ಕರ್ನಾಟಕದಲ್ಲಿ ಬಿಜೆಪಿಗೆ ಕೈಕೊಟ್ಟ ವಕ್ತ್(ಕ್ಫ್)!
ಬೆಂಗಳೂರು : ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮನ್ನಣೆ ನೀಡಿದ್ದಾರೆ. ಶಿಗ್ಗಾಂವಿ, ಸಂಡೂರು, ಚೆನ್ನಪಟ್ಟಣ ಮೂರೂ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚುನಾವಣೆ ಸಂದರ್ಭದಲ್ಲಿ ಅಬ್ಬರಿಸಿದ್ದ ಬಿಜೆಪಿಯ ʼವಕ್ಫ್ʼ ಗಲಾಟೆಯನ್ನು ಮತದಾರರು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಯ ಕೈ ಹಿಡಿದಿದ್ದಾರೆ.
ಉಪಚುನಾವಣೆ ನಡೆದ ರಾಜ್ಯದ ಮೂರೂ ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ದಾಖಲಿಸಿದ್ದು, ವಿಪಕ್ಷ ಬಿಜೆಪಿ-ಜೆಡಿಎಸ್‌ಗೆ ತೀವ್ರ ಆಘಾತ ನೀಡಿದೆ. ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ರಾಜ್ಯದ ಮತದಾರರು ಕಾಂಗ್ರೆಸ್ ʼಕೈʼ ಹಿಡಿದಿದ್ದಾರೆ.
ಸಂಡೂರಿನಲ್ಲಿ ಬಿಜೆಪಿಯ ಬಂಗಾರು ಹನುಮಂತು ವಿರುದ್ಧ ಕಾಂಗ್ರೆಸ್‌ನ ಅನ್ನಪೂರ್ಣ, ಚನ್ನಪಟ್ಟಣದಲ್ಲಿ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ಮತ್ತು ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಯಾಸಿರ್ ಖಾನ್ ಪಠಾಣ್ ಗೆಲುವು ಕಂಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಈ ಚುನಾವಣೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಸೋಲು ಅನುಭವಿಸಿದ್ದು, ಚೊಚ್ಚಲ ವಿಧಾನಸಭೆ ಪ್ರವೇಶದ ಕನಸು ಕಂಡಿದ್ದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಸೋಲನ್ನು ಅನುಭವಿಸಿದ್ದಾರೆ. ಹಾಗೆಯೇ ತಂದೆಯ ಸ್ವ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಹಿನ್ನಡೆ ಕಂಡಿದ್ದು, ತಮ್ಮ ರಾಜಕೀಯ ಜೀವನದ ಮೂರನೇ ಸೋಲನ್ನು ಅನುಭವಿಸಿದ್ದಾರೆ.