ಕೊಡಗಿನಲ್ಲಿ ಗಾಳಿ ಮಳೆ: ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬ, 49 ಮನೆಗಳಿಗೆ ಹಾನಿ

Update: 2023-07-20 12:36 GMT

ಮಡಿಕೇರಿ ಜು.20 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ ಮುಂಗಾರು ದುರ್ಬಲವಾಗಿದ್ದರು, ಆಗೊಮ್ಮೆ ಈಗೊಮ್ಮೆ ಹಠಾತ್ತನೆ ಸುರಿಯುವ ಗಾಳಿ ಮಳೆಯಿಂದ ಪ್ರಮುಖವಾಗಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗುತ್ತಿದ್ದು, ವರ್ಷದ ಆರಂಭದಿಂದ ಇಲ್ಲಿಯವರೆಗೆ ಒಟ್ಟು 1,111 ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ.

ಗ್ರಾಮೀಣ ಭಾಗಗಳಲ್ಲಿ ಮಳೆಯಿಂದ ಮರಗಳು ಧರೆಗುರುಳುವ ಮೂಲಕ ವಿದ್ಯುತ್ ಕಂಬಗಳು ಮುರಿರು ಬೀಳುತ್ತಿದೆ. ಈ ಎಲ್ಲಾ ಹಂತಗಳಲ್ಲಿ ಚೆಸ್ಕಾಂ ಇಲಾಖಾ ಸಿಬ್ಬಂದಿಗಳು ಆದಷ್ಟು ತುರ್ತು ಕ್ರಮ ಕೈಗೊಂಡು ವಿದ್ಯುತ್ ಮರು ಸಂಪರ್ಕವನ್ನು ಕಲ್ಪಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯ ಐದು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಅಲ್ಲಲ್ಲಿ ಮರದ ಕೊಂಬೆಗಳು ಮುರಿದು ಬೀಳುವ ಘಟನೆಗಳು ಸಾಕಷ್ಟು ನಡೆದಿವೆಯಾದರು, ಬೃಹತ್ ಗಾತ್ರದ 35 ಮರಗಳು ಬಿದ್ದಿವೆಯಾದರೆ, ಗಾಳಿ ಮಳೆಗೆ 71 ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬ ಮತ್ತು ಟ್ರಾನ್ಸ್ ಪಾರ್ಮರ್ ಗಳು ಹಾಳಾಗಿ ಅಂದಾಜು 1.40 ಕೋಟಿ ರೂ. ನಷ್ಟ ಚೆಸ್ಕಾಂ ಇಲಾಳೆಗೆ ಉಂಟಾಗಿದೆ.

49 ಮನೆಗಳಿಗೆ ಹಾನಿ- ಪ್ರಸಕ್ತ ಸಾಲಿನಲ್ಲಿ ಮಳೆಯಿಂದಾಗಿ 45 ಮನೆಗಳಿಗೆ ಭಾಗಶಃ ಹಾನಿಯುಂಟಾಗಿದ್ದರೆ, 2 ಮನೆಗಳಿಗೆ ಗಂಭೀರ ಸ್ವರೂಪದ ಹಾನಿ ಹಾಗೂ 2 ಮನೆಗಳಿಗೆ ಪೂರ್ಣ ಹಾನಿಯಾಗಿದೆ. ಕಳೆದೊಂದು ದಿನದ ಅವಧಿಯಲ್ಲಿ ಕೊಡ್ಲಿಪೇಟೆ ಹೋಬಳಿಯ ದೊಡ್ಡ ಕೊಡ್ಲಿ ಗ್ರಾಮದ ಯತೀಶ್ ಎಂಬವರಿಗೆ ಸೇರಿದ ಮನೆಗೆ ಹಾನಿಯುಂಟಾಗಿದೆ.

ತೋಟಗಾರಿಕಾ ಬೆಳೆಗಳಿಗೆ ಹಾನಿ- ಗಾಳಿ ಮಳೆಯಿಂದ ಜಿಲ್ಲೆಯಲ್ಲಿ ಈ ಬಾರಿ ಇಲ್ಲಿಯವರೆಗೆ ಹೆಚ್ಚಿನ ಹಾನಿ ಸಂಭವಿಸಿಲ್ಲ. ಹೀಗಿದ್ದೂ ಜಿಲ್ಲೆಯ ಅಲ್ಲಲ್ಲಿ ಒಟ್ಟಾಗಿ 3.40 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.

ಶೇ.50 ರಷ್ಟು ಮಳೆ ಕೊರತೆ- ಜಿಲ್ಲಾ ವ್ಯಾಪ್ತಿಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 986.44 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1826.92 ಮಿ.ಮೀ ಮಳೆಯಾಗಿತ್ತು. ಈ ಬಾರಿ ಕಳೆದ ಸಾಲನ್ನು ಹೋಲಿಸಿದಲ್ಲಿ ಶೇ.50 ರಷ್ಟು ಮಳೆಯ ಕೊರತೆ ಕಂಡು ಬರುತ್ತಿದೆ.

ಭತ್ತದ ಕೃಷಿಗೆ ಹಿನ್ನಡೆ- ಭತ್ತದ ಕೃಷಿ ಚಟುವಟಿಕೆಗಳು ಜಿಲ್ಲಾ ವ್ಯಾಪ್ತಿಯಲ್ಲಿ ಜೂನ್, ಜುಲೈ ತಿಂಗಳಲ್ಲಿ ಬಿರುಸಿನಿಂದ ಸಾಗುವುದು ವಾಡಿಕೆ. ಆದರೆ, ಈ ಬಾರಿ ಜೂನ್ ತಿಂಗಳಿನಲ್ಲಿ ಅತ್ಯಲ್ಪ ಮಳೆಯಾಗಿದ್ದರೆ, ಜುಲೈನಲ್ಲೂ ನಿರೀಕ್ಷೆಯ ಮಳೆಯಾಗದಿರುವುದರಿಂದ ಮಲೆಯಾಧಾರಿತ ಜಿಲ್ಲೆಯ ಭತ್ತದ ಕೃಷಿಗೆ ಹಿನ್ನಡೆಯುಂಟಾಗಿದ್ದು, ಕೃಷಿಕರ ಆತಂಕವನ್ನು ಹೆಚ್ಚಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News