ಸ್ಪೀಕರ್ ಸ್ಥಾನಕ್ಕೆ ಝಮೀರ್ ಅಹ್ಮದ್ ಅಗೌರವ ತೋರಿಲ್ಲ: ಸಿಎಂ ಸಿದ್ದರಾಮಯ್ಯ
ಬೆಳಗಾವಿ: ‘ಸ್ಪೀಕರ್ ಸ್ಥಾನಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಅಗೌರವ ತೋರುವುದಾಗಲಿ, ಶಾಸಕರ ಹಕ್ಕುಗಳಿಗೆ ಚ್ಯುತಿ ಬರುವ ರೀತಿಯಲ್ಲಿ ಹೇಳಿಕೆ ನೀಡಿಲ್ಲ ಎಂಬುದನ್ನು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಬಿಜೆಪಿ ಶಾಸಕರು ಈ ವಿಚಾರದ ಕುರಿತು ಚರ್ಚೆ ಮಾಡಲೇಬೇಕಾದರೆ ಸ್ಪೀಕರ್ ಗೆ ನೋಟಿಸ್ ನೀಡಲಿ, ತಾವು ಅನುಮತಿ ನೀಡಿದರೆ ಚರ್ಚೆಗೆ ನಾವು ಸಿದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಬರಗಾಲದ ಕುರಿತು ನಡೆದ ಚರ್ಚೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಸದಸ್ಯರ ಧರಣಿ ನಡುವೆಯೇ ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಈ ವಿಷಯ ಪ್ರಮುಖವಾಗಿದ್ದರೆ ಒಂದು ವಾರ ಅಧಿವೇಶನ ನಡೆದಿದೆ. ಆಗ ಏಕೆ ಬಿಜೆಪಿಯವರು ಇದನ್ನು ಪ್ರಸ್ತಾವ ಮಾಡಲಿಲ್ಲ. ರಾಜ್ಯದ 223 ತಾಲೂಕುಗಳಲ್ಲಿ ಬರಗಾಲ ಇದೆ. ಸರಕಾರ ಬರ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಉದ್ಯೋಗ ಖಾತರಿ ಅಡಿ ಉದ್ಯೋಗ, ಗುಳೆ ಹೋಗುವುದನ್ನು ತಪ್ಪಿಸಲು ಆದ್ಯತೆ ನೀಡಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಗಳ ಖಾತೆಯಲ್ಲಿ 800-900 ಕೋಟಿ ರೂ.ಗಳಷ್ಟು ಹಣ ಇದೆ. ಬರಪೀಡಿತ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ 100 ದಿನಗಳ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸಲು ಅವಕಾಶವಿದೆ. ಆದರೆ, ಎರಡು ತಿಂಗಳಿನಿಂದ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿದರೂ ಯಾವುದೆ ಉತ್ತರ ನೀಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಝಮೀರ್ ಅಹ್ಮದ್ ನೀಡಿರುವ ಹೇಳಿಕೆ ಸಂಬಂಧ ಸದನದಲ್ಲಿ ಚರ್ಚೆ ಮಾಡಲು ಸ್ಪೀಕರ್ ಗೆ ನೋಟಿಸ್ ನೀಡದೆ ಏಕಾಏಕಿ ಚರ್ಚೆ ಆರಂಭಿಸಿದರೆ ಹೇಗೇ? ಇವರು ನೋಟಿಸ್ ನೀಡಿ, ನೀವು ಅನುಮತಿಸಿದರೆ ಸರಕಾರ ಚರ್ಚೆಗೆ ಸಿದ್ಧವಾಗಿದೆ. ನಾವು ಪಲಾಯನ ಮಾಡಲ್ಲ. ಉತ್ತರ ಕೊಡಲು ಸಿದ್ಧವಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಉತ್ತರ ಕರ್ನಾಟಕದ ವಿರೋಧಿಗಳು. ಚರ್ಚೆ ಮಾಡಿದರೆ ಇವರ ವೈಫಲ್ಯಗಳು ಹೊರಗೆ ಬರುತ್ತವೆ ಎಂಬ ಆತಂಕದಲ್ಲಿದ್ದಾರೆ. ನಮ್ಮ ಉತ್ತರ ಕೇಳಲು ಇವರು ತಯಾರಿಲ್ಲ. ನಮಗೆ ಸಂವಿಧಾನದ ಪಾಠ ಮಾಡುವ ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇದೆಯೇ? ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.
ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆಗೆ ನಾವು ಸಿದ್ಧವಾಗಿದ್ದೇವೆ. ಆದರೆ, ಇವರು ಚರ್ಚೆಗೆ ಸಿದ್ಧರಿಲ್ಲ. ಸದನದ ಸಮಯವನ್ನು ಹಾಳು ಮಾಡುವ ಮೂಲಕ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಬಿಜೆಪಿಯವರಂತೆ ಮೊಂಡುತನ ಮಾಡಿ, ಜನವಿರೋಧಿ ಕೆಲಸ ಮಾಡುವ, ಸಂವಿಧಾನ, ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆಯ ವಿರೋಧಿಗಳನ್ನು ನಾನು ಕಂಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.