ನನ್ನ ಮನೆ ಬಾಗಿಲಿಗೆ ಬರುವ ಮುನ್ನ ಅದಾನಿ ಕಲ್ಲಿದ್ದಲು ಹಗರಣದ ಬಗ್ಗೆ ತನಿಖೆ ನಡೆಸಿ: ಬಿಜೆಪಿಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಿರುಗೇಟು

Update: 2023-10-16 12:17 GMT

Photo : Mahua Moitra/Facebook

ಹೊಸದಿಲ್ಲಿ: ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ಗಂಭೀರ ಆರೋಪ ಹೊರಿಸಿದ್ದು, ಮೊಯಿತ್ರಾ ಅವರು ಲಂಚ ಪಡೆದಿರುವ ಬಗ್ಗೆ ಸಾಕ್ಷ್ಯವಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಭ್ರಷ್ಟಾಚಾರದ ಆರೋಪದ ಮೇಲೆ ಸಂಸದೆಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಹುವಾ ಮತ್ತು ಉದ್ಯಮಿ ದರ್ಶನ್ ಹಿರಾನಂದಾನಿ ನಡುವೆ ಲಂಚದ ವಿನಿಮಯದ ಸಾಕ್ಷ್ಯವಿದೆ ಎಂದು ಅವರು ಹೇಳಿದ್ದಾರೆ. ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ಮಹುವಾ ಅವರು ನಗದು ಮತ್ತು ಉಡುಗೊರೆಗಳನ್ನು ಪಡೆದುಕೊಂಡರು ಎಂದು ಅವರು ಆರೋಪಿಸಿದ್ದಾರೆ.

ಮೊಯಿತ್ರಾ ಅವರು ಸಂಸತ್ತಿನಲ್ಲಿ ಕೇಳಿದ ಒಟ್ಟು ಪ್ರಶ್ನೆಗಳಲ್ಲಿ 61 ಪ್ರಶ್ನೆಗಳಲ್ಲಿ ಉದ್ಯಮಿ ದರ್ಶನ್ ಹಿರಾನಂದಾನಿ ಮತ್ತು ಅವರ ಕಂಪನಿಯ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಸರಿಸುಮಾರು 50 ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಅದಾನಿ ಗ್ರೂಪ್ ಬಗ್ಗೆ ಕೇಳಿದ ಪ್ರಶ್ನೆಗಳ ಹಿಂದೆ ಹಿರಾನಂದಾನಿ ಅವರ ಕಂಪೆನಿಯ ಹಿತಾಸಕ್ತಿ ಇದೆ ಎಂದು ಆರೋಪ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ ಅವರು, “ಅದಾನಿಯವರ ಕಡಲಾಚೆಯ ಹಣದ ಜಾಡು, ಬೇನಾಮಿ ಖಾತೆಗಳ ಇನ್‌ವಾಯ್ಸ್ ಕುರಿತು ತನಿಖೆಯನ್ನು ಪೂರ್ಣಗೊಳಿಸಿದ ನಂತರ ಸಿಬಿಐ ನನ್ನ ವಿರುದ್ಧದ ತನಿಖೆ ಆರಂಭಿಸಲಿ, ಅದಾನಿ ಕಲ್ಲಿದ್ದಲು ಹಗರಣದ ಬಗ್ಗೆ ಇಡಿ ತನಿಖೆ ಪೂರ್ತಿಗೊಳಿಸಿದ ಮೇಲೆ ನನ್ನ ಮನೆ ಬಾಗಿಲಿಗೆ ಬರಲಿ” ಎಂದು ತಿರುಗೇಟು ನೀಡಿದ್ದಾರೆ.

“ಅದಾನಿ ಪೈಪೋಟಿಯನ್ನು ಎದುರಿಸಲು ಮತ್ತು ವಿಮಾನ ನಿಲ್ದಾಣಗಳನ್ನು ಖರೀದಿಸಲು ಬಿಜೆಪಿ ಏಜೆನ್ಸಿಗಳನ್ನು ಬಳಸಬಹುದು, ಅದನ್ನೇ ನನ್ನೊಂದಿಗೆ ಮಾಡಲು ಪ್ರಯತ್ನಿಸಿ” ಎಂದು ಸವಾಲು ಹಾಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News