ಮಹಾರಾಷ್ಟ್ರ| ಗೃಹ ಖಾತೆಗೆ ಪಟ್ಟು ಹಿಡಿದ ಏಕನಾಥ್ ಶಿಂಧೆ: ಕಗ್ಗಂಟಾದ ಅಧಿಕಾರ ಹಂಚಿಕೆ
ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿ ಬಳಿ ಗೃಹ ಇಲಾಖೆಗೆ ಬೇಡಿಕೆ ಇಟ್ಟಿದ್ದು, ಖಾತೆ ಹಂಚಿಕೆ ಮಹಾಯುತಿ ಮೈತ್ರಿಕೂಟಕ್ಕೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನಲಾಗಿದೆ.
ದೇವೇಂದ್ರ ಪಡ್ನವೀಸ್ ನೇತೃತ್ವದ ಮಹಾರಾಷ್ಟ್ರದ ಮಹಾಯುತಿ ಸರಕಾರದ ಖಾತೆ ಹಂಚಿಕೆ ಕುರಿತು ಮಾತುಕತೆ ನಡೆಯುತ್ತಿದೆ. ಈ ಮಧ್ಯೆ ಉಪಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಗೃಹ ಖಾತೆಗೆ ಬೇಡಿಕೆ ಇಟ್ಟಿದೆ. ಆದರೆ, ಬಿಜೆಪಿ ಗೃಹ ಖಾತೆಯನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಬಯಸಿದೆ ಎನ್ನಲಾಗಿದೆ.
ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಡಿ.11 ಮತ್ತು 16ರ ನಡುವೆ ಸಂಪುಟ ರಚನೆ ಸಾಧ್ಯತೆಯಿದೆ. ಶಿಂಧೆ ನೇತೃತ್ವದ ಸರ್ಕಾರದಲ್ಲಿ ದೇವೇಂದ್ರ ಫಡ್ನವಿಸ್ ಉಪ ಮುಖ್ಯಮಂತ್ರಿಯಾಗಿದ್ದಾಗ ಅವರು ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದರು. ಶಿಂಧೆ ಅವರು ಈಗ ಗೃಹ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಮತ್ತು ಈ ಕುರಿತು ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಶಿವಸೇನೆ ಶಾಸಕ ಭರತ್ ಗೋಗಾವಲೆ ಹೇಳಿದ್ದಾರೆ.
ಈ ಕುರಿತು ಯಾರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಭರತ್ ಗೋಗಾವಲೆ, ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮುಂಬೈನ ಆಝಾದ್ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಏಕನಾಥ ಶಿಂಧೆ ಮತ್ತು ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.