ಬ್ಯಾಟ್ ಹಿಡಿದಿರುವ ಅಶ್ವಿನ್

ಬ್ಯಾಟರ್‌ಗಳು ಆಟದ ಪ್ರಮುಖರೆನ್ನಿಸುವುದು ಮತ್ತು ಬೌಲರ್‌ಗಳು ಅತಿಯಾದ ಕೆಲಸ ಮಾಡುವ ಸಬಾಲ್ಟರ್ನ್ ಗಳು ಎಂಬುದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಸತ್ಯ. ಈ ಪಕ್ಷಪಾತದ ಬಹುಮಾನ ವ್ಯವಸ್ಥೆಯ ವಿರುದ್ಧ ನಾನೇ ವಾದ ಮಾಡಿದ್ದೇನೆ. ಆದರೆ ಏನೂ ಪ್ರಯೋಜನವಾಗಿಲ್ಲ. ಅಶ್ವಿನ್ ಅವರು ತಮ್ಮ ಛಾಯಾಚಿತ್ರದ ಆಯ್ಕೆಯ ಮೂಲಕ ಮತ್ತು ಆಟದಲ್ಲಿ ಅವರ ಹೆಚ್ಚಿನ ಸ್ಥಾನದ ಮೂಲಕ ಬಹಳ ಸೂಕ್ಷ್ಮವಾಗಿ ಇದನ್ನು ಕಾಣಿಸಿದ್ದಾರೆಯೇ?

Update: 2024-07-13 04:54 GMT

ಆರ್. ಅಶ್ವಿನ್ ಅವರ ಆತ್ಮಕಥನದ ಮುಖಪುಟ ಚಿತ್ರವನ್ನು ನೋಡಿದಾಗ, ನನಗೆ ಅಚ್ಚರಿಯೆನ್ನಿಸಿತ್ತು. ಬಿಳಿಯ ಉಡುಪಿನಲ್ಲಿ ಬ್ಯಾಟ್‌ನ ಹಿಡಿಕೆಯ ಸುತ್ತ ಕೈಯಿಟ್ಟುಕೊಂಡು ಕೂತಿದ್ದ ಚಿತ್ರ ಅದಾಗಿತ್ತು. ವಿಕೆಟ್ ಬೀಳಲು ಕಾಯುತ್ತಿರುವಂತೆ, ಡ್ರೆಸ್ಸಿಂಗ್ ರೂಮ್‌ನಿಂದ ಮೈದಾನಕ್ಕೆ ನಡೆಯಲು ಸಿದ್ಧವಾಗಿರುವ ರೀತಿಯಲ್ಲಿ ಇತ್ತು ಆ ಚಿತ್ರ.

ಅಶ್ವಿನ್ ಬ್ಯಾಟಿಂಗ್ ಮಾಡಬಲ್ಲರು ಎಂಬುದು ಈಗ ನನಗೆ ಅರ್ಥವಾಗಿದೆ. ಅವರ ಆತ್ಮಚರಿತ್ರೆ ಪ್ರಕಟವಾಗುವುದಕ್ಕೆ ಬಹಳ ಮೊದಲು ಶಾಲಾ ದಿನಗಳಲ್ಲಿ ಅವರು ವಿಕೆಟ್ ಕಬಳಿಕೆಗಿಂತ ರನ್ ಗಳಿಕೆ ಸಾಮರ್ಥ್ಯವನ್ನೇ ಹೆಚ್ಚು ಹೊಂದಿದ್ದಾರೆ ಎಂಬುದು ಸಾಮಾನ್ಯ ತಿಳುವಳಿಕೆಯಾಗಿತ್ತು. ಅಶ್ವಿನ್‌ರನ್ನು ನಾನು ಹೆಚ್ಚಾಗಿ ನೋಡಿಲ್ಲ. ನಾನು ಹೆಚ್ಚಾಗಿ ಟೆಸ್ಟ್ ಕ್ರಿಕೆಟ್ ನೋಡುತ್ತೇನೆ ಮತ್ತು ಕೆಲವು ಕಾರಣಗಳಿಂದ ಬೆಂಗಳೂರು ಈಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಆಯೋಜಿಸಿಲ್ಲ. ಆದರೂ, ಕೈಯಲ್ಲಿ ಬ್ಯಾಟ್ ಹಿಡಿದ ಅವರನ್ನು ದೂರದರ್ಶನದಲ್ಲಿ ನೋಡಿದ್ದು ನೆನಪಿದೆ. ನನ್ನ ಮನಸ್ಸಿನಲ್ಲಿ ಅವರು ಅಚ್ಚೊತ್ತಿರುವುದು ವೇಗದ ಬೌಲರ್ ಆಗಿ. ಅವರು ಚತುರತನದಿಂದ ಟ್ರ್ಯಾಕ್ ಅನ್ನು ಸ್ಪಿನ್ನರ್‌ಗೆ ಬಿಟ್ಟು ಹೋಗುವುದನ್ನು ಮತ್ತು ಬೌಲರ್‌ನ ತಲೆಯ ಮೇಲೆ ಚೆಂಡನ್ನು ಎತ್ತುವುದನ್ನು ನೆನಪಿಸಿಕೊಳ್ಳಬಲ್ಲೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಆಡಿದ ಎರಡು ಅತ್ಯಂತ ಪರಿಣಾಮಕಾರಿ ಇನ್ನಿಂಗ್ಸ್‌ಗಳಲ್ಲಿ ಈ ಎರಡೂ ಹೊಡೆತಗಳು ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಅವೆರಡೂ 2021ರ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದಿದ್ದವು. ವಿಭಿನ್ನ ಗ್ರೌಂಡ್‌ಗಳಲ್ಲಿ ವಿಭಿನ್ನ ಎದುರಾಳಿಗಳ ವಿರುದ್ಧ ನಡೆದಿದ್ದವು. ಅವುಗಳಲ್ಲಿ ಮೊದಲನೆಯದರಲ್ಲಿ ಅಶ್ವಿನ್, ಹನುಮವಿಹಾರಿ ಅವರೊಂದಿಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರತಿಕೂಲ ಆಸ್ಟ್ರೇಲಿಯನ್ ದಾಳಿಯನ್ನು ತಡೆದು 40 ಓವರ್‌ಗಳ ಜೊತೆಯಾಟದಲ್ಲಿ ತಂಡವನ್ನು ಎಪಿಕ್ ಡ್ರಾಗೆ ಕೊಂಡೊಯ್ದಿದ್ದರು. ಆ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಗಟ್ಟಿಯಾಗಿ ಡಿಫೆಂಡ್ ಮಾಡುವುದನ್ನು ಅಥವಾ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುವುದನ್ನು ಕಾಣಬಹುದಿತ್ತು.

ಅಶ್ವಿನ್ ತವರು ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಇನ್ನಿಂಗ್ಸ್ ಆಡಿದ್ದು ನನ್ನ ಮನಸ್ಸಿನಲ್ಲಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆರಾಮದಾಯಕ ಮುನ್ನಡೆಯನ್ನು ಹೊಂದಿತ್ತು. ಆದರೆ ಎರಡನೆಯದರಲ್ಲಿ 106ಕ್ಕೆ 6 ವಿಕೆಟ್ ಕಳೆದುಕೊಂಡು ತತ್ತರಿಸಿತ್ತು. ಆ ಹಂತದಲ್ಲಿ ಅಶ್ವಿನ್ ಅವರು ಕೊಹ್ಲಿ, ಕುಲದೀಪ್, ಇಶಾಂತ್ ಮತ್ತು ಸಿರಾಜ್ ಅವರೊಂದಿಗಿನ ಜೊತೆಯಾಟದಲ್ಲಿ ಭಾರತವನ್ನು ಸುಲಭವಾಗಿ ಗೆಲ್ಲಬಹುದಾದ 286ರ ಮೊತ್ತಕ್ಕೆ ಕೊಂಡೊಯ್ದರು. ಅಶ್ವಿನ್ ಸ್ವತಃ ಶತಕವನ್ನು ಗಳಿಸಿದ್ದರು.

ಅಶ್ವಿನ್ ಬ್ಯಾಟಿಂಗ್ ಮಾಡಬಲ್ಲರು ಎಂಬುದು ನನಗೆ ಗೊತ್ತು ಮತ್ತು ಅವರ ಪುಸ್ತಕವನ್ನು ಖರೀದಿಸುವವರಿಗೂ ಇದು ತಿಳಿದಿದೆ. ಅಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಶ್ವಿನ್ ಅವರು ಚೆಂಡಿನ ಮೇಲಿನ ಕೌಶಲ್ಯಕ್ಕಾಗಿ ಹೆಚ್ಚು ನೆನಪಾಗುತ್ತಾರೆ. ಐದು ನೂರಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದವರು, ಅನಿಲ್ ಕುಂಬ್ಳೆ ಹೊರತುಪಡಿಸಿ ಭಾರತಕ್ಕಾಗಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ವ್ಯಕ್ತಿ, ಅವರ ಆತ್ಮಚರಿತ್ರೆಯನ್ನು ಏಕೆ ಪ್ರಕಟಿಸುತ್ತಾರೆ ಮತ್ತು ಏಕೆ ಮುಖಪುಟದಲ್ಲಿ ಬ್ಯಾಟ್ ಹಿಡಿದ ಚಿತ್ರ ಮುದ್ರಿಸಿ ಪ್ರಚಾರ ಮಾಡಿದ್ದಾರೆ? ನಾನು ಅಶ್ವಿನ್ ಅವರನ್ನು ಎಂದೂ ಭೇಟಿ ಮಾಡಿಲ್ಲ. ಆದರೆ ನಾನು ಅವರ ಬಗ್ಗೆ ಓದಿರುವ ಮತ್ತು ಕೇಳಿರುವ ಪ್ರಕಾರ ಅವರು ದೃಢವಾದ ಮತ್ತು ಪರಿಗಣಿತ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿ. ಆ ಚಿತ್ರವನ್ನು ಪ್ರಕಾಶಕರಾಗಲಿ ಅಥವಾ ಆತ್ಮಕಥೆಯನ್ನು ಬರಹಕ್ಕಿಳಿಸಿದ ಸಿದ್ಧಾರ್ಥ್ ಮೊಂಗಿಯಾ ಆಗಲಿ ಆಯ್ಕೆ ಮಾಡಿಲ್ಲ. ಬದಲಿಗೆ ಅಶ್ವಿನ್ ಅವರೇ ಆಯ್ಕೆ ಮಾಡಿದ್ದಾರೆ ಎಂಬುದು ಖಚಿತವಾಗಿದೆ. ಹಾಗಾದರೆ ಚೆಂಡಿನ ಬದಲು ಬ್ಯಾಟ್ ಹಿಡಿದಿರುವ ಮುಖಪುಟವನ್ನೇ ಏಕೆ ಅವರು ಬಯಸಿದರು?

ಈ ಪ್ರಶ್ನೆಗೆ ನಾನು ಖಚಿತವಾದ ಉತ್ತರವನ್ನು ನೀಡಲು ಸಾಧ್ಯವಿಲ್ಲ. ಆದರೂ ನಾನು ಊಹಿಸಬಲ್ಲೆ. ಆ ಛಾಯಾಚಿತ್ರದಲ್ಲಿ ಒಂದು ಅಥವಾ ಹಲವು ಸಾಂಕೇತಿಕ ಸಂದೇಶವಿರಬಹುದೇ? ವಿಶ್ವ (ಮತ್ತು ಬಹುಶಃ ವಿಶೇಷವಾಗಿ ಭಾರತೀಯ) ಕ್ರಿಕೆಟ್‌ನ ಬಹುಮಾನ ವ್ಯವಸ್ಥೆಯಲ್ಲಿ, ಹೆಚ್ಚು ಹಣ, ಹೆಚ್ಚು ಖ್ಯಾತಿ, ಹೆಚ್ಚು ಅಭಿಮಾನಿಗಳ ಆರಾಧನೆ, ಹೆಚ್ಚಿನ ಶ್ಲಾಘನೆಗಳು, ಟಿವಿಗಳಲ್ಲಿ ಹೆಚ್ಚಾಗಿ ತೋರಿಸುವುದು, ಸೆಲ್ಫಿಗಳು ಮತ್ತು ಆಟೋಗ್ರಾಫ್‌ಗಳಿಗಾಗಿ ಹೆಚ್ಚು ಮುಗಿಬೀಳುವುದು, ಪಂದ್ಯದ ಹೆಚ್ಚಿನ ಆಟಗಾರರು ಮತ್ತು ಸರಣಿ ಪ್ರಶಸ್ತಿ ಪಡೆಯುವವರು ಬೌಲರ್‌ಗಳಿಗಿಂತ ಹೆಚ್ಚಾಗಿ ಬ್ಯಾಟರ್‌ಗಳು ಎಂಬ ಕ್ರೂರ ಸಂಗತಿಯತ್ತ ನಮ್ಮ ಗಮನವನ್ನು ಸೆಳೆಯಲು ಅಶ್ವಿನ್ ಪ್ರಯತ್ನಿಸುತ್ತಿದ್ದರೇ? ಬ್ಯಾಟರ್‌ಗಳು ಆಟದ ಪ್ರಮುಖರೆನ್ನಿಸುವುದು ಮತ್ತು ಬೌಲರ್‌ಗಳು ಅತಿಯಾದ ಕೆಲಸ ಮಾಡುವ ಸಬಾಲ್ಟರ್ನ್ ಗಳು ಎಂಬುದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಸತ್ಯ. ಈ ಪಕ್ಷಪಾತದ ಬಹುಮಾನ ವ್ಯವಸ್ಥೆಯ ವಿರುದ್ಧ ನಾನೇ ವಾದ ಮಾಡಿದ್ದೇನೆ. ಆದರೆ ಏನೂ ಪ್ರಯೋಜನವಾಗಿಲ್ಲಅ ಅಶ್ವಿನ್ ಅವರು ತಮ್ಮ ಛಾಯಾಚಿತ್ರದ ಆಯ್ಕೆಯ ಮೂಲಕ ಮತ್ತು ಆಟದಲ್ಲಿ ಅವರ ಹೆಚ್ಚಿನ ಸ್ಥಾನದ ಮೂಲಕ ಬಹಳ ಸೂಕ್ಷ್ಮವಾಗಿ ಇದನ್ನು ಕಾಣಿಸಿದ್ದಾರೆಯೇ?

ಪಂದ್ಯ ಗೆಲ್ಲುವ ಬೌಲರ್‌ಗಳಿಗಿಂತ ಮ್ಯಾಚ್‌ವಿನ್ನಿಂಗ್ ಬ್ಯಾಟರ್‌ಗಳು ಆಟದಿಂದ ಹೆಚ್ಚಿನ ಪ್ರತಿಫಲ ಹೇಗೆ ಪಡೆಯುತ್ತಾರೆ ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ನಿರಾಶಾದಾಯಕ ವಿಚಾರವೆಂದರೆ, ಈ ತಾರತಮ್ಯ ಕೇವಲ ಹಣದ ವಿಷಯಗಳಿಗೇ ಸೀಮಿತವಾಗಿಲ್ಲ. ಬ್ಯಾಟರ್‌ಗಳಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರು ಕ್ರಮವಾಗಿ ಐವತ್ತೇಳು ಮತ್ತು ಎಪ್ಪತ್ತೆರಡು ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯದ ನಾಯಕರಾಗಿದ್ದರು. ಆದರೆ ಶೇನ್ ವಾರ್ನ್‌ಗೆ ಈ ಜವಾಬ್ದಾರಿಯನ್ನು ಎಂದಿಗೂ ನೀಡಲಿಲ್ಲ. ವಾರ್ನ್ ಒಬ್ಬ ಅದ್ಭುತ ಕ್ರಿಕೆಟ್ ತಂತ್ರಗಾರರಾಗಿದ್ದರು ಮತ್ತು ಅವರು ವಾ ಅಥವಾ ಪಾಂಟಿಂಗ್‌ಗಿಂತ ಹೆಚ್ಚು ಯಶಸ್ವಿ ಟೆಸ್ಟ್ ನಾಯಕರಾಗುತ್ತಿದ್ದರು ಎಂಬುದರಲ್ಲಿ ನನಗೆ ಸಂದೇಹವಿಲ್ಲ.

ಭಾರತದ ನಾಯಕತ್ವದ ಆಯ್ಕೆಯಲ್ಲೂ ಈ ಪಕ್ಷಪಾತವಿದೆ. ವಿರಾಟ್ ಕೊಹ್ಲಿ ಅರವತ್ತೆಂಟು ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ ಮತ್ತು ರೋಹಿತ್ ಶರ್ಮಾ ಹದಿನಾರರಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಆದರೆ ಅಶ್ವಿನ್ ಎಂದಿಗೂ ಭಾರತದ ನಾಯಕತ್ವವನ್ನು ವಹಿಸಿಲ್ಲ. ಮೊದಲ ಇಬ್ಬರು ಬ್ಯಾಟರ್‌ಗಳು ಮತ್ತು ಅಶ್ವಿನ್ ಬೌಲರ್ ಎಂಬುದು ಇದಕ್ಕೆ ಭಾಗಶಃ ಕಾರಣವಾಗಿರಬಹುದು. ಭಾರತಕ್ಕಾಗಿ ಆಡಿದ ಅತ್ಯಂತ ಚತುರ ಕ್ರಿಕೆಟಿಗರಲ್ಲಿ ಅಶ್ವಿನ್ ಒಬ್ಬರು ಎಂದು ನಮಗೆ ತಿಳಿದಿದೆ. ಮದರಾಸಿನ ವ್ಯಕ್ತಿಗೆ ತನ್ನ ದೇಶದ ನಾಯಕನಾಗುವ ಅವಕಾಶ ಸಿಕ್ಕಿದ್ದರೆ, ಅವರು ಅದನ್ನು ಯೋಗ್ಯವಾದ ರೀತಿಯಲ್ಲಿ ಬಳಸಿಕೊಳ್ಳಬಲ್ಲರು ಎಂಬುದು ಖಚಿತವಾಗಿದೆ. ನಿಸ್ಸಂಶಯವಾಗಿ, ಇಂಗ್ಲೆಂಡ್‌ನ ರೇ ಇಲ್ಲಿಂಗ್‌ವರ್ತ್ ಮತ್ತು ಆಸ್ಟ್ರೇಲಿಯದ ರಿಚಿ ಬೆನಾಡ್‌ರ ಉದಾಹರಣೆಗಳು, ಸ್ಪಿನ್ ಬೌಲರ್‌ಗಳು ಅತ್ಯುತ್ತಮ ಟೆಸ್ಟ್ ನಾಯಕರಾಗಬಹುದು ಎಂದು ತೋರಿಸುತ್ತವೆ.

ಅಶ್ವಿನ್ ಅವರ ಮುಖಪುಟ ಚಿತ್ರದ ಆಯ್ಕೆ ಅವರ (ಹಿಂದಿನ ಅಥವಾ ಪ್ರಸಕ್ತ) ನಾಯಕತ್ವದ ಮಹತ್ವಾಕಾಂಕ್ಷೆಗಳ ಕುರಿತ ಯಾವುದೇ ರೀತಿಯ ಸಂಕೇತವೆಂಬುದರ ಬಗ್ಗೆ ನನಗೆ ಅನುಮಾನವಿದೆ. ನಾಯಕತ್ವ ಹೊಂದುವುದಕ್ಕೆ ಅವರು ತುಂಬಾ ಅರ್ಹರು ಎಂದೇ ಅನ್ನಿಸುತ್ತದೆ. ನನ್ನ ಮೊದಲ ಊಹೆ ಹೆಚ್ಚು ಸಮರ್ಥನೀಯವಾಗಿರಬಹುದು. ಮೈದಾನದಲ್ಲಿ ಮತ್ತು ಹೊರಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳನ್ನು ಪರಿಗಣಿಸುವ ವಿಧಾನಗಳಲ್ಲಿನ ಸಾಮಾನ್ಯ ಪಕ್ಷಪಾತಗಳ ಬಗ್ಗೆ ಅವರು ನಮಗೆ ಹೆಚ್ಚು ಅರಿವು ಮೂಡಿಸುತ್ತಿದ್ದಾರೆ ಮತ್ತು ಅಶ್ವಿನ್ ನಿಜವಾಗಿಯೂ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತಾರೆ ಎಂಬುದು ಮೂರನೇ ಕಾರಣವಾಗಬಹುದು. ಅಂದಹಾಗೆ, ಶೇನ್ ವಾರ್ನ್ ಮತ್ತು ಅನಿಲ್ ಕುಂಬ್ಳೆ ಅದನ್ನು ಸಾಧಿಸಿದ್ದರು. ವಾರ್ನ್ ಹನ್ನೆರಡು ಟೆಸ್ಟ್ ಅರ್ಧ ಶತಕಗಳನ್ನು ಗಳಿಸಿದರೂ ಅವರ ಅತ್ಯುನ್ನತ ಸ್ಕೋರ್ 99 ಆಗಿತ್ತು. ಆದರೆ ಕುಂಬ್ಳೆ ಖಂಡಿತವಾಗಿಯೂ (ಕನಿಷ್ಠ ಒಮ್ಮೆಯಾದರೂ) ತಮ್ಮ ಶ್ರೇಷ್ಠ ಆಸ್ಟ್ರೇಲಿಯನ್ ಸಮಕಾಲೀನ ಆಟಗಾರ ಸಾಧಿಸಲು ವಿಫಲವಾದ ಹೆಗ್ಗುರುತನ್ನು ಸಾಧಿಸಿದ್ದಾರೆ ಎಂಬ ಅಂಶವನ್ನು ಖಂಡಿತವಾಗಿ ಗಮನಿಸಬೇಕು.

ಅದೇನೇ ಇದ್ದರೂ, ಈ ವಿಷಯದಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ವಾರ್ನ್ ಅವರ ಐದು ಪುಸ್ತಕಗಳಲ್ಲಿ ಎರಡು ಅವರ ಮುಖವನ್ನು ಮಾತ್ರ ಹೊಂದಿವೆ. ಆದರೆ ಇತರ ಮೂರರಲ್ಲಿನ ಚಿತ್ರಗಳು ಅವರು ಬೌಲ್ ಮಾಡುತ್ತಿರುವುದನ್ನು ಅಥವಾ ವಿಕೆಟ್ ಪಡೆದಿರುವುದನ್ನು ತೋರಿಸುತ್ತವೆ. ಕುಂಬ್ಳೆಯವರ ಆತ್ಮಚರಿತ್ರೆಗಾಗಿ ನಾವು ಕಾಯುತ್ತಿದ್ದೇವೆ ಮತ್ತು ಅದು ಬಂದಾಗ, 619 ಟೆಸ್ಟ್ ವಿಕೆಟ್‌ಗಳನ್ನು ಪಡೆದವರು ಬ್ಯಾಟ್ ಹಿಡಿದಿರುವ ಛಾಯಾಚಿತ್ರವನ್ನು ಮುಖಪುಟದಲ್ಲಿ ಹಾಕುವ ಸಾಧ್ಯತೆಯಿಲ್ಲ.

ಶ್ರೇಷ್ಠ ಕ್ರಿಕೆಟ್ ಬರಹಗಾರ ಒಮ್ಮೆ ಒಂದೇ ಕ್ರಿಕೆಟ್ ಛಾಯಾಚಿತ್ರದ ಬಗ್ಗೆ ಇಡೀ ಪುಸ್ತಕವನ್ನೇ ಬರೆದದ್ದಿದೆ. ಅದು ಅದ್ಭುತವಾದ ಪುಸ್ತಕವಾಗಿದ್ದು, ಹಲವಾರು ವರ್ಷಗಳ ಹಿಂದೆ ಅಂಕಣಗಳಲ್ಲಿ ನಾನು ಮೆಚ್ಚುಗೆಯಿಂದ ಬರೆದಿದ್ದೇನೆ. ಆದರೆ ನಾನು ಗಿಡಿಯಾನ್ ಹೈ ಅಲ್ಲದಿರುವುದರಿಂದ, ಕೆಲವೇ ನೂರು ಪದಗಳಲ್ಲಿ ಒಂದು ಛಾಯಾಚಿತ್ರದ ಬಗ್ಗೆ ನನ್ನ ವಿಚಾರಗಳನ್ನು ಹೇಳಿದ್ದೇನೆ. ನೀವು ಇಲ್ಲಿಯವರೆಗೆ ಓದಿದ್ದೆಲ್ಲವೂ ನಾನು ಅಶ್ವಿನ್ ಅವರ ಆತ್ಮಚರಿತ್ರೆಯನ್ನು ಓದುವ ಮೊದಲು ಬರೆದದ್ದು. ಈಗ ನಾನು ಅದನ್ನು ಓದಿದ್ದೇನೆ. ಪುಸ್ತಕದ ಮುಖಪುಟದ ಕುರಿತ ನನ್ನ ವಿಶ್ಲೇಷಣೆಯನ್ನು ಪುಸ್ತಕದಲ್ಲಿನ ಕನಿಷ್ಠ ಒಂದು ಭಾಗ ಖಚಿತಪಡಿಸುತ್ತದೆ ಎಂದು ನಾನು ತೋರಿಸಬಹುದು. ಅದು ಶುರುವಾಗುವುದು ಹೀಗೆ: ‘ಇದು ಅಂತಿಮವಾಗಿ (ಬೌಲರ್, ಬ್ಯಾಟರ್, ಬಳಿಕ ಕೋಚ್ ಆಗಿರುವ) ರಾಮನ್ ಅವರೊಂದಿಗೆ ಮತ್ತೊಂದು ಮಾತುಕತೆಯಾಗುತ್ತದೆ. ನನಗೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನಾನು ಅವರಿಗೆ ಹೇಳುತ್ತೇನೆ. ಬೌಲರ್‌ಗಳನ್ನು ಬ್ಯಾಟರ್‌ಗಳು ತಮ್ಮ ಇಚ್ಛೆಯಂತೆ ನೀಲಿ ಕಾಲರ್ ಕೆಲಸಗಾರರಾಗಿ ಬಳಸುತ್ತಾರೆ. ಬೌಲರ್ ಕೆಟ್ಟದಾಗಿ ಬೌಲ್ ಮಾಡಿದರೆ ನೆಟ್ಸ್‌ನಲ್ಲಿ ಬ್ಯಾಟರ್ ಬಳಿ ಕ್ಷಮೆ ಕೇಳುತ್ತಾನೆ. ಹಾಗಾದರೆ ಕೆಟ್ಟ ಶಾಟ್ ಆಡಿದರೆ ಬ್ಯಾಟರ್ ಏಕೆ ಕ್ಷಮೆ ಕೇಳುವುದಿಲ್ಲ?’

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ರಾಮಚಂದ್ರ ಗುಹಾ

contributor

Similar News