ಪಾಕ್ ಕ್ರಿಕೆಟ್ ತಂಡವನ್ನು ಭರ್ಜರಿಯಾಗಿ ಸ್ವಾಗತಿಸುವ ಬಿಸಿಸಿಐ, ಅಪಪ್ರಚಾರ ಮಾಡುವ ಬಲಪಂಥೀಯರು !
ಹೊಸದಿಲ್ಲಿ: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಪಾಲ್ಗೊಳ್ಳಲು ಕಳೆದ ತಿಂಗಳ ಆರಂಭದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿದಾಗಿನಿಂದ, ಕೆಲವು ಸುದ್ದಿ ನಿರೂಪಕರು ಮತ್ತು ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಪಾಕ್ ಕ್ರಿಕೆಟ್ ತಂಡದ ವಿರುದ್ಧ ನಿರಂತರ ವಿವಾದಗಳನ್ನು ಸೃಷ್ಟಿಸುತ್ತಿದೆ.
ಹೈದರಾಬಾದ್‌ಗೆ ಆಗಮಿಸಿದ ಪಾಕಿಸ್ತಾನ ತಂಡವು ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಅಭ್ಯಾಸ ಪಂದ್ಯಗಳನ್ನು ಆಡಿತ್ತು.
ಆದರೆ ಪಾಕಿಸ್ತಾನದ ಆಟಗಾರರ ಮಾತ್ರವಲ್ಲದೆ, ಅವರನ್ನು ಬೆಂಬಲಿಸುವ ಅಭಿಮಾನಿಗಳು ಕೂಡಾ ಬಲಪಂಥೀಯ ಬಳಕೆದಾರರಿಂದ ಸಾಮಾಜಿಕ ಮಾಧ್ಯಮದಲ್ಲಿ ದಾಳಿಗೆ ಗುರಿಯಾಗಿದ್ದಾರೆ.
ವಿಶೇಷವಾಗಿ ಹೈದರಾಬಾದ್‌ನ ಅಭಿಮಾನಿಗಳು, ಈ ಬಲಪಂಥೀಯ ಬಳಕೆದಾರರಿಂದ ದಾಳಿಗೆ ಒಳಗಾಗಿದ್ದಾರೆ, ಪಾಕಿಸ್ತಾನಕ್ಕೆ ಕ್ರಿಕೆಟ್ ಅಭಿಮಾನಿಗಳು ನೀಡುತ್ತಿರುವ ಬೆಂಬಲಕ್ಕೆ ಕೋಮುವಾದದ ಆಯಾಮವನ್ನು ಬಲಪಂಥೀಯರು ನೀಡಿದ್ದು, ಅವರ ವಿರುದ್ಧ ದೇಶದ ಜನರಲ್ಲಿ ದ್ವೇಷ ಹರಡಲು ಅದನ್ನು ಬಳಸಲಾಗಿದೆ.
ಹೈದರಾಬಾದ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ಪಂದ್ಯದ ಸಮಯದಲ್ಲಿ, ಪಾಕಿಸ್ತಾನ ಗೆಲ್ಲಲಿದೆ ಎಂದು ಅಭಿಮಾನಿಗಳು ಘೋಷಣೆ ಕೂಗಿರುವುದನ್ನು, ಬಲಪಂಥೀಯರು ಭಯೋತ್ಪಾದಕರು ಮತ್ತು ಭಯೋತ್ಪಾದಕ ಪ್ರಚಾರಕರಿಗೆ ಬೆಂಬಲ ಎಂದು ಹಣೆಪಟ್ಟಿ ಕಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಹುಯಿಲೆಬ್ಬಿಸಿದ್ದಾರೆ.
ಹಲವಾರು ಪ್ರಮುಖ ವ್ಯಕ್ತಿಗಳು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಅಭಿಮಾನಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲು ಮತ್ತು ಅವರನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ (X) ನಲ್ಲಿ ಫಾಲೋ ಮಾಡುತ್ತಿರುವ ಬಾಲಾ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರ ಒಬ್ಬರು ಈ ಬಗ್ಗೆ ಪದೇ ಪದೇ ದ್ವೇಷದ ಸಂದೇಶಗಳನ್ನು ಮತ್ತು ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹರಡುತ್ತಿದ್ದಾರೆ.
"ಪಾಕಿಸ್ತಾನಿ ಆಟಗಾರರಿಂದ ಮಾನ್ಯತೆ ಪಡೆಯಲು ಹೈದರಾಬಾದಿ ಮುಸ್ಲಿಮರ ಆಕಾಂಕ್ಷೆಯನ್ನು ನೋಡಿ. ʼರಿಝ್ವಾನ್ ಸರ್, ರಿಝ್ವಾನ್ ಸರ್, ನಾವು ಪಾಕಿಸ್ತಾನವನ್ನು ಪ್ರೀತಿಸುತ್ತೇವೆʼ ಎಂದು ಅವರು ಹೇಳುತ್ತಿದ್ದಾರೆ” ಎಂದು ಬಾಲಾ ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲದೆ, “ಗಾಂಧಿ ಮತ್ತು ನೆಹರು ಭಾರತಕ್ಕೆ ಮಾಡಿದ ಸರಿಪಡಿಸಲಾಗದ ದೊಡ್ಡ ಹಾನಿ ಎಂದರೆ ವಿಭಜನೆಯ ಸಮಯದಲ್ಲಿ 100% ಜನಸಂಖ್ಯೆಯನ್ನು ಅಲ್ಲಿಗೆ ವರ್ಗಾಯಿಸದಿರುವುದು." ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಇದೆಲ್ಲದರ ನಡುವೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ನೇತೃತ್ವದ ಬಿಸಿಸಿಐ ಪಾಕಿಸ್ತಾನ ತಂಡವು ಗುಜರಾತ್‌ನ ಅಹಮದಾಬಾದ್‌ಗೆ ಆಗಮಿಸಿದಾಗ ಅಲ್ಲಿ ಅವರಿಗೆ ಭವ್ಯವಾದ ಸ್ವಾಗತವನ್ನು ನೀಡಿತ್ತು. ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡುತ್ತಾ ನೃತ್ಯಗಾರರು ಅವರನ್ನು ಸ್ವಾಗತಿಸುವಂತೆ ಭವ್ಯವಾದ ಸ್ವಾಗತವನ್ನು ಅವರು ಪಡೆದಿದ್ದಾರೆ.
ಈ ಕ್ರಮಕ್ಕೆ ಬಲಪಂಥೀಯರನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ಷೇಪಿಸಿದ್ದು, ಬಲಪಂಥೀಯರದ್ದು ಕೇವಲ ಬೂಟಾಟಿಕೆ ಎಂದು ಕರೆದಿದ್ದಾರೆ.
ಈ ಹಿಂದೆ, ಪಾಕಿಸ್ತಾನ ತಂಡವು ಹೈದರಾಬಾದ್‌ಗೆ ಆಗಮಿಸಿದಾಗ, ಸ್ಥಳೀಯ ಅಭಿಮಾನಿಗಳು ತಂಡವನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಸೇರಿದ್ದನ್ನು ಬಲಪಂಥೀಯ ಸುದ್ದಿ ನಿರೂಪಕರು ಮತ್ತು ಬಳಕೆದಾರರು ಟೀಕಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಬಿಸಿಸಿಐ ಅದ್ಧೂರಿ ಕಾರ್ಯಕ್ರಮಗಳನ್ನು ನಿಗದಿಪಡಿಸಿದ್ದು, ವಿವಾದವನ್ನು ಹುಟ್ಟುಹಾಕಿದೆ.
ವಿಶ್ವಕಪ್ ಮೊದಲ ಪಂದ್ಯಕ್ಕೆ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಿಲ್ಲ, ಬದಲಾಗಿ ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೂ ಮುನ್ನ ಹಲವಾರು ಬಾಲಿವುಡ್ ತಾರೆಯರನ್ನು ಕರೆದು ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದೆ.
ಒಂದೆಡೆ, ಬಲಪಂಥೀಯರು ಪಾಕ್ ಕ್ರಿಕೆಟ್ ತಂಡದ ಅಭಿಮಾನಿಗಳ ವಿರುದ್ಧ ದ್ವೇಷವನ್ನು ಹರಡುತ್ತಿದ್ದರೆ, ಮತ್ತೊಂದು ಕಡೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ಬಿಸಿಸಿಐ ವೈಭವೀಕರಿಸುತ್ತಿದೆ ಎಂದು ಅಮಿತ್ ಶಾ ಪುತ್ರ ಜಯ್ ಶಾ ಅವರ ವಿರುದ್ಧ ತೀವ್ರ ಆಕ್ಷೇಪಗಳು ವ್ಯಕ್ತವಾಗಿದೆ.