ಮರಳೀತೆ 1977ರ ಜನಾದೇಶ?
1970ರ ದಶಕದಲ್ಲಿ ಇಂದಿರಾ ಗಾಂಧಿಯವರು ನಿರಂಕುಶಾಧಿಕಾರವನ್ನು ಕುಟುಂಬದ ಆಡಳಿತದ ಮೇಲಿನ ನಿಷ್ಠೆಯೊಂದಿಗೆ ಜೋಡಿಸಿದ್ದರು. ಈಗ, ನರೇಂದ್ರ ಮೋದಿ ಸರ್ವಾಧಿಕಾರತ್ವವನ್ನು ಹಿಂದೂ ಬಹುಸಂಖ್ಯಾತವಾದದ ಆರಾಧನೆಯೊಂದಿಗೆ ಜೋಡಿಸಿದ್ದಾರೆ. ಕುಟುಂಬ ರಾಜಕಾರಣಕ್ಕಿಂತ ಬಹುಸಂಖ್ಯಾಕ ರಾಜಕಾರಣ ಇನ್ನೂ ಕೆಟ್ಟದ್ದೆಂಬುದಕ್ಕೆ, ನಮ್ಮ ನೆರೆಹೊರೆಯ ದೇಶಗಳ ಭವಿಷ್ಯ ಇಸ್ಲಾಮಿಕ್ ಅಥವಾ ಬೌದ್ಧ ಬಹುಸಂಖ್ಯಾತತೆಯ ಕಾರಣದಿಂದ ಹಿಂದಿಕ್ಕಲ್ಪಟ್ಟಿರುವುದೇ ಸಾಕ್ಷಿ. ಹಿಂದೂ ಬಹುಸಂಖ್ಯಾತತೆಯ ಪರಿಣಾಮ ಇದಕ್ಕಿಂತ ಬೇರೆಯಾಗಿರುತ್ತದೆ ಎಂದು ನಂಬಲು ಆಗದು.
ದೇಶದ 18ನೇ ಸಾರ್ವತ್ರಿಕ ಚುನಾವಣೆಯ ಮತದಾನ ಶುರುವಾಗಿದೆ. ಕಳೆದ ಹದಿನೇಳು ಚುನಾವಣೆಗಳಲ್ಲಿ ವಿಶೇಷವಾಗಿ ಎರಡು ಬಹಳ ಮುಖ್ಯವಾದವುಗಳು. ಒಂದು, 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ. ಭಾರತೀಯರು ತೀರಾ ಬಡವರು, ವಿಭಜಿತರಾದವರು ಮತ್ತು ತಮ್ಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ಬಳಸಲಾರದಷ್ಟು ಅವಿದ್ಯಾವಂತರು ಎಂದು ಭಾವಿಸಿದ್ದ ಸಂದೇಹವಾದಿಗಳು ಆ ಚುನಾವಣಾ ಕಸರತ್ತನ್ನು ವ್ಯಾಪಕವಾಗಿ ಅಪಹಾಸ್ಯ ಮಾಡಿದ್ದರು. ಒಲ್ಲದ ಮನಸ್ಸಿನಿಂದ ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಗೊಂಡ ಮಹಾರಾಜನೊಬ್ಬ, ಅನಕ್ಷರಸ್ಥರ ನಾಡಿನಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ನೀಡುವ ಯಾವುದೇ ಸಂವಿಧಾನ ವಿಲಕ್ಷಣವಾದದ್ದು ಎಂದು, ಇಲ್ಲಿ ಭೇಟಿ ನೀಡಿದ್ದ ಅಮೆರಿಕದ ದಂಪತಿ ಬಳಿ ಹೇಳಿದ್ದ. ಮದ್ರಾಸ್ ಸಂಪಾದಕರೊಬ್ಬರು, ‘ಮೊದಲ ಬಾರಿಗೆ ಬಹು ದೊಡ್ಡ ಸಂಖ್ಯೆಯ ಜನರು ಮತ ಚಲಾಯಿಸುತ್ತಾರೆ. ಮತ ಎಂದರೇನು, ಏಕೆ ಮತ ಹಾಕಬೇಕು ಮತ್ತು ಯಾರಿಗೆ ಮತ ಹಾಕಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಇಡೀ ಸಾಹಸ ಅತಿ ದೊಡ್ಡ ಜೂಜು ಎಂಬಂತೆ ಇತಿಹಾಸದಲ್ಲಿ ದಾಖಲಾದರೆ ಅಚ್ಚರಿಯಿಲ್ಲ’ ಎಂದು ಹೇಳಿದ್ದಿತ್ತು. ಆರೆಸ್ಸೆಸ್ ಸಾಪ್ತಾಹಿಕ ‘ಆರ್ಗನೈಸರ್’, ‘ಭಾರತದಲ್ಲಿ ಸಾರ್ವತ್ರಿಕ ವಯಸ್ಕರ ಮತದಾನದ ಹಕ್ಕಿನ ವೈಫಲ್ಯವನ್ನು ಪಂಡಿತ್ ನೆಹರೂ ಒಪ್ಪಿಕೊಳ್ಳಬೇಕಾಗುತ್ತದೆ’ ಎಂದು ಟೀಕಿಸಿತ್ತು.
ಆದರೂ ಅದು ಫಲ ಕೊಟ್ಟಿತು. ವಿಭಿನ್ನ ಸೈದ್ಧಾಂತಿಕ ನಿಲುವುಗಳನ್ನು ಪ್ರತಿನಿಧಿಸುವ ವಿವಿಧ ಪಕ್ಷಗಳು ಮತ್ತು ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ವಯಸ್ಕ ಪುರುಷರು ಮತ್ತು ಮಹಿಳೆಯರು ಅವರಲ್ಲಿ ತಮಗೆ ಬೇಕಾದವರನ್ನು ಮುಕ್ತವಾಗಿ ಆಯ್ಕೆ ಮಾಡಿದರು. ಆ ಮೊದಲ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದ್ದು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು. ನಂತರ 1957, 1962, 1967 ಮತ್ತು 1971ರ ಚುನಾವಣೆಗಳಿಗೆ 1952ರಲ್ಲಿನ ಯಶಸ್ಸು ಆಧಾರವಾಗಿತ್ತು.
ನಮ್ಮ ಇತಿಹಾಸದಲ್ಲಿ ಎರಡನೇ ನಿಜವಾದ ಮಹತ್ವದ ಸಾರ್ವತ್ರಿಕ ಚುನಾವಣೆ 1977ರ ಮಾರ್ಚ್‌ನಲ್ಲಿ ನಡೆಯಿತು. ಏಕೆಂದರೆ, ಪ್ರಧಾನಿ ಇಂದಿರಾ ಗಾಂಧಿಯವರು 1975ರ ಜೂನ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದಾಗ, ಅದು ಭಾರತದ ಮುಕ್ತ, ಸ್ಪರ್ಧಾತ್ಮಕ ರಾಜಕೀಯದ ಅಂತ್ಯ ಮತ್ತು ನಿರಂಕುಶ ಆಡಳಿತದ ಅಡಿಯಲ್ಲಿ ಬಂದ ಅಸಂಖ್ಯಾತ ಇತರ ಏಶ್ಯನ್ ಮತ್ತು ಆಫ್ರಿಕನ್ ದೇಶಗಳ ಸಾಲಿಗೆ ಭಾರತ ಸೇರಿದಂತಾಯಿತು ಎಂದು ಅನೇಕರು ಭಾವಿಸಿದ್ದರು. ವಾಸ್ತವವಾಗಿ, 1976ರ ದ್ವಿತೀಯಾರ್ಧದಲ್ಲಿ ಬೀದಿಗಳು ಗಮನಾರ್ಹವಾಗಿ ಶಾಂತಿಯುತವಾಗಿದ್ದವು. ನಾನು ಸ್ವತಃ ಅದನ್ನು ಕಂಡಿದ್ದೇನೆ. ಇಂದಿರಾ ಗಾಂಧಿಯವರ ಆಡಳಿತಕ್ಕೆ ಯಾವುದೇ ಸವಾಲು ಅಥವಾ ಬೆದರಿಕೆ ಇರಲಿಲ್ಲ. ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಲು ಮತ್ತು ಹೊಸ ಚುನಾವಣೆಗೆ ಕರೆ ನೀಡಲು ಯಾವುದೇ ಕಾರಣವಿರಲಿಲ್ಲ. ಆದರೂ ಅವರು ಅದನ್ನು ಮಾಡಿದರು.
ಇತಿಹಾಸಕಾರರು 1977ರ ಆ ಚುನಾವಣೆ ವಿಶೇಷವಾಗಿ ಗಮನಾರ್ಹವೆನ್ನಿಸಲು ಕಾರಣವಾದ ಮೂರು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೆಯದು, ಚುನಾವಣೆ ನಡೆಯಿತು ಎಂಬುದೇ ಆಗಿದೆ. ಎರಡನೆಯದು, ಅದರ ಫಲಿತಾಂಶಗಳು ಸಮೀಕ್ಷೆ ನಡೆಸಿದವರನ್ನೇ ಗೊಂದಲದಲ್ಲಿ ಬೀಳಿಸಿದ್ದವು. ಏಕೆಂದರೆ ಇಂದಿರಾ ಗಾಂಧಿ ಗೆಲ್ಲುತ್ತಾರೆ ಎಂದೇ ಸಾಮಾನ್ಯವಾಗಿ ನಿರೀಕ್ಷಿಸಲಾಗಿತ್ತು. ಶ್ರೀಮತಿ ಗಾಂಧಿ ಅತ್ಯಂತ ಜನಪ್ರಿಯ ಎಂದು ಭಾವಿಸಲಾಗಿತ್ತು. 1971ರಲ್ಲಿ ಪಾಕಿಸ್ತಾನದ ವಿರುದ್ಧದ ಮಿಲಿಟರಿ ಗೆಲುವಿನ ಪ್ರಭಾವ ಇಂದಿರಾ ಸುತ್ತಲೂ ಇದೆ ಎಂದು ನಂಬಲಾಗಿತ್ತು. ಅದಲ್ಲದೆ, ಅವರ ಪಕ್ಷದ ಸಂಘಟನೆ ಉತ್ತಮ ಸ್ಥಿತಿಯಲ್ಲಿತ್ತು ಮತ್ತು ಉತ್ತಮ ಹಣಬಲವೂ ಇತ್ತು. ಬಹುತೇಕ ಉನ್ನತ ಕೈಗಾರಿಕೋದ್ಯಮಿಗಳು ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದ್ದರು. ಮತ್ತೊಂದೆಡೆ, ವಿರೋಧ ಪಕ್ಷ ಛಿದ್ರಗೊಂಡಿತ್ತು ಮತ್ತು ಅದರ ಬಳಿ ಹೆಚ್ಚು ಹಣವೂ ಇದ್ದಿರಲಿಲ್ಲ. ಅದರ ನಾಯಕರು ಮತ್ತು ಕಾರ್ಯಕರ್ತರು ಜೈಲಿನಲ್ಲಿ ದೀರ್ಘ ಕಾಲ ಕಳೆದಿದ್ದರು. ಆದರೂ, ಸಮೀಕ್ಷೆಗಳ ಲೆಕ್ಕಾಚಾರಗಳನ್ನೇ ಮೀರಿ, ಕಾಂಗ್ರೆಸ್ ಬಹುಮತದ ಕೊರತೆಯನ್ನು ಎದುರಿಸಿತು. ಸ್ವತಃ ಇಂದಿರಾ ಗಾಂಧಿ ಕೂಡ ಗೆಲ್ಲಲು ವಿಫಲರಾದರು. ಪರಿಣಾಮವಾಗಿ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಹೊಸದಿಲ್ಲಿಯಲ್ಲಿ ಕಾಂಗ್ರೆಸೇತರ ಸರಕಾರ ಅಧಿಕಾರಕ್ಕೆ ಬರುವಂತಾಯಿತು.
ವಿಪಕ್ಷಗಳು ಗೆದ್ದಿದ್ದವು. ಕಾಂಗ್ರೆಸ್ ಸೋತಿತ್ತು. ಭಾರತ ಒಂದೇ ಪಕ್ಷದ ದೇಶವಾಗಿ ಉಳಿಯಲಿಲ್ಲ. 1977ರ ಚುನಾವಣೆಯ ಮೂರು ಗಮನಾರ್ಹ ಲಕ್ಷಣಗಳಿಗೆ ನಾಲ್ಕನೆಯದನ್ನು ಸೇರಿಸಬೇಕು. ಏನೆಂದರೆ, ಒಂದೇ ಹೆಸರಿನಡಿ ಒಟ್ಟಾದ ವಿವಿಧ ಪಕ್ಷಗಳ ಮೈತ್ರಿಕೂಟ ದೀರ್ಘ ಕಾಲದಿಂದ ಪ್ರಬಲವಾಗಿದ್ದ ಕಾಂಗ್ರೆಸ್ ಅನ್ನು ಸೋಲಿಸಿತ್ತು. ಜನತಾ ಪಕ್ಷ ವ್ಯಾಪಕವಾಗಿ ವಿಭಿನ್ನ ಮೂಲ ಮತ್ತು ನಂಬಿಕೆಗಳನ್ನು ಹೊಂದಿದ್ದ ನಾಲ್ಕು ಪಕ್ಷಗಳನ್ನು ಒಳಗೊಂಡಿತ್ತು. ಅವು ನಿರಂಕುಶಾಧಿಕಾರವನ್ನು ಮಣಿಸುವ ಮತ್ತು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಏಕೈಕ ಉದ್ದೇಶದಿಂದ ಒಟ್ಟುಗೂಡಿದ್ದವು.
1977ರಿಂದ 2014ರ ಅವಧಿಯಲ್ಲಿ ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟ ಎರಡು ಅವಧಿಗಳಿಗಿಂತ ಹೆಚ್ಚು ಕಾಲ ಹೊಸದಿಲ್ಲಿಯಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಅಧಿಕಾರದ ಈ ಪರ್ಯಾಯ ಭಾರತೀಯ ಪ್ರಜಾಪ್ರಭುತ್ವಕ್ಕೆ ಸಂಪೂರ್ಣವಾಗಿ ಒಳ್ಳೆಯದು. ಒಂದೇ ಪಕ್ಷದ ದೀರ್ಘಾವಧಿಯ ಪ್ರಾಬಲ್ಯದ ಭಯದಿಂದ ಮುಕ್ತವಾಗುವುದು ಸಾಧ್ಯವಾಯಿತು. ಆ ವರ್ಷಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವಿತ್ತು. ನಾಗರಿಕ ಸೇವೆಗಳು ಹೆಚ್ಚು ಸ್ವತಂತ್ರವಾಗಿದ್ದವು ಮತ್ತು ನ್ಯಾಯಾಂಗ ಹೆಚ್ಚು ದೃಢವಾಗಿತ್ತು. ಯಾವುದೇ ಪಕ್ಷ ಸಾರ್ವಕಾಲಿಕವಾಗಿ ಅಧಿಕಾರದಲ್ಲಿರದ, ರಾಜ್ಯಗಳು ತಮ್ಮ ವೈಯಕ್ತಿಕ ಆರ್ಥಿಕ ಮತ್ತು ಸಾಮಾಜಿಕ ಕಾರ್ಯಸೂಚಿಗಳನ್ನು ಅನುಸರಿಸಲು ಹೆಚ್ಚಿನ ಅವಕಾಶವಿರುವ ಸ್ಪರ್ಧಾತ್ಮಕ ರಾಜಕೀಯ ಭಾರತೀಯ ಒಕ್ಕೂಟ ವ್ಯವಸ್ಥೆಗೆ ತುಂಬಾ ಅಗತ್ಯ.
ಈಗ ನಡೆಯುತ್ತಿರುವ ಚುನಾವಣೆ ಅಂಥ ಸಾಧ್ಯತೆಯನ್ನು ಹಿಂದೆ ತಳ್ಳಲಿದೆಯೇ? ಹೆಚ್ಚಿನ ಸಮೀಕ್ಷೆಗಳು ಹಾಗೆ ಹೇಳುತ್ತಿವೆ. ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ ಸತತ ಮೂರನೇ ಅವಧಿಗೆ ಬಹುಮತದೊಡನೆ ಗೆಲ್ಲುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಆಗ ಏನಾದೀತು?
ನಾನು ಗೌರವಿಸುವ ವಿಶ್ಲೇಷಕ ಪರಕಾಲ ಪ್ರಭಾಕರ್ ಅವರು ‘‘ಮೋದಿ ಮತ್ತು ಬಿಜೆಪಿ ಮೂರನೇ ಬಾರಿಗೆ ಗೆದ್ದರೆ, ದೇಶದಲ್ಲಿ ಇನ್ನು ಮುಂದೆ ಚುನಾವಣೆಗಳೇ ನಡೆಯುವುದಿಲ್ಲ’’ ಎಂದು ಹೇಳಿದ್ದಾರೆ. ಇಂದಿರಾ ಗಾಂಧಿಯವರಂತೆ ಮೋದಿಯವರಿಗೂ ಸರ್ವಾಧಿಕಾರದ ಪ್ರವೃತ್ತಿ ಮತ್ತು ಸಂಪೂರ್ಣ ಪ್ರಾಬಲ್ಯದ ಬಯಕೆ ಇದೆ ಎಂಬುದು ನಿಜ. ಆದರೂ, ಇಂದಿರಾ ಕಾಲದ ರಾಜಕೀಯ ಪರಿಸ್ಥಿತಿ ಮತ್ತು ಮೋದಿ ಕಾಲದ ಸ್ಥಿತಿ ನಡುವೆ ಒಂದು ಗಮನಾರ್ಹ ವ್ಯತ್ಯಾಸವಿದೆ. 1977ರಲ್ಲಿ ಒಂದು ರಾಜ್ಯವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಮತ್ತು ಆ ಒಂದು ರಾಜ್ಯವಾದ ತಮಿಳುನಾಡಿನ ಅವತ್ತಿನ ಮುಖ್ಯಮಂತ್ರಿ ಕೂಡ ಹೊಸದಿಲ್ಲಿ ವಿಚಾರದಲ್ಲಿ ಗೌರವ ಹೊಂದಿದ್ದವರೇ ಆಗಿದ್ದರು. ಆದರೆ ಈಗ ಬಿಜೆಪಿ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಪೂರ್ವ ಮತ್ತು ಉತ್ತರ ಭಾರತದ ಹಲವಾರು ಪ್ರಮುಖ ರಾಜ್ಯಗಳಲ್ಲಿಯೂ ಅಧಿಕಾರದಲ್ಲಿಲ್ಲ.
1975ರಿಂದ 1977ರ ಅವಧಿಯಲ್ಲಿ ಪ್ರಜಾಸತ್ತಾತ್ಮಕ ವಿರೋಧ ಪಕ್ಷವನ್ನು ಸಂಪೂರ್ಣವಾಗಿ ಮೌನವಾಗಿಸುವುದು ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತು. ಆದರೆ, ಲೋಕಸಭೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವ ತಮ್ಮ ಕಲ್ಪನೆಯನ್ನು ಈಡೇರಿಸಿಕೊಂಡರೂ ಮೋದಿ ಮತ್ತು ಬಿಜೆಪಿಗೆ ಹಾಗೆ ವಿಪಕ್ಷಗಳನ್ನು ಸಂಪೂರ್ಣವಾಗಿ ಮೌನವಾಗಿಸುವುದು ಈಗ ತುಂಬಾ ಕಷ್ಟ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಇನ್ನೂ ಜನರಿಂದ ಚುನಾಯಿತವಾದ ಸರಕಾರಗಳು ಅಸ್ತಿತ್ವದಲ್ಲಿವೆ. ಅವುಗಳ ವಿರುದ್ಧ ಮೋದಿ ಮತ್ತು ಶಾ ಏನು ಮಾಡುತ್ತಾರೆ? 356ನೇ ವಿಧಿಯನ್ನು ನಿರ್ದಾಕ್ಷಿಣ್ಯವಾಗಿ ಹೇರುತ್ತಾರೆಯೆ? ಅಥವಾ ವಿಪಕ್ಷಗಳ ಶಾಸಕರನ್ನು ಖರೀದಿಸುತ್ತಾರೆಯೆ? ಆಮಿಷವೊಡ್ಡಿದರೂ, ಅನೈತಿಕ ವಿಧಾನ ಬಳಸಿದರೂ, ಮೋದಿಯ ಆರಾಧನೆಗೆ ಒಪ್ಪದ ಅಥವಾ ಬಿಜೆಪಿಗೆ ಮತ ಹಾಕದ ಆ ರಾಜ್ಯಗಳ ಲಕ್ಷಾಂತರ ಜನರಿಂದ ಆ ನಡೆ ಕಟು ವಿರೋಧಕ್ಕೆ ತುತ್ತಾಗಲಿದೆ.
ಬಿಜೆಪಿಯ ಪ್ರಾಬಲ್ಯ ದೇಶದ ಹೆಚ್ಚಿನ ಭಾಗಗಳಲ್ಲಿ ಇಲ್ಲದ ಕಾರಣ, ಭಾರತ ತುರ್ತು ಪರಿಸ್ಥಿತಿ ಹೊತ್ತಿನ ಪೂರ್ಣ ಪ್ರಮಾಣದ ನಿರಂಕುಶಾಧಿಕಾರಕ್ಕೆ ಮರಳುವ ಸಾಧ್ಯತೆ ಕಡಿಮೆ. ಅದೇನೇ ಇದ್ದರೂ, ಯಾರೂ ಎಚ್ಚರಿಕೆ ನೀಡದೇ ಇದ್ದರೂ, ನಿರಾಳವಾಗಿರಲು ಸಾಧ್ಯವಿಲ್ಲ. ಏಕೆಂದರೆ, ಬಿಜೆಪಿ ಹಿಂದುತ್ವದ ದ್ವೇಷ ತುಂಬಿದ ಮತ್ತು ವಿಭಜನೆಯ ಸಿದ್ಧಾಂತವನ್ನು ಬಳಸುತ್ತದೆ.
ನರೇಂದ್ರ ಮೋದಿ ಅಧಿಕಾರದ ಹತ್ತು ವರ್ಷಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಭಾರತದ ರಾಜಕೀಯದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಅವರು ದೈನಂದಿನ ಜೀವನದಲ್ಲಿ, ಬೀದಿಯಲ್ಲಿ, ಮಾರುಕಟ್ಟೆ ಸ್ಥಳದಲ್ಲಿ, ಶಾಲೆಗಳು, ಆಸ್ಪತ್ರೆಗಳು ಮತ್ತು ಕಚೇರಿಗಳಲ್ಲಿ ಸ್ಥಳೀಯ ತಾರತಮ್ಯವನ್ನು ಎದುರಿಸಿದ್ದಾರೆ. ಬಿಜೆಪಿ ಸಂಸದರು ಮತ್ತು ಮಂತ್ರಿಗಳು ಸತತವಾಗಿ ದೇಶದ ಮುಸ್ಲಿಮರನ್ನು ಅಣಕಿಸುತ್ತ, ಅಪಹಾಸ್ಯ ಮಾಡುತ್ತ ಬಂದಿದ್ದಾರೆ. ಆ ನಿಟ್ಟಿನ ಅವರ ಮಾತುಗಳನ್ನು ಅವರ ಬೆಂಬಲಿಗರು ವಾಟ್ಸ್‌ಆ್ಯಪ್ ಮತ್ತು ಯೂಟ್ಯೂಬ್‌ನಲ್ಲಿ ಇನ್ನಷ್ಟು ಹೆಚ್ಚಿಸುತ್ತಾರೆ. ಹಿಂದೂಗಳಲ್ಲದ ಸಹ ನಾಗರಿಕರ ಬಗ್ಗೆ ಹಗೆತನವನ್ನು ಶಾಲಾ ಮಕ್ಕಳಲ್ಲಿ ಬೆಳೆಸಲು ಪಠ್ಯಪುಸ್ತಕಗಳನ್ನೇ ಮರು ರಚಿಸುವುದೂ ನಡೆದಿದೆ.
ನರೇಂದ್ರ ಮೋದಿ ಮತ್ತು ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರಿದರೆ ಮುಸ್ಲಿಮರನ್ನು ಕಳಂಕಿತರಂತೆ ಬಿಂಬಿಸುವುದು ಮುಂದುವರಿಯುತ್ತದೆ ಮತ್ತು ಬಹುಶಃ ಇನ್ನೂ ತೀಕ್ಷ್ಣವಾಗಿರುತ್ತದೆ. ಮತ್ತೊಂದು ಗೆಲುವು, ವಿಶೇಷವಾಗಿ ಲೋಕಸಭೆಯಲ್ಲಿ ಬಹುಮತದೊಂದಿಗೆ ದೊರೆತಲ್ಲಿ ಮೋದಿ ಮತ್ತು ಅವರ ಪಕ್ಷ ಮಾಧ್ಯಮಗಳ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವುದು ನಿಶ್ಚಿತ. ನಾಗರಿಕ ಸೇವೆಗಳು, ನ್ಯಾಯಾಂಗ ಮತ್ತು ಸಾರ್ವಜನಿಕ ನಿಯಂತ್ರಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ಮತ್ತಷ್ಟು ದುರ್ಬಲಗೊಳಿಸಲು ಇನ್ನೂ ಧೈರ್ಯ ಬರಲಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಐಐಟಿಗಳು ಮತ್ತು ಐಐಎಂಗಳು ಹಿಂದುತ್ವ ಪ್ರಚಾರದ ಕೇಂದ್ರಗಳಾಗಿ ಬಿಡಲಿವೆ. ಭಾರತೀಯ ಒಕ್ಕೂಟ ವ್ಯವಸ್ಥೆ ಮತ್ತಷ್ಟು ದುರ್ಬಲವಾಗಲಿದೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಸ್ಥಾನಗಳ ಮರುವಿಂಗಡಣೆಗೆ ಚಾಲನೆ ಸಿಗಲಿದೆ. ಬಿಜೆಪಿ ಪ್ರಬಲವಾಗಿರುವ ಉತ್ತರದ ಜನಸಂಖ್ಯೆಯ ಲಾಭವನ್ನು ಬಿಜೆಪಿ ದುರ್ಬಲವಾಗಿರುವ ದಕ್ಷಿಣವನ್ನು ರಾಜಕೀಯವಾಗಿ ಅಧೀನವಾಗಿಸಲು ಬಳಸಲಾಗುತ್ತದೆ. ದಕ್ಷಿಣದ ರಾಜ್ಯಗಳು ಅಂಥ ನಿಗ್ರಹಕ್ಕೆ ಸೌಮ್ಯವಾಗಿಯೇ ಬಾಗುವ ಸಾಧ್ಯತೆಯಿಲ್ಲ. ಆದರೂ ಮೋದಿ ಮತ್ತು ಬಿಜೆಪಿ ಯೋಜನೆಗಳು ಅದಾವುದನ್ನೂ ಲೆಕ್ಕಿಸದೆ ಮುಂದುವರಿಯಲಿವೆ.
2007ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ನಾನು ಭಾರತವನ್ನು ‘50-50’ ಪ್ರಜಾಪ್ರಭುತ್ವ ಎಂದು ಹೇಳಿದ್ದೆ. ಒಂದೂವರೆ ದಶಕದ ನಂತರ ಪುಸ್ತಕವನ್ನು ನವೀಕರಿಸು ವಾಗ ನಾನು ಇದನ್ನು ‘30-70’ ಪ್ರಜಾಪ್ರಭುತ್ವಕ್ಕೆ ಇಳಿಸಿದೆ. ಮೋದಿ ಮತ್ತು ಬಿಜೆಪಿಗೆ ಸತತ ಮೂರನೇ ಬಹುಮತ ಈ ಕುಸಿತವನ್ನು ಇನ್ನೂ ತೀವ್ರಗೊಳಿಸುತ್ತದೆ. ನಮ್ಮ ಸಾಮಾಜಿಕ ರಚನೆಗೆ, ನಮ್ಮ ಆರ್ಥಿಕ ನಿರೀಕ್ಷೆಗಳಿಗೆ ಮತ್ತು ಇನ್ನೂ ಹುಟ್ಟದಿರುವ ಭಾರತೀಯರ ತಲೆಮಾರುಗಳ ಭವಿಷ್ಯಕ್ಕೆ ಕೆಡುಕನ್ನು ತರುತ್ತದೆ.
1970ರ ದಶಕದಲ್ಲಿ ಇಂದಿರಾ ಗಾಂಧಿಯವರು ನಿರಂಕುಶಾಧಿಕಾರವನ್ನು ಕುಟುಂಬದ ಆಡಳಿತದ ಮೇಲಿನ ನಿಷ್ಠೆಯೊಂದಿಗೆ ಜೋಡಿಸಿದ್ದರು. ಈಗ, ನರೇಂದ್ರ ಮೋದಿ ಸರ್ವಾಧಿಕಾರತ್ವವನ್ನು ಹಿಂದೂ ಬಹುಸಂಖ್ಯಾತವಾದದ ಆರಾಧನೆಯೊಂದಿಗೆ ಜೋಡಿಸಿದ್ದಾರೆ. ಕುಟುಂಬ ರಾಜಕಾರಣ ಕ್ಕಿಂತ ಬಹುಸಂಖ್ಯಾಕ ರಾಜಕಾರಣ ಇನ್ನೂ ಕೆಟ್ಟದ್ದೆಂಬುದಕ್ಕೆ, ನಮ್ಮ ನೆರೆಹೊರೆಯ ದೇಶಗಳ ಭವಿಷ್ಯ ಇಸ್ಲಾಮಿಕ್ ಅಥವಾ ಬೌದ್ಧ ಬಹುಸಂಖ್ಯಾತತೆಯ ಕಾರಣದಿಂದ ಹಿಂದಿಕ್ಕಲ್ಪಟ್ಟಿರು ವುದೇ ಸಾಕ್ಷಿ. ಹಿಂದೂ ಬಹುಸಂಖ್ಯಾತತೆಯ ಪರಿಣಾಮ ಇದಕ್ಕಿಂತ ಬೇರೆಯಾಗಿರುತ್ತದೆ ಎಂದು ನಂಬಲು ಆಗದು.
ಸರ್ವಾಧಿಕಾರ ಚೈತನ್ಯವನ್ನೇ ಛಿದ್ರಗೊಳಿಸುತ್ತದೆ. ಬಹುತ್ವವಾದ ಮನಸ್ಸು ಮತ್ತು ಹೃದಯವನ್ನು ವಿಷಪೂರಿತವಾಗಿಸುತ್ತದೆ. ಅದು ಹುಟ್ಟುಹಾಕುವ ದ್ವೇಷ ಮತ್ತು ಧರ್ಮಾಂಧತೆ ದೇಹದಲ್ಲಿ ಕ್ಯಾನ್ಸರ್ ಹರಡುವಂತೆ, ರಾಜಕೀಯದ ಮೂಲಕ ವ್ಯಕ್ತಿಗಳು ಮತ್ತು ಸಮಾಜದಿಂದ ನಾಗರಿಕತೆ, ಸಭ್ಯತೆ, ಸಹಾನುಭೂತಿ, ಮಾನವೀಯತೆಯನ್ನೇ ಕಸಿದುಕೊಳ್ಳುತ್ತದೆ. ಅದಕ್ಕಾಗಿಯೇ ನಮ್ಮ ಪಾಲಿಗೆ ಇನ್ನೂ ಉಳಿದಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅವಶ್ಯ. ಅದಕ್ಕಾಗಿಯೇ ಇದು 1977ರ ನಂತರದ ಅತ್ಯಂತ ಮಹತ್ವದ ಸಾರ್ವತ್ರಿಕ ಚುನಾವಣೆಯಾಗಿದೆ.