ಜಾತಿಯ ಕುರಿತು ಲೋಹಿಯಾ ಆಲೋಚನೆಗಳು
ಸಮಾಜದ ಐದು ಕೆಳದರ್ಜೆಯ ಗುಂಪುಗಳಾದ ಮಹಿಳೆಯರು, ಶೂದ್ರರು, ಹರಿಜನರು, ಮುಸ್ಲಿಮರು ಮತ್ತು ಆದಿವಾಸಿಗಳನ್ನು ಅವರ ಅರ್ಹತೆಯನ್ನು ಲೆಕ್ಕಿಸದೆ ನಾಯಕತ್ವದ ಸ್ಥಾನಕ್ಕೆ ಏರಿಸಲು ತಮ್ಮ ಸಹವರ್ತಿ ಸಮಾಜವಾದಿಗಳು ಹೋರಾಟ ಮುನ್ನಡೆಸಬೇಕೆಂದು ಲೋಹಿಯಾ ಬಯಸಿದ್ದರು. ಈ ಅರ್ಹತೆ ಪ್ರಸ್ತುತ ಅಗತ್ಯವಾಗಿ ಕಡಿಮೆಯಾಗಿದೆ. ಮೆರಿಟ್ ಪರೀಕ್ಷೆಗಳು ಕೂಡ ಉನ್ನತ ಜಾತಿಗೆ ಅನುಕೂಲವಾಗುವಂತಿವೆ. ಇತಿಹಾಸದ ಸುದೀರ್ಘ ಯುಗಗಳು ಮಾಡಿದ್ದನ್ನು ಧರ್ಮಯುದ್ಧದಿಂದ ನಿವಾರಿಸಬೇಕಿದೆ ಎಂದಿದ್ದರು.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕೊನೆಯ ದಶಕಗಳಲ್ಲಿ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ವಸಾಹತುಶಾಹಿ ವಿರೋಧಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಸ್ವಾತಂತ್ರ್ಯದ ಮೊದಲ ದಶಕಗಳಲ್ಲಿ ಅವೆರಡೂ ಕಡೆಯವರು ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ಸವಾಲಾಗಿದ್ದರು. ಆ ಆರಂಭಿಕ ಪೀಳಿಗೆಯ ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಧೈರ್ಯ ಮತ್ತು ಆದರ್ಶವಾದ ಮತ್ತಿತರ ಉತ್ತಮ ಗುಣಗಳನ್ನು ಹೊಂದಿದ್ದರು. ಆದರೂ ಅವರು ಒಂದು ವಿಚಾರದಲ್ಲಿ ಕುರುಡಾಗಿದ್ದರು. ಅದೆಂದರೆ, ಭಾರತೀಯ ಸಮಾಜದಲ್ಲಿನ ತಾರತಮ್ಯದ ಪ್ರಮುಖ ರೂಪವಾದ ಜಾತಿ ಅರಿವಿನ ಕೊರತೆ ಅವರಲ್ಲಿತ್ತು. ಅದಕ್ಕೆ ಒಂದು ಅಪವಾದವಾಗಿದ್ದವರೆಂದರೆ, ಸಮಾಜವಾದಿ ಚಿಂತಕ ಮತ್ತು ರಾಜಕಾರಣಿ ರಾಮಮನೋಹರ ಲೋಹಿಯಾ (1910-1967).
ಜಾತಿಯ ಕುರಿತಾದ ಲೋಹಿಯಾ ಬರಹಗಳನ್ನು, ಅವರ ಜೀವಿತಾವಧಿಯಲ್ಲೇ ಹೈದರಾಬಾದ್‌ನಲ್ಲಿನ ಅಭಿಮಾನಿಗಳು ಪ್ರಕಟಿಸಿದ ಪುಸ್ತಕದಲ್ಲಿ ಒಟ್ಟುಗೂಡಿಸಲಾಗಿತ್ತು. ಆ ಪುಸ್ತಕ ಬಹುಕಾಲದಿಂದ ಲಭ್ಯವಿರಲಿಲ್ಲ. ಈಗ ಅದರ ಪರಿಷ್ಕೃತ ಆವೃತ್ತಿಯನ್ನು ಸ್ವತಂತ್ರ ಪ್ರಕಾಶಕರೊಬ್ಬರು ಹೊರತಂದಿದ್ದು, ಕಾಕತಾಳೀಯವೆಂಬಂತೆ ಅವರೂ ಹೈದರಾಬಾದಿನವರೇ ಆಗಿದ್ದಾರೆ.
‘ಅನೇಕ ಸಮಾಜವಾದಿಗಳು ಪ್ರಾಮಾಣಿಕವಾಗಿ, ಆದರೆ ತಪ್ಪಾಗಿ ಆರ್ಥಿಕ ಸಮಾನತೆಗಾಗಿ ಶ್ರಮಿಸಿದರೆ ಸಾಕು ಮತ್ತು ಅದರಿಂದಾಗಿ ಜಾತಿ ಅಸಮಾನತೆ ತಂತಾನೇ ಇಲ್ಲವಾಗುತ್ತದೆ ಎಂದು ಭಾವಿಸುತ್ತಾರೆ. ಯಾವ ಎರಡನ್ನೂ ನಿವಾರಿಸಬೇಕಿತ್ತೋ ಆ ಆರ್ಥಿಕ ಅಸಮಾನತೆ ಮತ್ತು ಜಾತಿ ಅಸಮಾನತೆ ಅವಳಿ ರಾಕ್ಷಸತ್ವದಂತಿರುವುದನ್ನು ಗ್ರಹಿಸಲು ಅವರು ವಿಫಲರಾಗಿದ್ದಾರೆ’ ಎಂದು ಲೋಹಿಯಾ ತಮ್ಮ ಎಡಪಂಥೀಯ ಒಡನಾಡಿಗಳ ಬಗ್ಗೆ ಸರಿಯಾಗಿಯೇ ಹೇಳಿದ್ದಾರೆ.
ಭಾರತೀಯ ಬದುಕಿನಲ್ಲಿ ಜಾತಿಯೇ ದೊಡ್ಡದು ಎಂದು ಸ್ವತಃ ಲೋಹಿಯಾ ಸ್ಪಷ್ಟಪಡಿಸಿದ್ದರು. ಅದನ್ನು ತಾತ್ವಿಕವಾಗಿ ನಿರಾಕರಿಸುವವರು ಆಚರಣೆಯಲ್ಲಿಯೂ ಒಪ್ಪಿಕೊಳ್ಳುತ್ತಾರೆ. ಜನನ, ಮರಣ, ಮದುವೆ, ಹಬ್ಬ ಹರಿದಿನಗಳು ಮತ್ತು ಇತರ ಆಚರಣೆಗಳಂತಹ ಜೀವನದ ಮಹತ್ತರ ಸಂಗತಿಗಳು ಜಾತಿಯ ಚೌಕಟ್ಟಿನೊಳಗೇ ನಡೆಯುತ್ತವೆ ಎಂದು ಅವರು ಹೇಳಿದ್ದರು. ಅದೇ ಜಾತಿಗೆ ಸೇರಿದ ಪುರುಷರು ಈ ನಿರ್ಣಾಯಕ ಕಾರ್ಯಗಳಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಜಾತಿಗಳ ವ್ಯವಸ್ಥೆ ಸ್ಥಿರತೆಯ ಮತ್ತು ಬದಲಾವಣೆಗೆ ವಿರುದ್ಧವಿರುವ ಒಂದು ಭಯಾನಕ ಶಕ್ತಿಯಾಗಿದೆ. ಅದು ಎಲ್ಲಾ ಕೀಳುತನ, ಅವಮಾನ ಮತ್ತು ಸುಳ್ಳುಗಳನ್ನು ಸ್ಥಿರಗೊಳಿಸುತ್ತದೆ. ಉನ್ನತ ಜಾತಿಗಳು ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕವಾಗಿ ತಮ್ಮ ಹಿಡಿತ ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಜಾತಿ ವ್ಯವಸ್ಥೆಯನ್ನು ತಾರತಮ್ಯದ ಮೂಲಕ ವ್ಯಾಖ್ಯಾನಿಸಲಾಗಿದೆ ಮತ್ತು ಜಾರಿಗೊಳಿಸಲಾಗಿದೆ. ಅವರು ಬಂದೂಕಿನ ಮೂಲಕ ಮಾತ್ರ ಅದನ್ನು ಮಾಡಲಾರರು. ಯಾರನ್ನು ಆಳಲು ಮತ್ತು ಶೋಷಿಸಲು ಬಯಸುತ್ತಾರೋ ಅವರಲ್ಲಿ ಅವರು ಕೀಳರಿಮೆಯ ಭಾವನೆಯನ್ನೂ ತುಂಬುತ್ತಾರೆ ಎಂದೂ ಲೋಹಿಯಾ ಹೇಳಿದ್ದರು.
ಲೋಹಿಯಾ ಅವರು ದಲಿತರ (ಹರಿಜನರು ಎಂದು ಅವರು ಕರೆಯುತ್ತಾರೆ) ವಿರುದ್ಧದ ತಾರತಮ್ಯವನ್ನು ನಿರ್ಲಕ್ಷಿಸದಿದ್ದರೂ, ಅವರ ಗಮನ ಸವರ್ಣ ಅಥವಾ ಬ್ರಾಹ್ಮಣ ಮೇಲ್ಜಾತಿಗಳ ನಡುವಿನ ತೀಕ್ಷ್ಣವಾದ ವಿಭಜನೆಯ ಮೇಲೆ ಕೇಂದ್ರೀಕೃತವಾಗಿದೆ. ರಾಜಕೀಯ, ಆಡಳಿತ, ವೃತ್ತಿಪರತೆ, ವ್ಯಾಪಾರ ಮತ್ತು ಬೌದ್ಧಿಕ ವಲಯವನ್ನು ಆಕ್ರಮಿಸಿರುವ ಮೇಲ್ಜಾತಿಗಳು ಮತ್ತು ಅಧಿಕಾರದ ಸ್ಥಾನಗಳಲ್ಲಿ ಹೆಚ್ಚಾಗಿ ಕಾಣದ ಶೂದ್ರ ಜಾತಿಗಳ ನಡುವಿನ ವಿಭಜನೆ ಅದು. 1958ರಲ್ಲಿ ಬರೆಯುತ್ತಾ, ಸವರ್ಣೀಯರು ಭಾರತದ ಜನಸಂಖ್ಯೆಯ ಐದನೇ ಒಂದು ಭಾಗಕ್ಕಿಂತ ಕಡಿಮೆಯಿದ್ದರೂ, ರಾಷ್ಟ್ರೀಯ ಚಟುವಟಿಕೆ, ವ್ಯಾಪಾರ, ಸೇನೆ, ಉನ್ನತ ನಾಗರಿಕ ಸೇವೆಗಳು ಮತ್ತು ರಾಜಕೀಯ ಪಕ್ಷಗಳ ನಾಲ್ಕು ಪ್ರಮುಖ ವಿಭಾಗಗಳ ಉನ್ನತ ನಾಯಕತ್ವದಲ್ಲಿ ಉನ್ನತ ಜಾತಿಗಳು ಸುಲಭವಾಗಿ ಐದನೇ ನಾಲ್ಕು ಭಾಗವನ್ನು ಆಕ್ರಮಿಸಿವೆ. ಈ ಅಸಮತೋಲನವನ್ನು ರಾಷ್ಟ್ರದ ಅಭ್ಯುದಯಕ್ಕಾಗಿ ಸರಿಪಡಿಸಬೇಕಾಗಿದೆ ಎನ್ನುತ್ತಾರೆ. ಸಮಾಜದ ಐದು ಕೆಳದರ್ಜೆಯ ಗುಂಪುಗಳಾದ ಮಹಿಳೆಯರು, ಶೂದ್ರರು, ಹರಿಜನರು, ಮುಸ್ಲಿಮರು ಮತ್ತು ಆದಿವಾಸಿಗಳನ್ನು ಅವರ ಅರ್ಹತೆಯನ್ನು ಲೆಕ್ಕಿಸದೆ ನಾಯಕತ್ವದ ಸ್ಥಾನಕ್ಕೆ ಏರಿಸಲು ತಮ್ಮ ಸಹವರ್ತಿ ಸಮಾಜವಾದಿಗಳು ಹೋರಾಟ ಮುನ್ನಡೆಸಬೇಕೆಂದು ಲೋಹಿಯಾ ಬಯಸಿದ್ದರು. ಈ ಅರ್ಹತೆ ಪ್ರಸ್ತುತ ಅಗತ್ಯವಾಗಿ ಕಡಿಮೆಯಾಗಿದೆ. ಮೆರಿಟ್ ಪರೀಕ್ಷೆಗಳು ಕೂಡ ಉನ್ನತ ಜಾತಿಗೆ ಅನುಕೂಲವಾಗುವಂತಿವೆ. ಇತಿಹಾಸದ ಸುದೀರ್ಘ ಯುಗಗಳು ಮಾಡಿದ್ದನ್ನು ಧರ್ಮಯುದ್ಧದಿಂದ ನಿವಾರಿಸಬೇಕಿದೆ ಎಂದಿದ್ದರು.
ಸಮಾಜವಾದಿಗಳು ಜಾತಿ ಜಾತಿಗಳ ನಡುವೆ, ವಿಶೇಷವಾಗಿ ವರ್ಣ ವರ್ಣಗಳ ನಡುವೆ ಅಂತರ್-ವಿವಾಹವನ್ನು ಉತ್ತೇಜಿಸಬೇಕೆಂದು ಲೋಹಿಯಾ ಒತ್ತಾಯಿಸಿದ್ದರು. ಅವರು ಬರೆದಂತೆ, ಜಾತಿಯ ಅಡೆತಡೆಗಳನ್ನು ಮುರಿದರೆ ಅಥವಾ ಸಡಿಲಗೊಳಿಸಿದರೆ, ಅನೇಕ ಬ್ರಾಹ್ಮಣ ಯುವಕರು ಶೂದ್ರ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ ಮತ್ತು ತಮ್ಮ ಹಾಗೂ ದೇಶದ ನೆಮ್ಮದಿಗೆ ಕಾರಣರಾಗುತ್ತಾರೆ. ಅದೇ ರೀತಿಯಲ್ಲಿ ಶೂದ್ರ ಹುಡುಗರು ಸಹ ಬ್ರಾಹ್ಮಣ ಸ್ತ್ರೀಯರ ಪ್ರಪಂಚವನ್ನು ಮುಕ್ತವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ದ್ವಿಜರು ಮತ್ತು ಶೂದ್ರರು ಪರಸ್ಪರರಿಗಾಗಿ ಮಕ್ಕಳನ್ನು ಪಡೆಯಲು ಇರುವುದೆಂದು ಜಾತಿಯನ್ನು ವ್ಯಾಖ್ಯಾನಿಸಲು ತಿಳಿಯಬೇಕಿರುವುದು ಮಾತ್ರವಲ್ಲ, ಆ ವ್ಯಾಖ್ಯಾನವನ್ನು ಸಹಜವಾಗಿ ಗ್ರಹಿಸುವುದು ಕೂಡ ಅತ್ಯಗತ್ಯ ಎಂಬುದು ಲೋಹಿಯಾ ಪ್ರತಿಪಾದನೆ.
1960ರಲ್ಲಿ ಲೋಹಿಯಾ ಜಾತಿ ಅಧ್ಯಯನ ಮತ್ತು ವಿನಾಶಕ್ಕಾಗಿ ಸಂಘಟನೆ ರಚನೆಗೆ ಕರೆ ನೀಡಿದರು. ಅವರು ಆ ಸಂಘಟನೆಯ ಎಂಟು ನಿರ್ದಿಷ್ಟ ಗುರಿಗಳನ್ನು ವಿವರಿಸಿದ್ದರು. ಅದನ್ನು ಎರಡು ಗುಂಪಾಗಿ ನಾನು ನೋಡುತ್ತೇನೆ. ಮೊದಲನೆಯದಾಗಿ, ಅದು ಧರ್ಮ ಮತ್ತು ಅದರ ಜಾತಿಯ ಕಳಂಕಗಳ ಆಚರಣೆಗಳನ್ನು ಶುದ್ಧೀಕರಿಸುತ್ತದೆ. ಅಂದರೆ, ಅಂತರ್‌ವಿವಾಹ ಮಾತ್ರವೇ ಅಂತಿಮವಾಗಿ ಜಾತಿಗಳನ್ನು ನಿವಾರಿಸುತ್ತದೆ ಮತ್ತು ವೈಜ್ಞಾನಿಕ ಅಧ್ಯಯನಗಳು ಮತ್ತು ಸೃಜನಶೀಲ ಕಲೆಗಳ ಮೂಲಕ ಅದನ್ನು ಪ್ರಚಾರ ಮಾಡುತ್ತದೆ ಎಂದು ನಂಬುವಾಗ, ಸಾಮಾನ್ಯ ಮತ್ತು ಹಬ್ಬದ ಊಟದ ತಕ್ಷಣ ಸಾಧಿಸಬೇಕಿರುವ ಗುರಿಗಳ ಮೇಲೆ ಅದರ ಗಮನವಿರಬೇಕು. ಎರಡನೆಯದಾಗಿ, ಸರಕಾರ, ರಾಜಕೀಯ ಪಕ್ಷಗಳು, ವ್ಯಾಪಾರ ಮತ್ತು ಸಶಸ್ತ್ರ ಸೇವೆಗಳಲ್ಲಿ ನಾಯಕತ್ವದ ಹುದ್ದೆಗಳ ಅರವತ್ತು ಪ್ರತಿಶತವನ್ನು ಕಾನೂನು ಅಥವಾ ಒಗ್ಗೂಡುವಿಕೆ ಮೂಲಕ ಹಿಂದುಳಿದ ಜಾತಿಗಳು ಮತ್ತು ಗುಂಪುಗಳಾದ ಮಹಿಳೆಯರು, ಶೂದ್ರರು, ಹರಿಜನರು, ಆದಿವಾಸಿಗಳು ಮತ್ತು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಕೆಳಜಾತಿಗಳು ಪಡೆಯುವಂತಾಗಲು ಅದು ಹೋರಾಡಬೇಕು ಮತ್ತು ಶಕ್ತಿಯುತವಾಗಿದ್ದರೂ ಛಿದ್ರಗೊಂಡಿರುವ ಕೆಳಜಾತಿಗಳ ಹಕ್ಕುಗಳನ್ನು ಮೇಲ್ಜಾತಿಯವರು ಕಸಿಯದಂತೆ ನೋಡಿಕೊಳ್ಳಬೇಕು.
ಪುಸ್ತಕದಲ್ಲಿ ಮನಸೆಳೆಯುವ ಒಂದು ಭಾಗದಲ್ಲಿ, 1955-56ರಲ್ಲಿ ಡಾ. ಲೋಹಿಯಾ ಮತ್ತು ಅವರ ಸಹೋದ್ಯೋಗಿಗಳ ನಡುವೆ ಮತ್ತು ಡಾ.ಅಂಬೇಡ್ಕರ್ ಜೊತೆಗೆ ವಿನಿಮಯವಾದ ಪತ್ರಗಳ ಸರಣಿಯಿದೆ. ಬಹುಶಃ ಅವರಿಬ್ಬರನ್ನೂ 1957ರ ಸಾರ್ವತ್ರಿಕ ಚುನಾವಣೆಗಳಲ್ಲಿ ಒಂದೇ ವೇದಿಕೆಯಿಂದ ಹೋರಾಡುವುದಕ್ಕೆ ಅವರ ಅನುಯಾಯಿಗಳ ಸಹಿತ ಹತ್ತಿರ ತರುವ ಉದ್ದೇಶದ ಪ್ರಯತ್ನ ಅಲ್ಲಿ ನಡೆದಿತ್ತು.
ಲೋಹಿಯಾ ಅವರು ಅಂಬೇಡ್ಕರ್ ಅವರಿಗೆ ಬರೆದ ಪತ್ರದೊಂದಿಗೆ ಈ ಸರಣಿ ಆರಂಭವಾಗುತ್ತದೆ. ‘ಕೋಪಕ್ಕೆ ಸಹಾನುಭೂತಿ ಸೇರಬೇಕು ಮತ್ತು ನೀವು ಕೇವಲ ಪರಿಶಿಷ್ಟ ಜಾತಿಗಳ ನಾಯಕರಲ್ಲ. ಆದರೆ ಭಾರತೀಯ ಜನರ ನಾಯಕರಾಗಬೇಕು’ ಎಂದು ಲೋಹಿಯಾ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಅವರು ಲೋಹಿಯಾ ಅವರನ್ನು 1956ರ ಅಕ್ಟೋಬರ್ 2ರಂದು (ಅದು ಗಾಂಧಿ ಜಯಂತಿ ಎಂಬುದು ಕೇವಲ ಕಾಕತಾಳೀಯ) ದಿಲ್ಲಿಯಲ್ಲಿ ಭೇಟಿಯಾಗುವಂತೆ ಕೇಳಿಕೊಳುತ್ತಾರೆ. ವಿಷಾದದ ಸಂಗತಿಯೆಂದರೆ, ಲೋಹಿಯಾ ಸದಾ ಸಂಚಾರಿಯಾಗಿದ್ದುದು ಮತ್ತು ಅಂಬೇಡ್ಕರ್ ಅನಾರೋಗ್ಯ ಈ ಇಬ್ಬರೂ ವಿಚಾರವಾದಿಗಳು ತಮ್ಮ ಸಂಭವನೀಯ ಸಹಯೋಗದ ಕುರಿತು ಚರ್ಚಿಸಲು ಭೇಟಿಯಾಗುವುದಕ್ಕೆ ಅವಕಾಶವನ್ನೇ ಕೊಡಲಿಲ್ಲ.
ಅಂಬೇಡ್ಕರ್ 1956ರ ಡಿಸೆಂಬರ್ 6ರಂದು ನಿಧನರಾದರು. ಆಗ ಲೋಹಿಯಾ ತಮ್ಮ ಸಹವರ್ತಿ ಸಮಾಜವಾದಿ ಮಧು ಲಿಮಯೆ ಅವರಿಗೆ ಬರೆದಿದ್ದರು: ‘ಡಾ. ಅಂಬೇಡ್ಕರ್ ನನಗೆ ಭಾರತದ ರಾಜಕೀಯದಲ್ಲಿ ಮಹಾನ್ ವ್ಯಕ್ತಿ ಮತ್ತು ಗಾಂಧೀಜಿಯನ್ನು ಹೊರತುಪಡಿಸಿದರೆ ಹಿಂದೂಗಳಲ್ಲಿ ಶ್ರೇಷ್ಠರು. ಈ ಸತ್ಯ ನನಗೆ ಯಾವಾಗಲೂ ಸಾಂತ್ವನ ಮತ್ತು ಹಿಂದೂ ಧರ್ಮದ ಜಾತಿ ವ್ಯವಸ್ಥೆ ಮುಂದೊಂದು ದಿನ ನಾಶವಾಗಬಹುದು ಎಂಬ ವಿಶ್ವಾಸವನ್ನು ನೀಡಿದೆ. ಅಂಬೇಡ್ಕರ್ ಅವರು ವಿದ್ವಾಂಸರು. ಸಮಗ್ರತೆ, ಧೈರ್ಯ ಮತ್ತು ಸ್ವತಂತ್ರ ಮನೋಧರ್ಮದ ವ್ಯಕ್ತಿ. ಅವರು ಹರಿಜನರಲ್ಲದವರ ನಾಯಕರಾಗಲು ನಿರಾಕರಿಸಿದರು. ಅಂಬೇಡ್ಕರ್ ಅವರಿಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿಯೆಂದರೆ, ಅವರ ಅಭಿಮಾನಿಗಳು ಅಂಬೇಡ್ಕರ್ ಅವರ ಸ್ವತಂತ್ರ ಮನೋಧರ್ಮವನ್ನು ಅನುಸರಿಸುವುದು’ ಎಂದು ಲೋಹಿಯಾ ಭಾವಿಸಿದ್ದರು. ಡಾ.ಅಂಬೇಡ್ಕರ್ ಅಖಿಲ ಭಾರತದ ನಾಯಕರೇ ಹೊರತು ಹರಿಜನರಿಗೆ ಮಾತ್ರವಲ್ಲ ಎಂದು ಲೋಹಿಯಾ ಹೇಳಿದ್ದರು.
ಜಾತಿ ತಾರತಮ್ಯದ ಬಗೆಗಿನ ಲೋಹಿಯಾ ಅವರ ತೀಕ್ಷ್ಣ ತಿಳುವಳಿಕೆ ಅವರನ್ನು ಆ ಕಾಲದ ಇತರ ಸಮಾಜವಾದಿಗಳಿಂದ ಭಿನ್ನವಾಗಿಸಿತ್ತು. ಹಾಗೆಯೇ ಅವರ ಸ್ತ್ರೀವಾದಿ ನಿಲುವು ಕೂಡ. ಅವರು ಬರೆಯುತ್ತಾರೆ: ‘ಭಾರತೀಯರು ಭೂಮಿಯ ಮೇಲಿನ ಅತಿ ದುಃಖಿತರು. ಜಾತಿ ಮತ್ತು ಮಹಿಳೆಯರ ಕುರಿತ ತಾರತಮ್ಯ ಈ ಆತ್ಮದ ಅವನತಿಗೆ ಕಾರಣ.’
‘ಪಿತೃಪ್ರಧಾನ ಸಮಾಜದಲ್ಲಿ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವಂತೆ, ಹೆಣ್ಣಿನ ಸ್ಥಾನ ಅಡುಗೆಮನೆಯಲ್ಲಿ ಎಂದಾದರೆ, ಸಮಾಜವಾದಿಗಳು ಪುರುಷನ ಸ್ಥಾನ ಮಗುವಿನ ಪಾಲನೆಯಲ್ಲಿದೆ ಎಂದು ಪ್ರತಿಪಾದಿಸಬೇಕಿದೆ’ ಎಂದು ಲೋಹಿಯಾ ಬರೆದಿದ್ದಾರೆ. ಇಲ್ಲಿ ಅವರು, ಅರವತ್ತು ಮತ್ತು ಅದಕ್ಕಿಂತ ಹೆಚ್ಚು ವರ್ಷಗಳ ಹಿಂದೆ, ಮಕ್ಕಳ ಆರೈಕೆಯಲ್ಲಿ ಗಂಡ ಮತ್ತು ತಂದೆ ಸಮಾನವಾಗಿ ಭಾಗವಹಿಸಬೇಕು ಎಂದು ವಾದಿಸಿದ್ದರು.
ಈ ಪುಸ್ತಕದ ಮೊದಲ ಲೇಖನ 1953ರಲ್ಲಿ ಬನಾರಸ್‌ನಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಬ್ರಾಹ್ಮಣರ ಪಾದಗಳನ್ನು ತೊಳೆದ ಬಗ್ಗೆ ಬರೆಯಲಾದ ಒಂದು ಕಟು ಟೀಕೆಯಾಗಿದೆ. ಅವರ ಆ ನಡವಳಿಕೆಗೆ ಲೋಹಿಯಾ, ‘ರಾಷ್ಟ್ರಪತಿ ತಮ್ಮ ಗೌರವ ಕಳೆದುಕೊಂಡಿದ್ದಾರೆ ಮತ್ತು ನನ್ನಂತಹ ಲಕ್ಷಾಂತರ ಜನರನ್ನು ಕಳೆದುಕೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ಧಾರೆ. ಲೋಹಿಯಾ ಅವರಿಗೆ ಜಾತಿ ಮತ್ತು ಲಿಂಗ ಶ್ರೇಣಿಗಳನ್ನು ಸಮಾನವಾಗಿ ನಿಂದಿಸಬೇಕಾಗಿತ್ತು. 1950ರ ದಶಕದ ಭಾರತದಲ್ಲಿ, ಪುರೋಹಿತರು ಮತ್ತು ಪಾದರಕ್ಷೆ ತಯಾರಕರು, ಶಿಕ್ಷಕರು ಮತ್ತು ಧೋಬಿಗಳು ಮುಕ್ತವಾಗಿ ಸಂವಾದಿಸುವ ಸಾಧ್ಯತೆಯಿಲ್ಲವಾಗಿರುವುದರಿಂದ, ರಾಷ್ಟ್ರಪತಿ ಬ್ರಾಹ್ಮಣರ ಪಾದಗಳನ್ನು ತೊಳೆಯುತ್ತಿರುವುದರಿಂದ ತೀವ್ರ ವಿಷಾದವೊಂದು ಮೇಲುಗೈ ಸಾಧಿಸಿದಂತಾಗಿದೆ ಎಂದು ಲೋಹಿಯಾ ಬರೆದಿದ್ದರು. ಲೋಹಿಯಾ ಇಲ್ಲಿ ಭ್ರಾತೃತ್ವದ ಮನೋಭಾವವನ್ನು ಅಂಬೇಡ್ಕರ್ ಅವರೇ ಒಪ್ಪಬಹುದಾದ ನುಡಿಗಟ್ಟುಗಳು ಮತ್ತು ಭಾವನೆಗಳಲ್ಲಿ ಪ್ರತಿಪಾದಿಸಿದ್ದರು.
ಈ ಅಂಕಣದಲ್ಲಿ ಉಲ್ಲೇಖಿಸಲಾದ ಲೇಖನಗಳು, ಪತ್ರಗಳು ಮತ್ತು ಭಾಷಣಗಳನ್ನು ಬರೆಯಲಾಗಿರುವುದು 1953ರಿಂದ 1961ರ ಅವಧಿಯಲ್ಲಿ. ಬ್ರಾಹ್ಮಣರು 1950ರ ದಶಕದಲ್ಲಿ ಮಾಡಿದಂತೆ ರಾಜಕೀಯ ಮತ್ತು ಆಡಳಿತದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿಲ್ಲದೇ ಇರಬಹುದು. ಆದರೂ ಸಂಸ್ಕೃತಿ ಮತ್ತು ಆರ್ಥಿಕ ಜೀವನದಲ್ಲಿ ಅವರು ಜನಸಂಖ್ಯೆಯಲ್ಲಿ ತಮ್ಮ ಪಾಲಿನ ಅನುಪಾತಕ್ಕಿಂತ ದೊಡ್ಡ ಮಟ್ಟದಲ್ಲಿ ಪ್ರಭಾವಿ ಗಳಾಗಿದ್ದಾರೆ. ಆದ್ದರಿಂದ, ಅನೇಕ ವಿಷಯಗಳಲ್ಲಿ ಲೋಹಿಯಾ ಅವರ ಆಲೋಚನೆಗಳು ಮತ್ತು ಜಾತಿಯ ಕುರಿತ ವಿಚಾರಗಳು ಗಮನಾರ್ಹವಾಗಿ ಪ್ರಸ್ತುತವಾಗಿವೆ.