ವಾರ್ತಾಭಾರತಿ ಚಾನಲ್ ನ ಚರ್ಚಾ ಕಾರ್ಯಕ್ರಮವನ್ನು ಬ್ಲಾಕ್ ಮಾಡಿದ ಯೂಟ್ಯೂಬ್

Update: 2023-07-21 09:40 GMT

ಮಂಗಳೂರು: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಕೃತ್ಯದ ಬಗ್ಗೆ ವಾರ್ತಾಭಾರತಿ ಡಿಜಿಟಲ್ ಚಾನಲ್ ನಡೆಸಿದ್ದ ಚರ್ಚಾ ಕಾರ್ಯಕ್ರಮವನ್ನು ಯೂಟ್ಯೂಬ್ ಯಾವುದೇ ವೀಕ್ಷಕರಿಗೆ ಕಾಣಿಸದಂತೆ ಬ್ಲಾಕ್ ಮಾಡಿದೆ.

ಮಣಿಪುರದಲ್ಲಿ ನಡೆದ ಘಟನೆಯ ಬಗ್ಗೆ ಗುರುವಾರ ರಾತ್ರಿ 8 ಗಂಟೆಗೆ "ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ" ಎಂಬ ಹೆಸರಿನಲ್ಲಿ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ ದಿ ಬಿಗ್ ಡಿಬೇಟ್ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ಪ್ರಸಾರವಾದ ಒಂದು ಗಂಟೆಯೊಳಗೆ 8000 ಕ್ಕೂ ಹೆಚ್ಚು ವೀಕ್ಷಕರು ಅದನ್ನು ನೋಡಿದ್ದರು. ಆದರೆ ಶುಕ್ರವಾರ ಯೂಟ್ಯೂಬ್ ಆ ಕಾರ್ಯಕ್ರಮದ ವೀಡಿಯೊವನ್ನು private (locked) ಎಂದು ಗುರುತಿಸಿ ಬ್ಲಾಕ್ ಮಾಡುವ ಮೂಲಕ ಯಾವುದೇ ಹೊಸ ವೀಕ್ಷಕರಿಗೆ ಕಾರ್ಯಕ್ರಮ ಕಾಣದಂತೆ ಮಾಡಿಬಿಟ್ಟಿದೆ.

ಕೇಂದ್ರ ಸರಕಾರ ಗುರುವಾರ ತಮ್ಮ ವೇದಿಕೆಗಳಿಂದ ಮಣಿಪುರ ಘಟನೆಯ ವೀಡಿಯೊಗಳನ್ನು ಹಾಗು ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಚೋದನಕಾರಿ ಪೋಸ್ಟ್ ಗಳನ್ನು ತೆಗೆದು ಹಾಕುವಂತೆ ಟ್ವಿಟರ್, ಫೇಸ್ ಬುಕ್, ಯೂಟ್ಯೂಬ್ ಹಾಗು ಇನ್ಸ್ಟಾ ಗ್ರಾಂ ಗಳಿಗೆ ಸೂಚನೆ ನೀಡಿತ್ತು.

ಆದರೆ ವಾರ್ತಾಭಾರತಿಯ ಚರ್ಚಾ ಕಾರ್ಯಕ್ರಮದಲ್ಲಿ ಮಣಿಪುರ ಘಟನೆಯ ವಿಡಿಯೋವನ್ನಾಗಲಿ, ಫೋಟೋವನ್ನಾಗಲಿ ಬಳಸಿಲ್ಲ. ಆ ಡಿಬೇಟ್ ನಲ್ಲಿ ಒಮ್ಮೆ ಪ್ರಕರಣದ ಆರೋಪಿಗಳನ್ನು ಮಾತ್ರ ತೋರಿಸಲಾಗಿತ್ತು. ಘಟನೆಯಲ್ಲಿ ಸಂತ್ರಸ್ತ ಮಹಿಳೆಯರ ಫೋಟೋ, ವಿಡಿಯೋ ಯಾವುದನ್ನೂ ಕಾರ್ಯಕ್ರಮದಲ್ಲಿ ಬಳಸಿಲ್ಲ. ಅಲ್ಲದೆ ಮಣಿಪುರ ಘಟನೆ ಕುರಿತು ಹಲವಾರು ಯೂಟ್ಯೂಬ್ ಚಾನಲ್ ಗಳಲ್ಲಿ ವಿಶ್ಲೇಷಣೆ , ಚರ್ಚೆಗಳು ಪ್ರಸಾರವಾಗಿದೆ.

ವಾರ್ತಾಭಾರತಿಯ ಚರ್ಚಾ ಕಾರ್ಯಕ್ರಮಕ್ಕೆ ಬಿಜೆಪಿ ವಕ್ತಾರರನ್ನು ಕಳಿಸಲು ಕೇಳಿದಾಗ "ಈಗಾಗಲೇ ಪ್ರಧಾನಿ ಆ ಘಟನೆಯನ್ನು ಖಂಡಿಸಿದ್ದಾರೆ. ಇನ್ನು ನಾವು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ವಕ್ತಾರರನ್ನು ಕಳಿಸುವುದಿಲ್ಲ" ಎಂದು ಬಿಜೆಪಿ ಮಾಧ್ಯಮ ಘಟಕ ಹೇಳಿತ್ತು. ಹಾಗಾಗಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗು ಇಬ್ಬರು ಸಾಮಾಜಿಕ ಕಾರ್ಯಕರ್ತೆಯರು ಭಾಗವಹಿಸಿ ಮಾತನಾಡಿದ್ದರು. ಚಾನಲ್ ನ ಪರವಾಗಿ ಹಿರಿಯ ಆಂಕರ್ ಮಂಜುಳಾ ಮಾಸ್ತಿಕಟ್ಟೆ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಈಗ ಯೂಟ್ಯೂಬ್ ಆ ಕಾರ್ಯಕ್ರಮವನ್ನೇ ಬ್ಲಾಕ್ ಮಾಡಿದೆ. "ಕಾರ್ಯಕ್ರಮ ಯೂಟ್ಯೂಬ್ ನ ಪಾಲಿಸಿ ಉಲ್ಲಂಘಿಸಿರಲಿಕ್ಕಿಲ್ಲ , ಆದರೂ ಅದು ವೀಕ್ಷಕರಿಗೆ ಸೂಕ್ತವಲ್ಲ" ಎಂಬ ಕಾರಣಕ್ಕಾಗಿ ಬ್ಲಾಕ್ ಮಾಡುತ್ತಿದ್ದೇವೆ ಎಂದು ಯೂಟ್ಯೂಬ್ ಹೇಳಿದೆ. ಈ ಬಗ್ಗೆ ಯೂಟ್ಯೂಬ್ ಗೆ ವಾರ್ತಾಭಾರತಿ ಮನವಿ ಸಲ್ಲಿಸಿದ್ದು ವೀಡಿಯೊ ಮೇಲೆ ಹಾಕಿರುವ ನಿರ್ಬಂಧವನ್ನು ತೆಗೆದುಹಾಕಬೇಕು ಎಂದು ಹೇಳಿತ್ತು. ಆ ಮನವಿಯನ್ನೂ ಯೂಟ್ಯೂಬ್ ತಿರಸ್ಕರಿಸಿದೆ.

ಈ ಡಿಬೇಟ್ ವಿಡಿಯೋ dailymotion.com ನಲ್ಲಿ ಲಭ್ಯವಿದೆ. ವಿಡಿಯೋ ಲಿಂಕ್ ಇಲ್ಲಿದೆ https://www.dailymotion.com/video/x8mojgx



 






 



Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News