ಕಳಸ | ಕಾಡುಕೋಣ ದಾಳಿ; ವೃದ್ಧ ಗಂಭೀರ
ಚಿಕ್ಕಮಗಳೂರು, ಆ.26: ಕಾಡುಕೋಣ ದಾಳಿಯಿಂದಾಗಿ ವ್ಯದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮುಜೇಕಾನ್ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.
ಮುಜೇಕಾನ್ ಗ್ರಾಮದ ನಿವಾಸಿ ಮರೀಗೌಡ(60) ಕಾಡುಕೋಣ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ವೃದ್ಧರಾಗಿದ್ದು, ವೃದ್ಧನ ಎದೆ ಭಾಗಕ್ಕೆ ಕೊಂಬಿನಿಂದ ತಿವಿದ ಪರಿಣಾಮ ಶ್ವಾಸಕೋಶಕ್ಕೆ ಗಂಭೀರವಾಗಿ ಗಾಯವಾಗಿದ್ದು, ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಶನಿವಾರ ಬೆಳಗ್ಗೆ ಮುಜೇಕಾನ್ ಗ್ರಾಮದಿಂದ ಕಳಸ ಪಟ್ಟಣಕ್ಕೆ ಕಾಲು ದಾರಿಯಲ್ಲಿ ಬರುತ್ತಿದ್ದ ವೇಳೆ ದಾರಿ ಮಧ್ಯೆ ಇದ್ದ ಕಾಡುಕೋಣ ಏಕಾಏಕಿ ವೃದ್ಧನ ಮೇಲೆರಗಿದೆ. ಈ ವೇಳೆ ಕಾಡುಕೋಣದ ಕೊಂಬು ವೃದ್ಧ ಮರೀಗೌಡ ಅವರ ಎಡಭಾಗಕ್ಕೆ ಚುಚ್ಚಿ ಎದೆ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಸ್ಥಳೀಯರು ಕೂಡಲೇ ಮರೀಗೌಡ ಅವರನ್ನು ಕಳಸ ಆಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ತಪಾಸಣೆ ನಡೆಸಿದ ಆಸ್ಪತ್ರೆ ವೈದ್ಯೆ ಡಾ.ಮಾನಸ, ವೃದ್ಧನ ಶ್ವಾಸಕೋಶಕ್ಕೆ ಗಾಯವಾಗಿರುವುದನ್ನು ಗಮನಿಸಿದ್ದಾರೆ. ಸಂಬಂಧಿಕರು ವೃದ್ಧನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿಯಿಂದ ತತ್ತರಿಸಿರುವ ರೈತರು, ಸಾರ್ವಜನಿಕರು ಸದ್ಯ ಕಾಡು ಕೋಣಗಳ ಹಾವಳಿಯಿಂದ ಆತಂಕದಲ್ಲಿ ಬದುಕುವಂತಾಗಿದೆ. ಕಳೆದ ವರ್ಷ ಕಾಡುಕೋಣ ದಾಳಿಯಿಂದಾಗಿ ಕಳಸ ಸಮೀಪದ ತೋಟದೂರು ಎಂಬಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಗತ್ಯ ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.