ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ದೂತವಾಸಕ್ಕೆ ಬೆಂಕಿ ಹಚ್ಚಿದ ಘಟನೆ ಖಂಡಿಸಿದ ಅಮೆರಿಕ

Update: 2023-07-04 07:23 GMT

Screengrab/ Twitter/ @MajorPoonia

ನ್ಯೂಯಾರ್ಕ್: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತವಾಸದ ಕಟ್ಟಡದ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಅಮೆರಿಕ ಖಂಡಿಸಿದ್ದು, ಇದನ್ನು ಕ್ರಿಮಿನಲ್ ಅಪರಾಧ ಎಂದು ಹೇಳಿದೆ.

"ಶನಿವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಕುರಿತಂತೆ ವರದಿಯಾದ ವಿಧ್ವಂಸಕ ಕೃತ್ಯ ಹಾಗೂ ಬೆಂಕಿ ಹಚ್ಚುವ ಪ್ರಯತ್ನವನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಅಮೆರಿಕದಲ್ಲಿ ರಾಜತಾಂತ್ರಿಕ ಸೌಲಭ್ಯಗಳು ಅಥವಾ ವಿದೇಶಿ ರಾಜತಾಂತ್ರಿಕರ ವಿರುದ್ಧ ವಿಧ್ವಂಸಕ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ ”ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸೋಮವಾರ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಖಾಲಿಸ್ತಾನ್ ಬೆಂಬಲಿಗರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ರವಿವಾರ ಮುಂಜಾನೆ ಕಾನ್ಸುಲೇಟ್ ಗೆ ಬೆಂಕಿ ಹಚ್ಚಲಾಗಿದೆ.

"ಹಿಂಸೆ ಹಿಂಸೆಯನ್ನು ಹುಟ್ಟುಹಾಕುತ್ತದೆ" ಎಂಬ ಪದಗಳನ್ನು ಹೊಂದಿರುವ ವೀಡಿಯೊದಲ್ಲಿ ಕೆನಡಾ ಮೂಲದ ಖಾಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ಸುದ್ದಿ ಲೇಖನಗಳನ್ನು ಸಹ ಒಳಗೊಂಡಿದೆ.

ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದಾರೆ.

ಜುಲೈ 2 ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ ಕಾನ್ಸುಲೇಟ್ ಗೆ ಬೆಂಕಿ ಹಚ್ಚಿದ ಘಟನೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರಪಂಚದ ಯಾವುದೇ ಭಾಗದಲ್ಲಿ ಸಿಖ್ಖರು ತೊಂದರೆಗೆ ಒಳಗಾದಾಗ ಭಾರತ ಸರಕಾರ ಯಾವಾಗಲೂ ಅವರ ಜೊತೆ ನಿಂತಿದೆ. ಐಎಸ್ಐ ಪ್ರಾಯೋಜಿತ ಇಂತಹ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಒಗ್ಗೂಡುವಂತೆ ಜಗತ್ತಿನಾದ್ಯಂತ ಇರುವ ಸಿಖ್ಖರನ್ನು ನಾನು ಒತ್ತಾಯಿಸುತ್ತೇನೆ ಎಂದು ಸಿರ್ಸಾ ಅವರು ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News