ಕೆಲಸಕ್ಕೆಂದು ಆಫ್ರಿಕಾಕ್ಕೆ ಹೋಗಿದ್ದ ಮೈಸೂರಿನ ಯುವಕ ಮೃತ್ಯು
ಮೈಸೂರು,ಜು.4: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗ್ರಾಮದ ನಿವಾಸಿ ಎಫ್ರಾಯಿಂ (19) ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ವೇಳೆ ಜ್ವರದಿಂದ ಮೃತ ಪಟ್ಟಿರುವ ಘಟನೆ ವರದಿಯಾಗಿದೆ.
ಇವರು ಕಳೆದ ಎರಡು ದಿನಗಳಿಂದ ಶಂಕಿತ ಡೆಂಗ್ಯೂನಿಂದ ಅನಾರೋಗ್ಯ ಪೀಡಿತರಾಗಿ ಸೋಮವಾರ ಮೃತಪಟ್ಟಿದ್ದಾರೆ ಎಂದು ಮೃತರ ಜೊತೆಯಲ್ಲಿ ಆಫ್ರಿಕಾದಲ್ಲಿರುವ ದೊಡ್ಡಪ್ಪ ಬಿಲ್ಲಾ ತಿಳಿಸಿದ್ದಾರೆ.
ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಎಫ್ರಾಯಿಂ ತನ್ನ ದೊಡ್ಡಪ್ಪ ಬಿಲ್ಲಾ ಅವರೊಂದಿಗೆ ಮಸಾಜ್‍ಎಣ್ಣೆ ಮಾರಲು ಐವ ರಿಕೋಸ್ಟ್ ಗೆ 2022ರ ಆಗಸ್ಟ್ ನಲ್ಲಿ ತೆರಳಿದ್ದರು. ಅಲ್ಲಿನ ನಗರ ಪ್ರದೇಶಗಳಲ್ಲಿ ಎಣ್ಣೆ ಮಾರುತ್ತಾ ಜೀವನ ಸಾಗಿಸಿದ್ದರು.
ಎಫ್ರಾಹಿಂ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಬಗ್ಗೆ ತಂದೆ-ತಾಯಿ ಜೊತೆ ದೂರವಾಣಿಯಲ್ಲಿಯೂ ಮಾತನಾಡಿದ್ದ. ಆತನನ್ನು ಜೊತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಾ ಎಂಬ ಆತಂಕದಲ್ಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸುವಂತೆ ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.