ಟಿಪ್ಪು ಸುಲ್ತಾನ್ ಮತ್ತು ಸ್ವಾತಂತ್ರ್ಯ ಹೋರಾಟ

ನ್ಯಾಯಾಲಯದ ಮಾನದಂಡದ ಪ್ರಕಾರ, ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕುತ್ತಾ ಹೊರಟರೆ ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ಮುಂತಾದವರು ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಪರಿಗಣಿಸಬೇಕಾಗುತ್ತದೆ. ವಾಸ್ತವವಾಗಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಹಾದ್ದೂರ್ ಷಾ ಝಫರ್, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ತಾತ್ಯಾಟೋಪಿ ಅವರು ಯಾವ ಉದ್ದೇಶದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೋ ಅದೇ ಉದ್ದೇಶದಿಂದಲೇ ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ ಕೂಡ ಪಾಲ್ಗೊಂಡಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ ಎಂಬುದು ಒಂದೇ ಕಾಲಘಟ್ಟದಲ್ಲಿ ನಡೆದ ಹೋರಾಟವಲ್ಲ. ಅದು ಬೇರೆ ಬೇರೆ ಕಾಲಘಟ್ಟಗಳಲ್ಲಿ ಅಲೆ ಅಲೆಯಾಗಿ ಬಂದ ಹೋರಾಟ. ಇದು ನ್ಯಾಯಾಲಯದ ಗಮನಕ್ಕೆ ಬರಬೇಕಾಗಿತ್ತು.

Update: 2023-11-13 04:27 GMT

Photo: twitter.com/britishmuseum

ಇದು ಸ್ವಾತಂತ್ರ್ಯ ಹೋರಾಟ ಎಂದರೇನು ಎಂಬುದು ಗೊತ್ತಿಲ್ಲದವರ ತೀರ್ಪೋ ಅಥವಾ ಗೊತ್ತಿದ್ದೂ ಬೇಕಂತಲೇ ನೀಡಿರುವ ತೀರ್ಪೋ ಎಂಬುದು ಗೊತ್ತಾಗುತ್ತಿಲ್ಲ. ನ್ಯಾಯಾಲಯದ ಮಾನದಂಡದ ಪ್ರಕಾರ, ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕುತ್ತಾ ಹೊರಟರೆ ಕಿತ್ತೂರು ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ಮುಂತಾದವರು ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಪರಿಗಣಿಸಬೇಕಾಗುತ್ತದೆ. ವಾಸ್ತವವಾಗಿ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಹಾದ್ದೂರ್ ಷಾ ಝಫರ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ತಾತ್ಯಾಟೋಪಿ ಅವರು ಯಾವ ಉದ್ದೇಶದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೋ ಅದೇ ಉದ್ದೇಶದಿಂದಲೇ ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ ಕೂಡ ಪಾಲ್ಗೊಂಡಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟ ಎಂಬುದು ಒಂದೇ ಕಾಲಘಟ್ಟದಲ್ಲಿ ನಡೆದ ಹೋರಾಟವಲ್ಲ. ಅದು ಬೇರೆ ಬೇರೆ ಕಾಲಘಟ್ಟಗಳಲ್ಲಿ ಅಲೆ ಅಲೆಯಾಗಿ ಬಂದ ಹೋರಾಟ. ಇದು ನ್ಯಾಯಾಲಯದ ಗಮನಕ್ಕೆ ಬರಬೇಕಾಗಿತ್ತು. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲವೆಂದರೆ ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ಹೇಗೆ ಸ್ವಾತಂತ್ರ್ಯ ಹೋರಾಟಗಾರರಾಗುತ್ತಾರೆ?

ತನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷ್ ಪ್ರಭುತ್ವದೊಂದಿಗೆ ರಾಜಿ ಮಾಡಿಕೊಳ್ಳದೆ ರಣರಂಗದಲ್ಲಿ ಹೋರಾಡುತ್ತಲೇ ಕೊನೆಯುಸಿರೆಳೆದ ಮೈಸೂರು ಹುಲಿ ಟಿಪ್ಪುಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ರಾಜ್ಯ ಹೈಕೋರ್ಟ್ ಇತ್ತೀಚೆಗೆ ಹೇಳಿತು. ಇದಕ್ಕೆ ಅದು ಕೊಡುವ ಕಾರಣ ಟಿಪ್ಪು ಜನಿಸಿದ್ದು 1750ರ ನವೆಂಬರ್ 20ರಂದು, ಆತ ಸಾವನ್ನಪ್ಪಿದ್ದು 1779 ರ ಮೇ 4 ರಂದು, ಆದರೆ ಮೊದಲ ಸ್ವಾತಂತ್ರ್ಯ ಹೋರಾಟ ನಡೆದದ್ದು 1857 ರಲ್ಲಿ. ಹೀಗಾಗಿ ಟಿಪ್ಪು ಹೇಗೆ ಸ್ವಾತಂತ್ರ್ಯ ಹೋರಾಟಗಾರನಾಗುತ್ತಾನೆ ಎಂಬುದು ಹೈಕೋರ್ಟ್ ಪ್ರಶ್ನೆ.

ಕಿತ್ತೂರು ರಾಣಿ ಚನ್ನಮ್ಮ ಆಳಿದ ಕಿತ್ತೂರು ಸಂಸ್ಥಾನ ಮಾತ್ರವಲ್ಲ ಇತಿಹಾಸದಲ್ಲಿ ಆಡಳಿತಕ್ಕೊಳಪಡದ ಪ್ರದೇಶಗಳನ್ನು ಸೇರಿಸಿ ‘ಕಿತ್ತೂರು ಕರ್ನಾಟಕ’ ಎಂದು ಹೊಸ ಹೆಸರು ಇಡಲಾಯಿತು. ಬೆಂಗಳೂರಿನಲ್ಲಿ ಕೆಂಪೇಗೌಡರ ಹೆಸರಿನಲ್ಲಿ ವಿಮಾನ ನಿಲ್ದಾಣ, ನಗರ ಬಸ್ ನಿಲ್ದಾಣಗಳಿವೆ. ಅಭ್ಯಂತರವಿಲ್ಲ. ಆದರೆ, ಇವರಂತೆ ಟಿಪ್ಪು ಕೂಡ ಈ ನಾಡಿನ, ಈ ನೆಲದ ಪುತ್ರನಲ್ಲವೇ? ಈ ರಾಜ್ಯಕ್ಕೆ ರೇಷ್ಮೆಯನ್ನು ತರಲಿಲ್ಲವೇ? ಕನ್ನಂಬಾಡಿ ಅಣೆಕಟ್ಟು ಆತನ ಕನಸಾಗಿರಲಿಲ್ಲವೇ? ಹೈದರಾಬಾದ್ ನಿಜಾಮರಂತೆ, ಪುಣೆಯ ಪೇಶ್ವೆಗಳಂತೆ ಆತ ಬ್ರಿಟಿಷರ ಜೊತೆಗೆ ರಾಜಿ ಮಾಡಿಕೊಂಡಿದ್ದರೆ ಅವನ ಅರಸೊತ್ತಿಗೆಯೂ ಸುರಕ್ಷಿತವಾಗಿ ಇರುತ್ತಿರಲಿಲ್ಲವೇ? ಬ್ರಿಟಿಷರಿಗೆ ಮಕ್ಕಳನ್ನು ಒತ್ತೆ ಇಡುವ ಪರಿಸ್ಥಿತಿಗೆ ಆತ ಯಾಕೆ ಬಲಿಯಾಗಬೇಕಿತ್ತೇ? ಇಂಥ ಟಿಪ್ಪು ಹೆಸರನ್ನು ರೈಲು ನಿಲ್ದಾಣಕ್ಕೆ, ರಸ್ತೆಗಳಿಗೆ, ವಿಮಾನ ನಿಲ್ದಾಣಕ್ಕೆ ಇಡುವುದು ಕೂಡ ಈಗ ವಿವಾದವಾಗುವಂಥ ಸನ್ನಿವೇಶ ನಿರ್ಮಾಣವಾಗಿದೆ. ಇದು ಎಲ್ಲಿಯವರೆಗೆ ಅಂದರೆ ಟಿಪ್ಪು ಹೆಸರನ್ನು ಹಿಂದಿನ ಬಿಜೆಪಿ ಸರಕಾರವು ಶಾಲಾ ಪಠ್ಯಪುಸ್ತಕಗಳಿಂದ ತೆಗೆದು ಹಾಕಿತು. ಈಗಿನ ಸರಕಾರ ಅದನ್ನು ಸರಿಪಡಿಸಬೇಕಾಗಿದೆ.

ನಾವು ಚಿಕ್ಕವರಿದ್ದಾಗ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ಕತೆಗಳಂತೆ ಟಿಪ್ಪು ಚರಿತ್ರೆಯ ಕತೆಗಳನ್ನು ಕೇಳುತ್ತಲೇ ಬೆಳೆದವರು. ಮೈಸೂರು ಹುಲಿ ಟಿಪ್ಪು ಸುಲ್ತಾನರ ಪಾಠ ಆಗ ಶಾಲಾ ಪಠ್ಯಗಳಲ್ಲಿ ಇತ್ತು. ಕಳೆದ ಶತಮಾನದ ಅರವತ್ತರ ದಶಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಆ ಕಾಲದ ಹೆಸರಾಂತ ನಾಟಕಕಾರ ಹುಲಿಮನೆ ಸೀತಾರಾಮ ಶಾಸ್ತ್ರಿಗಳು ತಮ್ಮ ಕಂಪೆನಿ ನಾಟಕಗಳಲ್ಲಿ ಪ್ರದರ್ಶಿಸುತ್ತಿದ್ದ ‘ಮೈಸೂರು ಹುಲಿ ಟಿಪ್ಪು ಸುಲ್ತಾನ್’ ನಾಟಕ ಆ ಕಾಲದಲ್ಲಿ ತುಂಬಾ ಜನಪ್ರಿಯವಾಗಿತ್ತು. ಹುಬ್ಬಳ್ಳಿಯಂಥ ನಗರದಲ್ಲಿ ಐದಾರು ತಿಂಗಳ ಕಾಲ ಈ ನಾಟಕ ನಡೆಯುತ್ತಿತ್ತು. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರು ಈ ನಾಟಕವನ್ನು ಇಷ್ಟ ಪಟ್ಟು ಅನೇಕ ಬಾರಿ ನೋಡಿದ್ದಾಗಿ ಹೇಳುತ್ತಿದ್ದರು. ಅಷ್ಟೇ ಅಲ್ಲ ಸಂಘಪರಿವಾರದ ಪ್ರಕಾಶನ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಮಕ್ಕಳಿಗಾಗಿ ಪ್ರಕಟಿಸಿದ ಭಾರತ-ಭಾರತಿ ಪುಸ್ತಕ ಮಾಲಿಕೆಯಲ್ಲಿ ಟಿಪ್ಪು ಸುಲ್ತಾನರ ಪುಟ್ಟ ಪುಸ್ತಿಕೆಯನ್ನು ಪ್ರಕಟಿಸಿತ್ತು. ಆದರೆ, ಆನಂತರ ಅಂದರೆ ಚುನಾವಣಾ ರಾಜಕೀಯಕ್ಕೆ ಇತಿಹಾಸದ ಪುಟಗಳನ್ನು ದುರ್ಬಳಕೆ ಮಾಡಿಕೊಳ್ಳಲು ಆರಂಭಿಸಿದ ನಂತರ ಟಿಪ್ಪು ಪುಸ್ತಕವನ್ನು ರಾಷ್ಟ್ರೋತ್ಥಾನ ಪರಿಷತ್ ಮತ್ತೆ ಪ್ರಕಟಿಸಲಿಲ್ಲ. ಈಗ ಅದರ ಒಂದು ಪ್ರತಿಯೂ ಸಿಗುತ್ತಿಲ್ಲ.

ಭಾರತದಲ್ಲಿ 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ನಂತರ ಹಾಗೂ ಅದಕ್ಕಿಂತ ಮುಂಚೆ ನಡೆದ ಅಡ್ವಾಣಿ ಅವರ ರಥಯಾತ್ರೆಯ ನಂತರ ಕೋಮುವಾದಿ ಶಕ್ತಿಗಳು ಪ್ರಬಲವಾದವು. ಎಷ್ಟು ಪ್ರಬಲವೆಂದರೆ ಪ್ರಭುತ್ವದ ಮೇಲೂ ಹಿಡಿತ ಸಾಧಿಸಿದವು. ಆನಂತರ ಇತಿಹಾಸ ಪುರುಷರನ್ನು ಜಾತಿ, ಮತ, ಕೋಮು ಆಧಾರದಲ್ಲಿ ವಿಂಗಡಿಸುವ ಕೆಟ್ಟ ಚಾಳಿ ಆರಂಭವಾಯಿತು. ಇದಕ್ಕೆ ಮೊದಲ ಬಲಿಯಾದವರು ಟಿಪ್ಪು ಸುಲ್ತಾನ್. ಕೋಮುವಾದಿಗಳು ಟಿಪ್ಪುವನ್ನು ಖಳನಾಯಕನಂತೆ ಬಿಂಬಿಸುತ್ತ ಬಂದವು. ಅದೀಗ ಎಲ್ಲಿಗೆ ಬಂದು ತಲುಪಿದೆ ಎಂದರೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಉರಿಗೌಡ ಮತ್ತು ನಂಜೇಗೌಡ ಎಂಬ ನಕಲಿ ಪಾತ್ರಗಳನ್ನು ಸೃಷ್ಟಿಸಲಾಯಿತು. ಆಗ ಬಿಜೆಪಿ ಸರಕಾರವಿತ್ತು. ಇದೆಲ್ಲ ನಿರಾತಂಕವಾಗಿ ನಡೆಯಿತು. ಈಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವಿದೆ. ಈಗಲೂ ಟಿಪ್ಪು ಜಯಂತಿಯನ್ನು ಆಚರಿಸಲು ಅವಕಾಶ ಸಿಗಲಿಲ್ಲ. ಅಷ್ಟರ ಮಟ್ಟಿಗೆ ಕೋಮುವಾದಿ ಶಕ್ತಿಗಳು ಪ್ರಬಲವಾಗಿವೆ.

ಈಗ ಟಿಪ್ಪು ಬಗ್ಗೆ ಪರ ಮತ್ತು ವಿರೋಧವಾದ ಸಾಹಿತ್ಯ ಬೇಕಾದಷ್ಟಿದೆ. ಬ್ರಿಟಿಷ್ ಇತಿಹಾಸಕಾರರು ಸಹಜವಾಗಿ ಟಿಪ್ಪುವನ್ನು ಖಳ ನಾಯಕನನ್ನಾಗಿ ಚಿತ್ರಿಸಿದ್ದಾರೆ. ಆದರೆ ನಮ್ಮ ನೆಲದ, ನಮ್ಮ ನಾಡಿನ ಹಿಂದಿನ ತಲೆಮಾರಿನ ಹೆಸರಾಂತ ಲೇಖಕರು, ಸಾಹಿತಿಗಳು ಟಿಪ್ಪುವಿನ ಬಗ್ಗೆ ವಸ್ತುನಿಷ್ಟವಾಗಿ ಬರೆದಿದ್ದಾರೆ. ಆ ಕಾಲದ ಜಾನಪದ ಸಾಹಿತ್ಯದಲ್ಲೂ ಟಿಪ್ಪುವಿನ ತ್ಯಾಗ ಬಲಿದಾನಗಳ ಕತೆ ದಾಖಲಾಗಿದೆ. ಜನರ ಬಾಯಲ್ಲಿ ಹರಿದಾಡುವ ಹಾಡುಗಳಲ್ಲಿ ಟಿಪ್ಪು ಹೀರೊ. ಎಡಪಂಥೀಯ ಲೇಖಕರಾದ ಸಿ.ರಾಜೇಶ್ವರರಾವ್, ಸಾಕೇತ್ ರಾಜನ್ ಕೂಡ ಟಿಪ್ಪು ಬಗ್ಗೆ ಬರೆದಿದ್ದಾರೆ. ನಾನು ಓದಿದ ಪುಸ್ತಕಗಳಲ್ಲಿ ಕರ್ನಾಟಕದ ಹಿರಿಯ ಚೇತನ, ಹೆಸರಾಂತ ಪತ್ರಕರ್ತ ತಿರುಮಲೆ ತಾತಾಚಾರ್ಯ ಶರ್ಮರು ಬರೆದ ‘ಮೈಸೂರು ಇತಿಹಾಸದ ಪುಟಗಳು’ ಪುಸ್ತಕ ಟಿಪ್ಪುವಿನ ನಿಜ ಚರಿತ್ರೆಯನ್ನು ಅನಾವರಣಗೊಳಿಸುತ್ತದೆ.

ವಾಸ್ತವವಾಗಿ ಟಿಪ್ಪು ಸುಲ್ತಾನ್, ಹೈದರ್ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ಮೂವರು ರಾಜರ ಬಗ್ಗೆ ಬ್ರಿಟಿಷ್ ಇತಿಹಾಸಕಾರರು ಹೇಳಿದ ಸುಳ್ಳುಗಳನ್ನು ಶರ್ಮರು ಬಯಲಿಗೆಳೆದಿದ್ದಾರೆ. ಈ ಮೂವರ ಬಗ್ಗೆ ಬ್ರಿಟಿಷ್ ಇತಿಹಾಸಕಾರರು ಸತ್ಯವನ್ನು ಮುಚ್ಚಿಟ್ಟು ಬರೆದರು. ಬ್ರಿಟಿಷರು ಭಾರತವನ್ನು ಕಬಳಿಸಲು ಹೊರಟಿದ್ದನ್ನು ಹೈದರ್ ಮತ್ತು ಟಿಪ್ಪು ಸುಲ್ತಾನ್ ಮೊದಲು ಗುರುತಿಸಿ ವಿರೋಧಿಸಿದರು. ಅದಕ್ಕೆ ಅವಕಾಶ ನೀಡಬಾರದೆಂದು ಛಲದಿಂದ ಹೋರಾಡಿದರು. ಕೆಲ ಮಟ್ಟಿಗೆ ಯಶಸ್ಸನ್ನೂ ಗಳಿಸಿದರು. ಈ ಹೋರಾಟ ನಡೆದಾಗಲೇ ಹೈದರ್ ಅಕಾಲಿಕವಾಗಿ ಸಾವಿಗೀಡಾದ. ಟಿಪ್ಪು ರಣರಂಗದಲ್ಲಿ ಹೋರಾಡುತ್ತಲೇ ಕೊನೆಯುಸಿರೆಳೆದ.

ಅವನ ಆಸ್ಥಾನದಲ್ಲಿದ್ದ ಪೂರ್ಣಯ್ಯ, ಮೀರ್ ಸಾದಿಕ್ ಮುಂತಾದವರು ಬ್ರಿಟಿಷರ ಜೊತೆ ಶಾಮೀಲಾಗಿ ಅವನಿಗೆ ದ್ರೋಹ ಬಗೆದರು. ಇದನ್ನು ತಿ.ತಾ. ಶರ್ಮರು ಸಾಕಷ್ಟು ಮಾಹಿತಿ ಸಂಗ್ರಹಿಸಿ ದಾಖಲಿಸಿದ್ದಾರೆ. ಆಗಿನ ಭಾರತದ ಉಳಿದ ರಾಜ, ಮಹಾರಾಜರು ಪತ್ನಿಯರೊಂದಿಗೆ, ಉಪಪತ್ನಿಯರೊಂದಿಗೆ ಪಾನ ಮತ್ತರಾಗಿ ಲೀಲಾವಿಲಾಸದಲ್ಲಿ ತೊಡಗಿದ್ದರೆ ಹೈದರ್ ಮತ್ತು ಟಿಪ್ಪು ಬ್ರಿಟಿಷರನ್ನು ಎದುರಿಸಲು 17ನೇ ಶತಮಾನದಲ್ಲೇ ತಮ್ಮದೇ ನೌಕಾ ಪಡೆಯನ್ನು ಕಟ್ಟಿದರು. ಹೈದರ್ ನಂತರ ಟಿಪ್ಪು ಸುಲ್ತಾನ್ ನೆಪೊಲಿಯನ್ ಜೊತೆಗೆ ಪತ್ರವ್ಯವಹಾರ ಮಾಡಿ ಆತನ ನೆರವನ್ನು ಪಡೆದು ಬ್ರಿಟಿಷರನ್ನು ಭಾರತದಿಂದ ಹೊರದಬ್ಬಲು ತಂತ್ರ ರೂಪಿಸಿದನು.

ಟಿಪ್ಪು ಮತಾಂಧ ಎಂದು ಬ್ರಿಟಿಷ್ ಇತಿಹಾಸಕಾರರು ಹಿಯಾಳಿಸಿದ್ದನ್ನೇ ಅಮೃತವೆಂದು ಸ್ವೀಕರಿಸಿ ಪಠ್ಯಪುಸ್ತಕಗಳಲ್ಲಿ ಟಿಪ್ಪು, ಹೈದರ್ ಅಳಿಸಿ ಹಾಕಿದವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಪುಣೆಯ ಪೇಶ್ವೆಗಳು ಶೃಂಗೇರಿ ಮಠದಿಂದ ಆ ಕಾಲದಲ್ಲಿ 60 ಲಕ್ಷ ರೂ.ಗಳನ್ನು ಲೂಟಿ ಮಾಡಿಕೊಂಡು ಹೋದಾಗ ಟಿಪ್ಪು ನೆರವಿಗೆ ಬಂದರು. ಇದರ ಕುರಿತು ಟಿಪ್ಪು ಮತ್ತು ಹೈದರ್ ಬರೆದ ಪತ್ರಗಳು ಶೃಂಗೇರಿ ಮಠದಲ್ಲಿರುವ ಬಗ್ಗೆ ಶರ್ಮ ಉಲ್ಲೇಖಿಸಿದ್ದಾರೆ.

ಟಿಪ್ಪು ಸುಲ್ತಾನ್ ವಿನಯಶೀಲನಾಗಿದ್ದ, ಪುಸ್ತಕಪ್ರೇಮಿಯಾಗಿದ್ದ. ಶ್ರೀರಂಗಪಟ್ಟಣದಲ್ಲಿ ಅವನ ಅರಮನೆಯಲ್ಲಿ ಅತ್ಯುತ್ತಮವಾದ ಗ್ರಂಥ ಭಂಡಾರವಿತ್ತು. ಟಿಪ್ಪು ತನ್ನ ಸಮಕಾಲೀನ ಅರಸರಿಗೆ ಬರೆದ ಪತ್ರಗಳ ರಾಶಿಯೇ ಇತ್ತು. ಆದರೆ, ಟಿಪ್ಪು ಪತನದ ನಂತರ ಬ್ರಿಟಿಷರು ಅದನ್ನು ಲಂಡನ್‌ಗೆ ಕೊಂಡೊಯ್ದರು. ನಮ್ಮ ಸರಕಾರ ಅದನ್ನು ವಾಪಸ್ ತರುವ ಪ್ರಯತ್ನ ಮಾಡಲಿಲ್ಲ. ಈಗಂತೂ ಹಿಂದೆ ಬ್ರಿಟಿಷರ ಪಾದ ಸೇವೆ ಮಾಡಿದವರು ಅಧಿಕಾರದಲ್ಲಿದ್ದಾರೆ. ಟಿಪ್ಪು ಹೆಸರನ್ನೇ ಅಳಿಸಿ ಹಾಕಲು ಹೊರಟಿದ್ದಾರೆ.

ಆ ಕಾಲದ ಉಳಿದ ರಾಜ, ಮಹಾರಾಜರಂತೆ ಟಿಪ್ಪು ಬ್ರಿಟಿಷ್ ಆಳರಸರೊಂದಿಗೆ ರಾಜಿ ಮಾಡಿಕೊಂಡಿದ್ದರೆ, ಚಮಚಾಗಿರಿ ಮಾಡಿದ್ದರೆ ಅವನ ಅರಸೊತ್ತಿಗೆ ಅಬಾಧಿತವಾಗಿರುತ್ತಿತ್ತು. ಆದರೆ, ಸ್ವಾಭಿಮಾನಿ ಟಿಪ್ಪು ಆಂಗ್ಲರಿಗೆ ಶರಣಾಗಲಿಲ್ಲ. ಹಾಗಾಗಿಯೇ ಬ್ರಿಟಿಷರು ಪುಣೆಯ ಪೇಶ್ವೆಗಳನ್ನು, ಹೈದರಾಬಾದ್ ನಿಜಾಮನನ್ನು ಟಿಪ್ಪು ವಿರುದ್ಧ ಎತ್ತಿ ಕಟ್ಟಿದರು. ಹಿಂದೂ-ಮುಸ್ಲಿಮ್ ಪ್ರಶ್ನೆ ಆಗ ಇರಲಿಲ್ಲ. ಹಾಗಾಗಿ ಮುಸ್ಲಿಮ್ ನಿಜಾಮ, ಮರಾಠಾ ಸಾಮ್ರಾಜ್ಯದ ಬ್ರಾಹ್ಮಣ ಪೇಶ್ವೆ ಒಂದಾಗಿ ಟಿಪ್ಪುವನ್ನು ಹಣಿಯಲು ಮುಂದಾದರು. ಇದನ್ನು ತಿಳಿದುಕೊಳ್ಳದ, ತಿಳಿದರೂ ತಮ್ಮ ಫ್ಯಾಶಿಸ್ಟ್ ಅಜೆಂಡಾ ಜಾರಿಗಾಗಿ ಟಿಪ್ಪುವನ್ನು ಹಿಂದೂ ವಿರೋಧಿ ಎಂದು ಗೋಳ್ವಲ್ಕರ್‌ವಾದಿಗಳು ಚಿತ್ರಿಸುತ್ತಿದ್ದಾರೆ. ಪುಸ್ತಕ ಓದದ ಅನೇಕ ಯುವಕರು ವಾಟ್ಸ್‌ಆ್ಯಪ್ ಯುನಿವರ್ಸಿಟಿಯ ಸುಳ್ಳು ಕತೆಗಳನ್ನು ಓದಿ ಟಿಪ್ಪು, ಗಾಂಧಿ, ನೆಹರೂ ವಿರುದ್ಧ ಸುಖಾ ಸುಮ್ಮನೆ ಬೈಯುತ್ತ ಅಪಪ್ರಚಾರ ಮಾಡುತ್ತಾರೆ.

ಟಿಪ್ಪು ಸುಲ್ತಾನ್ ಅಧಿಕಾರ ವಹಿಸಿಕೊಂಡ ನಂತರ ಬರೀ ಯುದ್ಧಗಳನ್ನೇ ಎದುರಿಸಬೇಕಾಯಿತು. ಅಂಥ ಪರಿಸ್ಥಿತಿಯಲ್ಲೂ ಅಭಿವೃದ್ಧಿ ಕಾರ್ಯವನ್ನು ಆತ ಕಡೆಗಣಿಸಲಿಲ್ಲ. ಭೂರಹಿತ ದಲಿತರಿಗೆ ಭೂಮಿ ಹಂಚಿದ. ಇದಕ್ಕಾಗಿಯೇ ಪಟ್ಟಭದ್ರ ಹಿತಾಸಕ್ತಿಗಳು ಆತನ ವಿರುದ್ಧ ಕೋಪ ಗೊಂಡವು. ಮೈಸೂರಿಗೆ ರೇಷ್ಮೆಯನ್ನು ಪರಿಚಯಿಸಿದ, ರೈತರಿಗೆ ನೀರಾವರಿಗೆ ಅನುಕೂಲ ಮಾಡಲು ಕನ್ನಂಬಾಡಿ ಬಳಿ ಅಣೆಕಟ್ಟು ನಿರ್ಮಾಣದ ಯೋಜನೆ ರೂಪಿಸಿದ. ಆದರೆ, ಆತನ ಈ ಕನಸು ನನಸಾಗುವ ಮೊದಲೇ ರಣರಂಗದಲ್ಲಿ ಕೊನೆಯುಸಿರೆಳೆದ. ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟು ನಿರ್ಮಾಣ ಕಾರ್ಯ ಕೈಗೊಂಡು ಪೂರ್ಣಗೊಳಿಸಿದರು.

ಟಿಪ್ಪುವಿನ ಬಗ್ಗೆ ಹೈಕೋರ್ಟ್ ಮಾತ್ರವಲ್ಲ, ಕೆಲವರು ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ತನ್ನ ಅರಸೊತ್ತಿಗಾಗಿ ಹೋರಾಡಿದ ಎಂದು ವಾದಿಸುತ್ತಾರೆ. ಆಗ ಭಾರತ ಒಂದು ದೇಶವೇ ಆಗಿರಲಿಲ್ಲ ಎಂದು ಹೇಳುತ್ತಾರೆ. ನಿಜ ಈ ವಾದ ಒಪ್ಪಿದರೆ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಲಕ್ಷ್ಮೀ ಬಾಯಿ, ರಾಣಿ ಅಬ್ಬಕ್ಕ ಇವರೂ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳಬೇಕಾಗುತ್ತದೆ. ಆದರೆ, ಅವರು ತಮ್ಮ ಅರಸೊತ್ತಿಗೆಯ ಹಿತಾಸಕ್ತಿಗಾಗಿ ಹೋರಾಟ ಮಾಡಿದ್ದರೂ ಅದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಮೊದಲ ಬಂಡಾಯದ ಕಿಡಿ ಎಂದು ಒಪ್ಪಲೇಬೇಕಾಗುತ್ತದೆ.

ಹಿಂದಿನ ಬಿಜೆಪಿ ಸರಕಾರ ಟಿಪ್ಪು ಸುಲ್ತಾನ್ ರಣರಂಗದಲ್ಲಿ ಮಡಿದು 200 ವರ್ಷಗಳ ನಂತರ ಪಠ್ಯದಲ್ಲಿ ಅವನ ಇತಿಹಾಸ ಅಳಿಸಿಹಾಕಲು ಹೊರಟು ತಪ್ಪು ಮಾಡಿತು. ಹೀಗೆ ಮಾಡುತ್ತ ಹೋದರೆ ಮೈಸೂರು ಇತಿಹಾಸದ 1850 ರಿಂದ 1800 ವರ್ಷಗಳ ಚರಿತ್ರೆಯನ್ನೇ ಮರೆ ಮಾಚಿದಂತಾಗುತ್ತದೆ. ಪಠ್ಯದಲ್ಲಿ ಔರಂಗಜೇಬ್, ಬಾಬರ್, ಅಕ್ಬರ್, ಕಿತ್ತೂರು ರಾಣಿ ಚೆನ್ನಮ್ಮ, ಗೋಡ್ಸೆ, ಸಾವರ್ಕರ್ ಬಗ್ಗೆ ಎಲ್ಲವನ್ನೂ ಅಳವಡಿಸಲಾಗಿದೆ. ಇವರಲ್ಲಿ ಒಳ್ಳೆಯವರೂ ಇದ್ದಾರೆ. ಕೆಟ್ಟವರೂ ಇದ್ದಾರೆ. ಇತಿಹಾಸದ ಪಠ್ಯದಲ್ಲಿ ಒಳ್ಳೆಯದು ಮಾತ್ರವಿರಬೇಕು. ಕೆಟ್ಟವರ ಬಗ್ಗೆ ಇರಬಾರದು ಎಂಬುದು ಅವಿವೇಕಿಗಳ ಮೊಂಡುವಾದವಾಗಿದೆ.

ಟಿಪ್ಪು ಇತಿಹಾಸವನ್ನು ಯಾವುದೇ ಸರಕಾರ ಪಠ್ಯದಿಂದ ತೆಗೆದು ಹಾಕಿದ ಮಾತ್ರಕ್ಕೆ ಇತಿಹಾಸ ಸುಳ್ಳಾಗುವುದಿಲ್ಲ. ಅಧಿಕಾರದಲ್ಲಿ ಇರುವವರಿಗೆ ವಿವೇಕ ಇರದಿದ್ದರೆ, ಜನಾಂಗ ದ್ವೇಷಿ ಫ್ಯಾಶಿಸ್ಟ್ ಸಂಘಟನೆಯೊಂದು ಚುನಾಯಿತ ಸರಕಾರವನ್ನು ತೆರೆಮರೆಯಲ್ಲಿ ನಿಂತು ನಿಯಂತ್ರಿಸುತ್ತಿದ್ದರೆ ಇಂಥ ಅವಾಂತರಗಳಾಗುತ್ತವೆ. ದೇಶ ಎದುರಿಸುತ್ತಿರುವ ಪ್ರಸಕ್ತ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಚರಿತ್ರೆಯ ಗೋರಿಯನ್ನು ಹೀಗೆ ಅಗೆಯುತ್ತ ಹೋದರೆ, ಅದಕ್ಕೆ ಕೊನೆ ಎಂಬುದಿಲ್ಲ. ಆದ್ದರಿಂದ ಸಿದ್ದರಾಮಯ್ಯನವರ ಸರಕಾರ ಹಿಂದಿನ ಸರಕಾರ ಪಠ್ಯಪುಸ್ತಕಗಳ ಪರಿಷ್ಕರಣೆಯಲ್ಲಿ ಮಾಡಿರುವ ಈ ಅವಾಂತರವನ್ನು ಸರಿಪಡಿಸಬೇಕಾಗಿದೆ. ಅದಕ್ಕಾಗಿ ಪರಿಣಿತರ ಸಮಿತಿ ರಚಿಸಿದೆ. ಅದು ಈ ಅಂಶಗಳನ್ನು ಗಮನಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಸನತ್‌ಕುಮಾರ್ ಬೆಳಗಲಿ

contributor

Similar News