ನಿವೃತ್ತಿಯ ಕಾಲ

ಸಾಧ್ಯವಾದಷ್ಟು ಕಾಲ ಅಗ್ರಸ್ಥಾನದಲ್ಲಿರುವ ಸಿಂಡ್ರೋಮ್‌ನಿಂದ ಶಕ್ತಿಶಾಲಿ ಮತ್ತು ಯಶಸ್ವಿ ಮಹಿಳೆಯರು ಹೊರತಾಗಿಲ್ಲವಾದರೂ, ಇದು ಪುರುಷರಲ್ಲಿಯೇ ಹೆಚ್ಚು ಕಾಣಿಸುವ ಪ್ರವೃತ್ತಿಯಾಗಿದೆ. ಆದರೆ ಉಬೈದ್ ಸಿದ್ದೀಕಿ ಒಂದು ಅಪವಾದ. ರಾಜಕೀಯ, ಕ್ರೀಡೆ, ಉದ್ಯಮ, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಅಸಂಖ್ಯಾತ ಭಾರತೀಯ ಪುರುಷರು ಪ್ರಸ್ತುತ ಅಮೆರಿಕನ್ ಅಧ್ಯಕ್ಷರು ಬಯಸಿದಂತೆಯೇ ಅಧಿಕಾರದಲ್ಲಿದ್ದಾರೆ ಮತ್ತು ಮುಂದುವರಿಯಲು ಬಯಸುತ್ತಾರೆ. ದೂರದೃಷ್ಟಿಯದ್ದಲ್ಲದ ಮತ್ತು ಸ್ವಯಂಕೇಂದ್ರಿತವಾದ ಅಂಥ ನಡವಳಿಕೆಯ ಹಾನಿಕಾರಕ ಪರಿಣಾಮದ ಹೊರೆಯನ್ನು ಅವರ ಹೆಚ್ಚು ಪ್ರತಿಭಾನ್ವಿತ ಕಿರಿಯ ಸಹೋದ್ಯೋಗಿಗಳು ಮತ್ತು ಒಟ್ಟಾರೆಯಾಗಿ ಈ ಸಮಾಜವೇ ಹೊರಬೇಕಾಗುತ್ತದೆ.

Update: 2024-07-27 06:21 GMT

ನನ್ನ ದೇಶವನ್ನು ಹೊರತುಪಡಿಸಿ ನನಗೆ ಚೆನ್ನಾಗಿ ತಿಳಿದಿರುವ ದೇಶವೆಂದರೆ ಅಮೆರಿಕ. ನಾನು ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿದ್ದು ಮೂವತ್ತೆಂಟು ವರ್ಷಗಳ ಹಿಂದೆ. ಆನಂತರ ಹಲವು ಬಾರಿ ಹೋಗಿದ್ದಿದೆ. ಕಡೆಯದಾಗಿ ಅಲ್ಲಿಗೆ ಹೋದದ್ದು ೨೦೨೩ರ ಬೇಸಿಗೆಯಲ್ಲಿ. ಜೋ ಬೈಡನ್ ಅಧ್ಯಕ್ಷರಾಗಿ ಆಗಿನ್ನೂ ಎರಡು ವರ್ಷಗಳಷ್ಟೇ ಕಳೆದಿದ್ದವು. ನಾನು ಆ ಪ್ರವಾಸದಲ್ಲಿ ಸುಮಾರು ಮೂರು ವಾರಗಳನ್ನು ಅಲ್ಲಿ ಕಳೆದಿದ್ದೆ. ಸ್ನೇಹಿತರೊಂದಿಗಿನ ಮಾತುಕತೆಗಳು ಮತ್ತು ನನ್ನ ಸ್ವಂತ ಅವಲೋಕನಗಳಿಂದ, ಅವರು ಅತ್ಯುತ್ತಮ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿತ್ತು. ಟ್ರಂಪ್ ಅಧಿಕಾರದ ಅವಧಿಯ ಕೆಟ್ಟ ಧ್ರುವೀಕರಣವನ್ನು ದಾಟಲು ಹೊಸ ಅಧ್ಯಕ್ಷರು ಅಮೆರಿಕನ್ನರಿಗೆ ನೆರವಾಗಿದ್ದರು. ಈಗ ಅವರ ವಯಸ್ಸು ಮತ್ತು ದೌರ್ಬಲ್ಯಗಳ ಹಿನ್ನೆಲೆಯಲ್ಲಿ, ಅವರು ಎರಡನೇ ಅವಧಿಗೆ ಸ್ಪರ್ಧಿಸಬಾರದು ಮತ್ತು ಅವರ ಸ್ಥಾನಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪಕ್ಷಕ್ಕೆ ಅವಕಾಶ ಮಾಡಿಕೊಡಬೇಕೆಂಬ ಆಗ್ರಹವೂ ಅಷ್ಟೇ ಸ್ಪಷ್ಟವಾಗಿತ್ತು.

ಆದರೆ ಮೊದ ಮೊದಲು ಬೈಡನ್ ಇದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ ಮತ್ತು ಎರಡನೇ ಅವಧಿಗಾಗಿ ಸಕ್ರಿಯವಾಗಿ ಪ್ರಯತ್ನಿಸಿದ್ದರು. ಡೊನಾಲ್ಡ್ ಟ್ರಂಪ್ ಜೊತೆಗಿನ ಸಂವಾದದಲ್ಲಿ ಬೈಡನ್ ಅವರ ನೀರಸ ಪ್ರದರ್ಶನದ ನಂತರವಂತೂ ಅವರು ಹಿಂದೆ ಸರಿಯಬೇಕೆಂಬ ಒತ್ತಾಯವನ್ನು ಡೆಮಾಕ್ರಟಿಕ್ ಬೆಂಬಲಿಗರು, ಕಾಂಗ್ರೆಸ್ ಸದಸ್ಯರು ಮತ್ತು ಸೆನೆಟರ್‌ಗಳು ತೀವ್ರಗೊಳಿಸಿದ್ದರು. ಬೈಡನ್ ತಮ್ಮ ಪ್ರತಿಸ್ಪರ್ಧಿಗಿಂತ ಹೆಚ್ಚು ಹಿನ್ನಡೆ ಕಂಡಿರುವುದು ಸಮೀಕ್ಷೆಗಳಿಂದ ಗೊತ್ತಾಗಿತ್ತು. ಅದೇನೇ ಇದ್ದರೂ, ಹಲವಾರು ವಾರಗಳವರೆಗೆ ಬೈಡನ್ ಸ್ಪರ್ಧೆಯಲ್ಲಿ ಉಳಿಯುವ ಹಠವನ್ನೇ ಮುಂದುವರಿಸಿದ್ದರು. ಅಂತಿಮವಾಗಿ ಅವರು ಹಿಂದೆ ಸರಿದಿದ್ದಾರೆ.

ಪ್ರಸಕ್ತ ಅಮೆರಿಕದ ಅಧ್ಯಕ್ಷರ ಹುದ್ದೆಗೆ ಅಂಟಿಕೊಳ್ಳುವ ಈ ಹತಾಶೆ ಅವರದೇ ವೈಯಕ್ತಿಕ ಲಕ್ಷಣವೇನೂ ಅಲ್ಲ. ಬದಲಿಗೆ ಅದು, ಅಧಿಕಾರ ಮತ್ತು ವೃತ್ತಿಪರ ಯಶಸ್ಸನ್ನು ಅನುಭವಿಸಿದ ಎಲ್ಲರೂ ಈ ನೆಲದ ಮೇಲಿನ ಪ್ರತಿಯೊಂದು ದೇಶದಲ್ಲಿಯೂ ಹೇಗೆ ವರ್ತಿಸುತ್ತಾರೆ ಎಂಬುದರ ಲಕ್ಷಣವಾಗಿದೆ. ಅವರ ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಗಳು ಕ್ಷೀಣಿಸಿದಾಗಲೂ, ಇನ್ನು ಮುಂದೆ ತಮ್ಮ ಕೆಲಸವನ್ನು ಉತ್ತಮವಾಗಿ ಅಥವಾ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂಬುದರ ಸೂಚನೆ ಕಂಡಾಗಲೂ, ಅಧಿಕಾರದಲ್ಲಿರುವವರು ಇನ್ನೂ ಉಳಿಯಲು ಬಯಸುತ್ತಾರೆ ಮತ್ತು ತಾವು ಸೇವೆ ಸಲ್ಲಿಸುವ ಸಂಸ್ಥೆ ಅಥವಾ ಸಮಾಜಕ್ಕೆ ಹಾನಿಯುಂಟು ಮಾಡುತ್ತಾರೆ. ತಮ್ಮದೇ ಘನತೆಗೂ ಧಕ್ಕೆಯಾಗುವಂತೆ ವರ್ತಿಸುತ್ತಾರೆ.

ಭಾರತದಲ್ಲಿ, ಇಂಥದ್ದರ ಕುರಿತ ನೋವಿನ ಅನುಭವ ಇರುವವರು ಬಹುಶಃ ಕ್ರಿಕೆಟ್ ಅಭಿಮಾನಿಗಳು. ಒಬ್ಬ ಕ್ರೀಡಾಪಟು ಮೂವತ್ತೈದು ದಾಟಿದ ನಂತರ, ಮೊದಲಿನಂತೆ ಉತ್ತಮ ಪ್ರದರ್ಶನ ತೋರಿಸಲು ಕಷ್ಟವಾಗುತ್ತದೆ. ಆದರೆ ಕೆಲವರು ಮಾತ್ರವೇ ಅದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಒಂದು ಅಪವಾದವೆಂದರೆ ಸುನಿಲ್ ಗವಾಸ್ಕರ್. ಅವರು ವಿಶ್ವಕಪ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ತೋರಿಸಿದ ನಂತರ ಆಟವನ್ನು ತೊರೆದರು. ಅವರ ಸಹ ಆಟಗಾರ ಜಿ.ಆರ್. ವಿಶ್ವನಾಥ್ ನಿಜವಾಗಿ ನಿವೃತ್ತರಾಗುವ ಹಲವಾರು ವರ್ಷಗಳ ಮೊದಲೇ ನಿವೃತ್ತರಾಗಬೇಕಿತ್ತು. ಕಪಿಲ್ ದೇವ್ ತುಂಬಾ ದೀರ್ಘ ಕಾಲ ಉಳಿದುಕೊಂಡರು. ಸಚಿನ್ ತೆಂಡೂಲ್ಕರ್ ಪ್ರತೀ ಸಂದರ್ಭದಲ್ಲಿಯೂ ತಂಡದ ಹಿತಾಸಕ್ತಿಗಳಿಗಿಂತಲೂ ವೈಯಕ್ತಿಕ ಮಹತ್ವಾಕಾಂಕ್ಷೆಗೆ ಒತ್ತು ಕೊಟ್ಟರು.

ಕಿರಿಯರಿಗೆ ಅವಕಾಶ ಮಾಡಿಕೊಡಲು ವಿವೇಕ ಮತ್ತು ಸ್ವಾಭಿಮಾನ ಅಗತ್ಯವಿರುವಾಗಲೂ, ಅಧಿಕಾರದಲ್ಲಿ ಉಳಿಯುವ ಮತ್ತು ಅಧಿಕಾರವನ್ನು ಚಲಾಯಿಸುವ ಈ ಬಯಕೆ ರಾಜಕೀಯ ಮತ್ತು ಕ್ರೀಡಾ ಕ್ಷೇತ್ರಗಳಲ್ಲಲ್ಲದೆ ಇತರ ಕ್ಷೇತ್ರಗಳಲ್ಲಿಯೂ ಕಾಣಿಸುತ್ತದೆ. ನಮ್ಮ ಹಲವಾರು ಗಮನಾರ್ಹ ಉದ್ಯಮಿಗಳು ತಾವು ಸ್ಥಾಪಿಸಿದ ಸಂಸ್ಥೆಗಳಲ್ಲಿ ಮುಂದುವರಿಯುವ ಮೂಲಕ ತಮ್ಮ ಹಿಂದಿನ ಕೊಡುಗೆಗಳನ್ನೇ ದುರ್ಬಲಗೊಳಿಸಿದ್ದಾರೆ. ಹೆಚ್ಚು ಸಮರ್ಥ ಕಿರಿಯ ಸಹೋದ್ಯೋಗಿಗಳು ಅವರಿಂದ ಅಧಿಕಾರ ವಹಿಸಿಕೊಳ್ಳಬೇಕು ಎಂಬುದು ಸ್ಪಷ್ಟವಾಗಿದೆ. ಆದರೆ, ಸಂಸ್ಥೆಗೆ ಆಗುವ ಹಾನಿ ಏನೇ ಇರಲಿ, ತಾನು ಸಾಧ್ಯವಾದಷ್ಟು ಕಾಲ ಚುಕ್ಕಾಣಿ ಹಿಡಿದಿರಬೇಕು ಎನ್ನುವ ಬಯಕೆಯೇ ನಾಗರಿಕ ಸಮಾಜದಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ.

ಈ ಅಸ್ವಸ್ಥ ಬಯಕೆ ಬೌದ್ಧಿಕ ಬದುಕನ್ನೂ ಬಾಧಿಸಿದೆ. ‘ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ ಪ್ರಕರಣವನ್ನು ಗಮನಿಸಬೇಕು. ಮುಂಬೈಯಿಂದ ಪ್ರಕಟವಾಗುತ್ತಿದ್ದ ಈ ಸಾಮಾಜಿಕ ವಿಜ್ಞಾನ ನಿಯತಕಾಲಿಕ ಒಂದು ಕಾಲದಲ್ಲಿ ನಿಜವಾದ ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿತ್ತು. ಭಾರತದಲ್ಲಿನ, ಹಾಗೆಯೇ ಪ್ರಪಂಚದ ಇತರೆಡೆಗಳಲ್ಲಿನ ಪ್ರತಿಯೊಬ್ಬ ಯುವ ವಿದ್ವಾಂಸರು ಒಮ್ಮೆಯಾದರೂ ಅದರಲ್ಲಿ ಪ್ರಕಟಿಸಲು ಹಾಗೂ ಅದನ್ನು ಓದಲು ಹೆಚ್ಚು ಬಯಸುತ್ತಿದ್ದರು. ವಿದ್ವಾಂಸರು ಮತ್ತು ಸಂಶೋಧಕರಷ್ಟೇ ಆಸಕ್ತಿಯಿಂದ ಪತ್ರಕರ್ತರು, ಅಧಿಕಾರಿಗಳು, ಹೋರಾಟಗಾರರು ಅದನ್ನು ಗಮನಿಸುತ್ತಿದ್ದರು. ಆದರೂ ಇತ್ತೀಚಿನ ವರ್ಷಗಳಲ್ಲಿ ಜರ್ನಲ್ ಸತತ ಅವನತಿಗೆ ಒಳಗಾಗಿದೆ. ಅದು ಈಗ ಪ್ರಕಟಿಸುವ ಪ್ರಬಂಧಗಳು ಅಪರೂಪಕ್ಕೊಮ್ಮೆಯಷ್ಟೇ ಹೊಸತನದಿಂದ ಕೂಡಿರುತ್ತವೆ. ಒಂದು ಕಾಲದಲ್ಲಿ ಭಾರತದಲ್ಲಿ ಪಾಂಡಿತ್ಯಪೂರ್ಣ ಚರ್ಚೆಗೆ ಅವಕಾಶ ತೆರೆದಿದ್ದ ನಿಯತಕಾಲಿಕ ಈಗ ಅದರ ಹಳೆಯ ಶಕ್ತಿಯ ಮಸುಕಾದ ನೆರಳಿನಂತೆ ಪೇಲವವಾಗಿದೆ.

ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ ಖ್ಯಾತಿ ಕುಸಿಯುವುದಕ್ಕೆ ಪ್ರಮುಖ ಕಾರಣವೆಂದರೆ, ಜರ್ನಲ್ ನಿರ್ವಹಣೆ ಟ್ರಸ್ಟ್ ಮೂಲಕ ನಡೆಯುತ್ತದೆ. ಅದರ ಸದಸ್ಯರದು (ಅಮೆರಿಕನ್ ಸುಪ್ರೀಂ ಕೋರ್ಟ್‌ನಂತೆ) ಜೀವಮಾನದ ಅಧಿಕಾರಾವಧಿ. ಹತ್ತು ಟ್ರಸ್ಟಿಗಳಲ್ಲಿ ಕಿರಿಯರಾಗಿರುವವರ ವಯಸ್ಸು ಅರವತ್ತೊಂಬತ್ತು ವರ್ಷ. ಅತ್ಯಂತ ಹಿರಿಯರ ವಯಸ್ಸು ತೊಂಬತ್ಮೂರು. ಹತ್ತರಲ್ಲಿ ಒಂಭತ್ತು ಮಂದಿ ಪುರುಷರೇ ಇದ್ದಾರೆ. ಒಟ್ಟಾರೆಯಾಗಿ ಟ್ರಸ್ಟ್‌ನ ಸದಸ್ಯರ ಸರಾಸರಿ ವಯಸ್ಸು ಎಂಬತ್ತರ ಹತ್ತಿರದಲ್ಲಿದೆ. ಮತ್ತೊಂದೆಡೆ, ಸಮಾಜ ವಿಜ್ಞಾನದಲ್ಲಿ ಅತ್ಯುತ್ತಮ ಪಾಂಡಿತ್ಯ ತೋರಬಲ್ಲ ಸಂಶೋಧಕರು ಮೂವತ್ತು ಅಥವಾ ನಲವತ್ತರ ಆಸುಪಾಸಿನವರಾಗಿರುತ್ತಾರೆ. ಜರ್ನಲ್ ಅನ್ನು ನಡೆಸುವವರು ಮತ್ತು ಅದಕ್ಕೆ ಬರೆಯುವ ಪ್ರಮುಖ ಸಂಶೋಧಕರ ನಡುವಿನ ವಯಸ್ಸಿನಲ್ಲಿ ಹೊಂದಾಣಿಕೆಯೇ ಇಲ್ಲದಿರುವಾಗ, ಅದು ಕಷ್ಟಪಟ್ಟು ಗಳಿಸಿದ ಖ್ಯಾತಿಯನ್ನು ಹೆಚ್ಚಿಸಲು ಹೇಗೆ ಸಾಧ್ಯ?

ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ ಸ್ವಯಂಪ್ರೇರಿತ ಅವನತಿ ನನಗೆ ಪರಿಚಿತವಾಗಿರುವ ಇನ್ನೊಂದು ಬೌದ್ಧಿಕ ಸಂಸ್ಥೆಯ ಸ್ವಯಂ ನವೀಕರಣದ ಸಂದರ್ಭಕ್ಕೆ ಪೂರ್ತಿ ವಿರುದ್ಧವಾಗಿದೆ. ಅದು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾಗಿರುವ ಆ ಸಂಸ್ಥೆ ೧೯೪೦ರ ದಶಕ ದಲ್ಲಿ ಮುಂಬೈಯಲ್ಲಿ ಸ್ಥಾಪನೆಯಾಯಿತು. ಮೊದಲ ಒಂದೂವರೆ ದಶಕದಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಭೌತ ವಿಜ್ಞಾನಿಗಳು ಮತ್ತು ಗಣಿತಜ್ಞರಿಂದ ಪ್ರಾಬಲ್ಯ ಹೊಂದಿತ್ತು. ಹಾಗಿದ್ದರೂ, ೧೯೬೦ರ ದಶಕದಲ್ಲಿ ಅದು ಪ್ರತಿಭಾವಂತ ಯುವ ಜೀವಶಾಸ್ತ್ರಜ್ಞ ಉಬೈದ್ ಸಿದ್ದೀಕಿ ಅವರನ್ನು ನೇಮಿಸಿಕೊಂಡಿತು. ಅವರು ಇಪ್ಪತ್ತು ವರ್ಷಗಳ ಕಾಲ ಸಂಸ್ಥೆಯ ಮುಖ್ಯ ಕ್ಯಾಂಪಸ್‌ನಲ್ಲಿ ಕೆಲಸ ಮಾಡಿದ ನಂತರ, ಜೈವಿಕ ಸಂಶೋಧನೆಗಾಗಿ ಹೊಸ ಸಂಸ್ಥೆಯನ್ನು ಸ್ಥಾಪಿಸಲು ಬೆಂಗಳೂರಿಗೆ ತೆರಳಿದರು.

ನಾನು ಅಧ್ಯಯನದಿಂದ ಸಮಾಜಶಾಸ್ತ್ರಜ್ಞ ನಾಗಿದ್ದರೂ, ನನಗೆ ಭಾರತೀಯ ವಿಜ್ಞಾನದ ಪ್ರಪಂಚದೊಂದಿಗೆ ಹೆಚ್ಚು ಸಂಪರ್ಕವಿದೆ. ಪೋಷಕರು ಮತ್ತು ಅಜ್ಜಿಯರು ಸೇರಿದಂತೆ ಕುಟುಂಬದ ಹಲವಾರು ನಿಕಟ ಸದಸ್ಯರು ವಿಜ್ಞಾನಿಗಳಾಗಿದ್ದರು. ನಾನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಬೋಧಕನಾಗಿ ಕೆಲಸ ಮಾಡಿದ್ದೇನೆ. ನನಗೆ ತಿಳಿದಿರುವ ಯಾವುದೇ ಭಾರತೀಯ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಅತ್ಯಂತ ಕಡಿಮೆ ಶ್ರೇಣೀಕೃತ ಸಂಸ್ಥೆಯಾಗಿದೆ ಎಂಬುದನ್ನು ಗಮನಿಸಿದ್ದೇನೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರಕ್ಕೆ ಸಂಯೋಜಿತವಾಗಿರುವ ಮೂವತ್ತೇಳು ಪ್ರಯೋಗಾಲಯಗಳಲ್ಲಿ ಹೆಚ್ಚಾಗಿ ಇಲ್ಲದಿರುವ ಸಾಮೂಹಿಕತೆ, ಮುಕ್ತ ಬೌದ್ಧಿಕ ವಿನಿಮಯದ ಮನೋಭಾವ ಆ ಸಂಸ್ಥೆಯಲ್ಲಿ ಮಾತ್ರ ಇದೆ. ಐಐಟಿಗಳಲ್ಲಿಯೂ ಇಂಥ ಸನ್ನಿವೇಶ ಗೋಚರಿಸದು. ಅಲ್ಲಿ ಸೇವೆ ಸಲ್ಲಿಸುವ ಹಿರಿಯ ಡೀನ್‌ಗಳು ಮತ್ತು ನಿರ್ದೇಶಕರು ತಮ್ಮ ಕಿರಿಯರಿಗಿಂತಲೂ ಹೆಚ್ಚು ಮೂಲ ಸಂಶೋಧನೆಯನ್ನು ಮಾಡುತ್ತಿರುವವರಾಗಿದ್ದಾರೆ ಮತ್ತು ಅವರನ್ನು ಕಿರಿಯ ಸಹೋದ್ಯೋಗಿಗಳು ತೋರಿಕೆಗಷ್ಟೇ ಗೌರವಿಸುತ್ತಾರೆ.

ಉಬೈದ್ ಸಿದ್ದೀಕಿ ಅವರನ್ನು ಹತ್ತಿರದಿಂದ ನೋಡಿದ ನನಗೆ ಅವರು ಈ ಪ್ರಜಾಸತ್ತಾತ್ಮಕ ಮತ್ತು ಸಹಭಾಗಿತ್ವದ ನೀತಿಯನ್ನು ಪೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಅವರ ಪೀಳಿಗೆಯ ಇತರ ಉನ್ನತ ಭಾರತೀಯ ವಿಜ್ಞಾನಿಗಳಿಗಿಂತ ಅವರು ಭಿನ್ನವಾಗಿದ್ದರು. ಅವರು ಆಡಂಬರಕ್ಕಾಗಲಿ ಅಥವಾ ಶ್ರೇಣಿಯ ಕಾರಣಕ್ಕಾಗಲಿ ಗೌರವ ತೋರಿಸಿದವರಲ್ಲ. ವಿಜ್ಞಾನಕ್ಕೆ ಅತ್ಯುತ್ತಮ ಕೊಡುಗೆ ಯುವ ಪೀಳಿಗೆಯಿಂದಷ್ಟೇ ಸಾಧ್ಯ ಎಂದು ಅವರು ತಿಳಿದಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ಮತ್ತು ಅಧಿಕಾರ ನೀಡುವುದನ್ನು ಕರ್ತವ್ಯವೆಂದು ಅವರು ನಂಬಿದ್ದರೇ ಹೊರತು ತಾನೇ ಅವುಗಳನ್ನೆಲ್ಲ ಹೊಂದಿರಬೇಕು ಎಂದುಕೊಂಡವರಾಗಿರಲಿಲ್ಲ. ಅವರು ವಿಜ್ಞಾನದ ಹೊರಗಿನ ಪ್ರಪಂಚದಲ್ಲಿಯೂ ಆಳವಾದ ಆಸಕ್ತಿ ಹೊಂದಿದ್ದರು. ತತ್ವಜ್ಞಾನಿಗಳು, ಇತಿಹಾಸಕಾರರು ಮತ್ತು ಸಾಮಾಜಿಕ ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯಕ್ಕೆ ಅವರು ಪ್ರಯತ್ನಿಸಿದ್ದರು.

ಸಿದ್ದೀಕಿ ತಮ್ಮ ನಿರ್ದೇಶಕ ಅವಧಿ ಮುಗಿದ ನಂತರ, ಅವರು ಬೆಳೆಸಿದ ಸಂಸ್ಥೆಯ ಸುತ್ತ ಕೂಡ ಸುಳಿಯಲಿಲ್ಲ. ಅವರ ಸ್ಥಾನದಲ್ಲಿದ್ದ ಇತರ ಭಾರತೀಯರು ಅದನ್ನು ಮಾಡಿರಬಹುದು. ಅವರು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ಹೊಣೆಗಾರಿಕೆಯನ್ನು ಒಬ್ಬ ಅತ್ಯುತ್ತಮ ಕಿರಿಯ ಸಹೋದ್ಯೋಗಿಗೆ ಬಿಟ್ಟುಕೊಟ್ಟರು ಮತ್ತು ತಮ್ಮದೇ ಆದ ಸಂಶೋಧನಾ ಕೆಲಸಕ್ಕಾಗಿ ಹೊರಟರು. ಈ ಎರಡನೇ ನಿರ್ದೇಶಕರನ್ನು ಮುಂದಿನ ಪೀಳಿಗೆಯ ಉತ್ತಮ ವಿಜ್ಞಾನಿಗೆ ಸ್ಥಾನ ಬಿಟ್ಟುಕೊಟ್ಟರು ಮತ್ತು ಅವರು ಕೂಡ ಅಷ್ಟೇ ಸುಗಮವಾಗಿ ನಾಲ್ಕನೆಯವರಿಗೆ ಅಧಿಕಾರ ಹಸ್ತಾಂತರಿಸಿದರು.

ಉಬೈದ್ ಸಿದ್ದೀಕಿ ಅಂಥ ಅಪರೂಪದ ವ್ಯಕ್ತಿಯಾಗಿರದೇ ಹೋಗಿದ್ದರೆ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಈಗಿನಂತೆ ಅಭಿವೃದ್ಧಿ ಹೊಂದುತ್ತಿರಲಿಲ್ಲ. ಸಂಸ್ಥೆಯ ನಿರಂತರ ಯಶಸ್ಸಿಗೆ ಮತ್ತೊಂದು ಕಾರಣವೆಂದರೆ, ಅದು ಅಳವಡಿಸಿಕೊಂಡಿರುವ ಆಡಳಿತಾತ್ಮಕ ಸ್ವರೂಪ. ನಿರ್ದೇಶಕರು ಸಂಸ್ಥೆಯ ದಿನನಿತ್ಯದ ನಿರ್ವಹಣೆಯ ಉಸ್ತುವಾರಿ ವಹಿಸುತ್ತಾರೆ. ಅವರಿಗಿಂತ ಮೇಲೆ ಇದ್ದು ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುವುದು ಹದಿನೈದು ಸದಸ್ಯರನ್ನು ಹೊಂದಿರುವ ವ್ಯವಸ್ಥಾಪಕ ಮಂಡಳಿ. ಐವರು ಪದನಿಮಿತ್ತ ಸದಸ್ಯರು ಭಾರತ ಸರಕಾರವನ್ನು ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಅನ್ನು ಪ್ರತಿನಿಧಿಸುತ್ತಾರೆ. ಇತರ ಹತ್ತು ಮಂದಿ ವಿಜ್ಞಾನಿಗಳಾಗಿದ್ದು, ಪ್ರಪಂಚದ ವಿವಿಧೆಡೆಯಿಂದ ಆಯ್ಕೆಯಾದವರಾಗಿದ್ದಾರೆ ಮತ್ತು ಅವರಲ್ಲಿ ಐವರು ಮಹಿಳೆಯರು.

ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ವ್ಯವಸ್ಥಾಪಕ ಮಂಡಳಿಯ ಸದಸ್ಯರ ಅವಧಿ ನಿಖರವಾಗಿ ಮೂರು ವರ್ಷಗಳದ್ದಾಗಿದೆ. ಇದನ್ನು ಒಮ್ಮೆ, ಬಹುಶಃ ಎರಡು ಬಾರಿ ನವೀಕರಿಸಬಹುದು. ಆದರೆ ಆನಂತರ ಅವಕಾಶವಿಲ್ಲ. ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯನ್ನು ನಡೆಸುವ ಟ್ರಸ್ಟ್‌ನಂತೆ ಇಲ್ಲಿ ಯಾರೂ ಆಜೀವ ಸದಸ್ಯರಲ್ಲ. ಹೆಚ್ಚೆಂದರೆ ಒಂಭತ್ತು ವರ್ಷಗಳವರೆಗೆ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ ವ್ಯವಸ್ಥಾಪಕ ಮಂಡಳಿಯಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಆದರೆ ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ ಆಡಳಿತ ಮಂಡಳಿಯಲ್ಲಿ ಕೆಲವು ಟ್ರಸ್ಟಿಗಳು ಮೂವತ್ತು ವರ್ಷಗಳಿಂದ ಇದ್ದಾರೆ.

ಈ ಸಾಧ್ಯವಾದಷ್ಟು ಕಾಲ ಅಗ್ರಸ್ಥಾನದಲ್ಲಿರುವ ಸಿಂಡ್ರೋಮ್‌ನಿಂದ ಶಕ್ತಿಶಾಲಿ ಮತ್ತು ಯಶಸ್ವಿ ಮಹಿಳೆಯರು ಹೊರತಾಗಿಲ್ಲವಾದರೂ, ಇದು ಪುರುಷರಲ್ಲಿಯೇ ಹೆಚ್ಚು ಕಾಣಿಸುವ ಪ್ರವೃತ್ತಿಯಾಗಿದೆ. ಆದರೆ ಉಬೈದ್ ಸಿದ್ದೀಕಿ ಒಂದು ಅಪವಾದ. ರಾಜಕೀಯ, ಕ್ರೀಡೆ, ಉದ್ಯಮ, ನಾಗರಿಕ ಸಮಾಜ ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಅಸಂಖ್ಯಾತ ಭಾರತೀಯ ಪುರುಷರು ಪ್ರಸ್ತುತ ಅಮೆರಿಕನ್ ಅಧ್ಯಕ್ಷರು ಬಯಸಿದಂತೆಯೇ ಅಧಿಕಾರದಲ್ಲಿದ್ದಾರೆ ಮತ್ತು ಮುಂದುವರಿಯಲು ಬಯಸುತ್ತಾರೆ. ದೂರದೃಷ್ಟಿಯದ್ದಲ್ಲದ ಮತ್ತು ಸ್ವಯಂಕೇಂದ್ರಿತವಾದ ಅಂಥ ನಡವಳಿಕೆಯ ಹಾನಿಕಾರಕ ಪರಿಣಾಮದ ಹೊರೆಯನ್ನು ಅವರ ಹೆಚ್ಚು ಪ್ರತಿಭಾನ್ವಿತ ಕಿರಿಯ ಸಹೋದ್ಯೋಗಿಗಳು ಮತ್ತು ಒಟ್ಟಾರೆಯಾಗಿ ಈ ಸಮಾಜವೇ ಹೊರಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News