ಕುಂದಾಪುರ: ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

Update: 2023-06-26 10:29 GMT

ಕುಂದಾಪುರ: ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿದ ಘಟನೆ ಭಾನುವಾರ ರಾತ್ರಿ ವೇಳೆ ನಡೆದಿದ್ದು ಸತತ ಹುಡುಕಾಟದ ಬಳಿಕ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿರು ಬಗ್ಗೆ ವದಿಯಾಗಿದೆ.

ಕಾಳಾವರ ನರಿಕೊಡ್ಲು ಮನೆ ನಿವಾಸಿ ಹರೀಶ್ ಪೂಜಾರಿ (37) ಮೃತ ದುರ್ದೈವಿ. ಭಾನುವಾರ ಮಳೆಯಿದ್ದ ಕಾರಣ ಮೀನು ಶಿಕಾರಿಗಾಗಿ ಹರೀಶ್ ಪೂಜಾರಿ ಹಾಗೂ ಮೂವರು ಸ್ನೇಹಿತರು ಕಾಳಾವಾರ ದೇವಸ್ಥಾನದ ಸಮೀಪದ ಕೆರೆಗೆ ತೆರಳಿದ್ದು ಈ ವೇಳೆ ಮೀನು ಹಿಡಿಯಲು ಹರೀಶ್ ನೀರಿಗಿಳಿದು ಈಜಿದ್ದಾರೆ. ಕೆರೆಯ ಒಂದು ಭಾಗದಿಂದ ಇನ್ನೊಂದು ದಡಕ್ಕೆ ಅನತಿ ದೂರದಲ್ಲಿ ಈಜುತ್ತಿದ್ದಾಗಲೇ  ಮುಳುಗಿದ್ದಾರೆ ಎನ್ನಲಾಗಿದೆ.

ಸ್ನೇಹಿತರು ಸ್ಥಳೀಯರಿಗೆ ವಿಚಾರ ತಿಳಿಸಿದ್ದು, ರಾತ್ರಿಯೇ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರು ಆಗಮಿಸಿ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ದರು. ಕತ್ತಲಿದ್ದ ಕಾರಣ ಕಾರ್ಯಾಚರಣೆಗೆ ಅಡಚಣೆಯಾಗಿತ್ತು. ಸೋಮವಾರ ಮುಂಜಾನೆಯೇ ಆಪತ್ಪಾಂಧವ ಈಶ್ವರ್ ಮಲ್ಪೆ ತಂಡ ಆಗಮಿಸಿ ಮತ್ತೆ ಹುಡುಕಾಟ ಆರಂಭಿಸಿದ್ದರು. ಮುಳುಗು ತಜ್ಞ ಈಶ್ವರ ಮಲ್ಪೆ, ಶಬ್ಬೀರ್ ಮಲ್ಪೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಳಾವರ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಧೀರ್ ಜಿ., ರಾಜಶೇಖರ್, ಪ್ರಕಾಶ್ ಆಚಾರ್ ಹಾಗೂ ಅಗ್ನಿ ಶಾಮಕ ದಳದವರು ಜಂಟಿ ಕಾರ್ಯಾಚರಣೆ ನಡೆಸಿದ್ದು ಸತತ ಹುಡುಕಾಟದ ಬಳಿಕ ಈಶ್ವರ ಮಲ್ಪೆ ಅವರು ಕೆರೆಯ ಇನ್ನೊಂದು ಬದಿಯ ದಡದ ಸನಿಹ ಮೃತದೇಹ ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News