ಮಂಗಳೂರು: ಡ್ರಗ್ಸ್ ಹಾವಳಿಯಲ್ಲಿ ಪೊಲೀಸರು ಭಾಗಿಯಾಗಿದ್ದರೆ ಕಠಿಣ ಕ್ರಮ: ಕುಲದೀಪ್ ಆರ್. ಜೈನ್

Update: 2023-06-26 12:02 GMT

ಮಂಗಳೂರು, ಜೂ.26: ನಗರವನ್ನು ಡ್ರಗ್ಸ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಇಲಾಖೆ ಅಭಿಯಾನ ನಡೆಸುತ್ತಿದ್ದು, ಈ ಹಾವಳಿಯಲ್ಲಿ ತಳ ಮಟ್ಟದ ಪೊಲೀಸರು ಭಾಗಿಯಾಗಿದ್ದು ಕಂಡು ಬಂದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ತನಗೆ ಅಂತಹ ಯಾವುದೇ ಮಾಹಿತಿ ದೊರಕಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಆಯುಕ್ತರು ಈ ಪ್ರತಿಕ್ರಿಯೆ ನೀಡಿದರು.

ಅಧಿಕಾರಿ ಹಾಗೂ ಸಿಬ್ಬಂದಿಗೆ ಈ ಬಗ್ಗೆ ಈಗಾಗಲೇ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ. ಡ್ರಗ್ಸ್ ವಿಚಾರದಲ್ಲಿ ಸಿಬ್ಬಂದಿ ಅಥವಾ ಅಧಿಕಾರಿಗಳು ಭಾಗಿಯಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಅಂತಹ ಯಾವುದೇ ರೀತಿಯ ಅಂಶ ಗಮನಕ್ಕೆ ಬಂದಲ್ಲಿಯೂ ತಾರಮತ್ಯವಿಲ್ಲದೆ ಕ್ರಮ ವಹಿಸಲಾಗುವುದು ಎಂದರು.

ಡ್ರಗ್ಸ್ ಮುಕ್ತ ಮಂಗಳೂರು ಪ್ರಯುಕ್ತ ಎರಡು ಹಂತದಲ್ಲಿ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮೊದಲನೆಯದಾಗಿ ಡ್ರಗ್ಸ್ ಪೂರೈಕೆ-ಸಾಗಾಟದಾರರ ಮೇಲೆ ಇಲಾಖೆ ತೀಕ್ಷ್ಣ ಹಾಗೂ ಆಳವಾಗಿ ನಿಗಾ ಇರಿಸಿದೆ. ಮತ್ತೊಂದೆಡೆ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News