ಕಾಂಗ್ರೆಸ್ ಇವಿಎಂ ತಿರಸ್ಕರಿಸಿರಲಿಲ್ಲ : ಪಿ.ಚಿದಂಬರಂ ಸ್ಪಷ್ಟನೆ

Update: 2024-06-07 17:42 GMT


ಚೆನ್ನೈ: ಕಾಂಗ್ರೆಸ್ ಪಕ್ಷವು ವಿದ್ಯುನ್ಮಾನ ಮತ ಯಂತ್ರಗಳನ್ನು ತಿರಸ್ಕರಿಸಿರಲಿಲ್ಲ. ವಿವಿಪ್ಯಾಟ್ ಸುಧಾರಣೆಗೆ ಮಾತ್ರ ಆಗ್ರಹಿಸಿತ್ತು ಎಂದು ಶುಕ್ರವಾರ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ನಮ್ಮ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ವಿದ್ಯುನ್ಮಾನ ಮತ ಯಂತ್ರಗಳನ್ನು ತಿರಸ್ಕರಿಸಿರಲಿಲ್ಲ" ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಪಿ.ಚಿದಂಬರಂ, " ದಯವಿಟ್ಟು ಪ್ರಣಾಳಿಕೆಯನ್ನು ಓದಿ. ವಿವಿಪ್ಯಾಟ್‌ನ ಪ್ರತಿಯು ನಾವು ಓದಲು ನಾಲ್ಕರಿಂದ ಐದು ಸೆಕೆಂಡ್ ಕಾಲ ಪ್ರದರ್ಶನಗೊಂಡು, ನಂತರ ಪೆಟ್ಟಿಗೆಗೆ ಬೀಳುತ್ತದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಮತ್ತೊಂದು ಸುಧಾರಣೆ ಕುರಿತು ಹೇಳಿದ್ದೇವೆ" ಎಂದು ಹೇಳಿದರು.

ಆ ಪ್ರತಿಯು ಸ್ವಯಂಚಾಲಿತವಾಗಿ ವಿವಿಪ್ಯಾಟ್ ಪೆಟ್ಟಿಗೆಗೆ ಬೀಳುವ ಬದಲು ಮತದಾರರು ಆ ಪ್ರತಿಯನ್ನು ಸ್ವೀಕರಿಸಲು ಸಾಧ್ಯವಾಗಬೇಕು. ಮತದಾರನು ಅದನ್ನು ನೋಡಿದ ನಂತರ, ಅದನ್ನು ಮತ್ತೆ ಪೆಟ್ಟಿಗೆಗೆ ಹಾಕಬೇಕು. ಈ ಸುಧಾರಣೆಯಿಂದ ಇವಿಎಂ-ವಿವಿಪ್ಯಾಟ್ ವ್ಯವಸ್ಥೆಯ ಬಗ್ಗೆ ಯಾವುದೇ ಅನುಮಾನ ಉಳಿಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News