ಕೇದಾರನಾಥ ದೇಗುಲದ ಗರ್ಭಗುಡಿಗೆ ಚಿನ್ನದ ಲೇಪನ ಕಾರ್ಯದಲ್ಲಿ 1.25 ಕೋಟಿ ರೂ. ಹಗರಣ ಆರೋಪ: ತನಿಖೆಗೆ ಮುಂದಾದ ಉತ್ತರಾಖಂಡ ಸರಕಾರ

Update: 2023-06-24 05:27 GMT

ಡೆಹ್ರಾಡೂನ್: ಕೇದಾರನಾಥ ದೇಗುಲದ ಗರ್ಭಗುಡಿಗೆ ಚಿನ್ನದ ಲೇಪನ ಕಾರ್ಯದಲ್ಲಿ 1.25 ಕೋಟಿ ರೂ. ಹಗರಣ ನಡೆದಿರುವ ಆರೋಪದ ಕುರಿತು ತನಿಖೆ ನಡೆಸಲು ಉತ್ತರಾಖಂಡ ಸರಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಧರಿಸಿದೆ.

ರಾಜ್ಯದ ಪ್ರವಾಸೋದ್ಯಮ, ಧರ್ಮ ಹಾಗೂ ಸಂಸ್ಕೃತಿ ಸಚಿವ ಸತ್ಪಾಲ್ ಮಹಾರಾಜ್ ಅವರು ಶುಕ್ರವಾರ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಗರ್ವಾಲ್ ಕಮಿಷನರ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸುವಂತೆ ಸಂಸ್ಕೃತಿ ಮತ್ತು ಧಾರ್ಮಿಕ ವ್ಯವಹಾರಗಳ ಕಾರ್ಯದರ್ಶಿ ಹರಿಚಂದ್ರ ಸೆಮ್ವಾಲ್ ಅವರಿಗೆ ಸೂಚನೆ ನೀಡಿದ್ದಾರೆ.

ತನಿಖಾ ಸಮಿತಿಯಲ್ಲಿ ತಾಂತ್ರಿಕ ತಜ್ಞರು ಹಾಗೂ ಅಕ್ಕಸಾಲಿಗರನ್ನು ಸೇರಿಸಿಕೊಳ್ಳುವಂತೆ ಸೆಮ್ವಾಲ್ ಗೆ ಸೂಚಿಸಿದ್ದಾರೆ.

ಈ ವಿಚಾರದಲ್ಲಿ ರಾಜ್ಯ ಸರಕಾರ ‘ಅತ್ಯಂತ ಸೂಕ್ಷ್ಮ’ವಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸತ್ಪಾಲ್ ಮಹಾರಾಜ್ ಹೇಳಿದ್ದಾರೆ.

ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯಿದೆ, 1939 ರ ನಿಬಂಧನೆಗಳ ಪ್ರಕಾರ, ದೇಣಿಗೆಯನ್ನು ಸ್ವೀಕರಿಸಲಾಗಿದೆ ಹಾಗೂ ಕೇದಾರನಾಥ ದೇವಾಲಯದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಲು ರಾಜ್ಯ ಸರಕಾರದಿಂದ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಕೇದಾರನಾಥ ದೇಗುಲದ ತೀರ್ಥ ಪುರೋಹಿತ್ ಹಾಗೂ ಚಾರ್ಧಾಮ್ ಮಹಾಪಂಚಾಯತ್ ಉಪಾಧ್ಯಕ್ಷ ಸಂತೋಷ್ ತ್ರಿವೇದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದನ್ನು ಬಿಡುಗಡೆ ಮಾಡಿ ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನ ಮಾಡುವ ಬದಲು ಹಿತ್ತಾಳೆ ಲೇಪನ ಮಾಡಿ 1.25 ಕೋಟಿ ರೂ. ಹಗರಣ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News