ಎಲ್ಲಾ ಮಾದರಿ ಕ್ರಿಕೆಟ್ ನಿಂದ ನಿವೃತ್ತಿ ನಿರ್ಧಾರ ಹಿಂಪಡೆದ ಪಶ್ಚಿಮ ಬಂಗಾಳ ಸಚಿವ ಮನೋಜ್ ತಿವಾರಿ

Update: 2023-08-08 14:49 GMT

Photo : twitter.com/tiwarymanoj

ಕೋಲ್ಕತಾ: ಭಾರತ ಹಾಗೂ ಬಂಗಾಳದ ಬ್ಯಾಟರ್ ಮನೋಜ್ ತಿವಾರಿ ಎಲ್ಲಾ ಮಾದರಿ ಕ್ರಿಕೆಟ್ ನಿಂದ ನಿವೃತ್ತಿಯಾಗುವ ತನ್ನ ನಿರ್ಧಾರವನ್ನು ಮಂಗಳವಾರ ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ. ಪ್ರಸಕ್ತ ಪಶ್ಚಿಮ ಬಂಗಾಳದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವರೂ ಆಗಿರುವ ತಿವಾರಿ ಕಳೆದ ಗುರುವಾರ ಇನ್ಸ್ಟಾಗ್ರಾಮ್ನಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.

ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ಅಧ್ಯಕ್ಷ ಸ್ನೇಹಶಿಶ್ ಗಂಗುಲಿಯವರೊಂದಿಗೆ ಚರ್ಚಿಸಿದ ನಂತರ 37ರ ಹರೆಯದ ಬಲಗೈ ಬ್ಯಾಟರ್ ತನ್ನ ಮನಸ್ಸು ಬದಲಾಯಿಸಿದ್ದು, ನಿವೃತ್ತಿ ನಿರ್ಧಾರ ಹಿಂಪಡೆದು ತಕ್ಷಣವೇ ಪ್ರಥಮ ದರ್ಜೆ ಕ್ರಿಕೆಟಿಗೆ ಮರಳಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ತಿವಾರಿ 2015ರಲ್ಲಿ ಭಾರತದ ಪರ ಕೊನೆಯ ಬಾರಿ ಆಡಿದ್ದರು. ಆಗ ಝಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 34 ರನ್ ಗಳಿಸಿದ್ದರು. 2011-12 ಋತುವಿನಲ್ಲಿ ಚೆನ್ನೈನಲ್ಲಿ ನಡೆದ ಏಕದಿನ ಕ್ರಿಕೆಟ್ನಲ್ಲಿ ಔಟಾಗದೆ 104 ರನ್ ಗಳಿಸಿದ್ದರು. 2008 ಹಾಗೂ 2015ರ ಮಧ್ಯೆ 12 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಿದ್ದರು. 2012ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಬಂಗಾಳ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 9 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. 10 ಸಾವಿರ ರನ್ ಪೂರೈಸಲು 92 ರನ್ ಅಗತ್ಯವಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News