‘ಯಶಸ್ವಿ ಯೋಜನೆ’ ಬಿಲ್ ಬಾಕಿ ಉಳಿಸಿಲ್ಲ: ಸಚಿವ ಕೆ.ಎನ್.ರಾಜಣ್ಣ

Update: 2023-12-05 14:43 GMT

ಬೆಳಗಾವಿ: ರಾಜ್ಯದಲ್ಲಿ ಯಶಸ್ವಿನಿ ಯೋಜನೆ ಜಾರಿಯಾದ ಬಳಿಕ ಒಪ್ಪಂದ ಮಾಡಿಕೊಂಡಿರುವ ಯಾವುದೇ ಆಸ್ಪತ್ರೆಗಳಿಗೆ ಪಾವತಿಸಬೇಕಾದ ಶುಲ್ಕ(ಬಿಲ್)ವನ್ನು ಬಾಕಿ ಉಳಿಸಿಕೊಂಡಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಮಂಗಳವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಪಿ.ಎನ್.ನಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಅವರು, 2003ರಲ್ಲಿ ಯಶಸ್ವಿನಿ ಯೋಜನೆಯನ್ನು ಪ್ರಪ್ರಥಮ ಬಾರಿಗೆ  ರಾಜ್ಯದಲ್ಲಿ ಜಾರಿ ಮಾಡಲಾಯಿತು. 2003-ರಿಂದ 18ರವರೆಗೆ ಈ ಯೋಜನೆ ಜಾರಿಯಲ್ಲಿತ್ತು. ನಂತರ ಯೋಜನೆಯನ್ನು ಸಹಕಾರಿ ಇಲಾಖೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಯಿತು. ಆದರೆ, 2018ರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಯಿತು ಎಂದರು.

2023ರಿಂದ ಈ ಯೋಜನೆಯನ್ನು ಹೊಸದಾಗಿ ಮರುಜಾರಿ ಮಾಡಲಾಗಿದೆ. ಸರಕಾರದ ಮಾನದಂಡಗಳನ್ನು ಪಾಲನೆ ಮಾಡಿಕೊಂಡಿರುವ ಆಸ್ಪತ್ರೆಗಳ ಜೊತೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಯಾವ ಆಸ್ಪತ್ರೆಗಳಿಗೆ ಶುಲ್ಕ ನೀಡಬೇಕೊ ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಈವರೆಗೂ ಯಾವ ಆಸ್ಪತ್ರೆಯ ಬಿಲ್ ಬಾಕಿ ಇಲ್ಲ ಎಂದರು.

ಆಗ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್, ಈ ಯೋಜನೆಯನ್ನು ತಡೆದವರು ಯಾರು ಎಂದು ಪ್ರಶ್ನಿಸಿದಾಗ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಸಚಿವರು ಉತ್ತರಿಸಿದರು.

ಸಹಕಾರ ಸಂಘಗಳ ಅವ್ಯವಹಾರ ತಡೆಗಟ್ಟಲು ಕಾಯ್ದೆಗೆ ತಿದ್ದುಪಡಿ

ಸಹಕಾರ ಸಂಘಗಳಲ್ಲಿ ಹಲವಾರು ವರ್ಷಗಳಿಂದ ವ್ಯಾಪಕವಾದ ಭ್ರಷ್ಟಾಚಾರ ಮತ್ತು ಹಗರಣಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನು ನಿಯಂತ್ರಿಸಲು ಈಗಿರುವ ಕಾಯ್ದೆಗೆ ತಿದ್ದುಪಡಿ ತರಲು ಹಿರಿಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ಅಧಿವೇಶನದೊಳಗೆ ವರದಿಯು ಸರ್ಕಾರದ ಕೈ ಸೇರಲಿದ್ದು, ಬಳಿಕ ಮಂಡನೆ ಮಾಡುತ್ತೇವೆ ಎಂದು ತಿಳಿಸಿದರು.

ಸಹಕಾರ ಸಂಘಗಳ ಸ್ಥಿತಿಗತಿಗಳನ್ನು ಕಲಂ 63ರಡಿ ಪ್ರತಿ ಸಹಕಾರಿ ಸಂಘದ ಲೆಕ್ಕ ಪರಿಶೋಧನೆಯನ್ನು ಸೆ.01ನೇ ತಾರೀಖಿನೊಳಗೆ ಮುಕ್ತಾಯಗೊಳಿಸಬೇಕೆಂಬ ನಿಯಮವಿದೆ. ಚಾರ್ಟರ್ಡ್ ಅಕೌಂಟೆಂಟ್‍ಗಳಿಗೆ ಹೆಚ್ಚಿನ ವೆಚ್ಚ ತಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ತಿದ್ದುಪಡಿಯಲ್ಲಿ ಇದು ಕೂಡ ಪ್ರಸ್ತಾವನೆಯಾಗಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News