ಯತ್ನಾಳ್, ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ʼಅತೃಪ್ತʼ ನಾಯಕರ ಸಭೆ!
ಬೆಳಗಾವಿ : ಬಿಜೆಪಿ ನಾಯಕರ ʼಮೈಸೂರು ಚಲೋʼ ಪಾದಯಾತ್ರೆ ಮುಗಿದ ಬೆನ್ನಲ್ಲೇ ಪಾದಯಾತ್ರೆಯಿಂದ ದೂರ ಉಳಿದಿದ್ದ ಕೆಲ ಅತೃಪ್ತ ಬಿಜೆಪಿ ನಾಯಕರು ರವಿವಾರ ಬೆಳಗಾವಿ ತಾಲ್ಲೂಕಿನ ಕಿಣಯೇ ಗ್ರಾಮದ ಬಳಿಯ ರೆಸಾರ್ಟ್‌ನಲ್ಲಿ ಸಭೆ ನಡೆಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಮಾಜಿ ಸಂಸದರಾದ ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಮತ್ತಿತರರು ಭಾಗವಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನಗೊಂಡ ಬಿಜೆಪಿಯ ಈ ನಾಯಕರು ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
►ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆಗೆ ನಿರ್ಧಾರ :
ಈ ಕುರಿತು ಪ್ರತಿಕ್ರಿಯಿಸಿದ ಅರವಿಂದ ಲಿಂಬಾವಳಿ, ‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲಾಗದಿದ್ದರೂ ಸ್ವಲ್ಪ ಮಟ್ಟಿಗೆ ಸುಧಾರಣೆ ಆಗಿದೆ. ಹಾಗಾಗಿ, ಬಿಜೆಪಿ ಬಲವರ್ಧನೆ ದೃಷ್ಟಿಯಿಂದ ಪಕ್ಷದಲ್ಲಿನ ದೋಷಗಳನ್ನು ಸರಿಪಡಿಸಿಕೊಂಡು ಪಕ್ಷ ಬಲಪಡಿಸಲು ಸಭೆಯಲ್ಲಿ ಚರ್ಚಿಸಲಾಗಿದೆ’ ಎಂದು ಹೇಳಿದರು.
‘ಮಹರ್ಷಿ ವಾಲ್ಮೀಕಿ ನಿಗಮದ ಹಣ ದುರುಪಯೋಗ ಮತ್ತು ಎಸ್‍ಸಿಪಿ, ಟಿಎಸ್‍ಪಿ ಮೀಸಲಿಟ್ಟಿರುವ ಹಣವನ್ನು ತಮ್ಮ ಗ್ಯಾರಂಟಿಗಳಿಗೆ ಬಳಸಿರುವ ಬಗ್ಗೆಯೂ ಸುದೀರ್ಘ ಹೋರಾಟ ಕೈಗೆತ್ತಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆ. ಈ ಎಲ್ಲ ಸಂಗತಿಗಳನ್ನು ಹೈಕಮಾಂಡ್ ಮತ್ತು ರಾಷ್ಟ್ರೀಯ ನಾಯಕತ್ವಕ್ಕೆ ತಿಳಿಸುತ್ತೇವೆ’ ಎಂದು ಅವರು ತಿಳಿಸಿದರು.
ಮುಡಾ ಹಗರಣದ ಪಾದಯಾತ್ರೆ ಕೂಡಲಸಂಗಮದಿಂದ ಬಳ್ಳಾರಿವರೆಗೂ ಪಾದಯಾತ್ರೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಭೆಯ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸುತ್ತೇವೆ ಎಂದು ಅವರು ಹೇಳಿದರು.