. ಕುಂಟನಹಳ್ಳಿ ಗೇಟ್ ಬಳಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರು, ರೈತರು, ಯುವಕರು ಮದ್ದೂರು-ಕೊಪ್ಪ ರಸ್ತೆ ತಡೆ ನಡೆಸಿದರು.
ಕೆ.ಆರ್.ಪೇಟೆ, ಪಾಂಡವಪುರ, ಮಳವಳ್ಳಿ, ನಾಗಮಂಗಲ, ಶ್ರೀರಂಗಪಟ್ಟಣ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಬಂದ್‍ಗೆ ಬೆಂಬಲ ದೊರೆಯಿತು. ಈ ವೇಳೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಯಾವುದೇ ಅಹಿತರ ಘಟನೆ ಸಂಭವಿಸದಂತೆ ಜಿಲ್ಲಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಆಯಕಟ್ಟಿದ ಸ್ಥಳಗಳಲ್ಲಿ, ಹೆದ್ದಾರಿಯ ಉದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಇತರೆ ಅಧಿಕಾರಿಗಳು ಸ್ವತಃ ತಾವೇ ಬಂದೋ ಬಸ್ತ್ ಉಸ್ತುವಾರಿ ವಹಿಸಿದ್ದರು.