ಉಡುಪಿ: ಸರ್ವಿಸ್ ರಸ್ತೆ ಸಮೇತ ಕುಸಿದು ಬಿದ್ದ ಅಂಡರ್ ಪಾಸ್ ಕಾಮಗಾರಿಗೆ ತೆಗೆಯಲಾದ ಮಣ್ಣು
Update: 2023-07-10 06:51 GMT
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಡರ್ ಪಾಸ್ ಕಾಮಗಾರಿಗೆ ಸಂಬಂಧಿಸಿ ತೆಗೆಯಲಾದ ಹೊಂಡದ ಮಣ್ಣು ಸರ್ವಿಸ್ ರಸ್ತೆ ಸಮೇತ ಕುಸಿದು ಬಿದ್ದಿರುವ ಘಟನೆ ಸಂತೆಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿರುವ ಬಗ್ಗೆ ವರದಿಯಾಗಿದೆ.
ಜ.16 ರಿಂದ ಪ್ರಾರಂಭಗೊಂಡಿರುವ ಅಂಡರ್ ಪಾಸ್ ಕಾಮಗಾರಿಯು ನಿಧಾನ ಗತಿಯಲ್ಲಿ ನಡೆಯುತ್ತಿದ್ದು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಘಟನೆ ಸಂಭವಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಹಾನಿಯಾಗಿದ್ದಲ್ಲದೆ ಮಣ್ಣು ಅಂಡರ್ ಪಾಸ್ ನ ತಡೆಗೋಡೆ ಮೇಲೆ ಕೂಡ ಬಿದ್ದಿರುವುದರಿಂದ ಕಾಮಗಾರಿಗೆ ಅಡ್ಡಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸಂತೆಕಟ್ಟೆ ಹಾಗೂ ನಯಂಪಳ್ಳಿ ಗ್ರಾಮಸ್ಥರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದು ಸುಮಾರು 300ಕ್ಕೂ ಅಧಿಕ ಕುಟುಂಬಗಳು ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿವೆ ಎನ್ನಲಾಗಿದೆ.