ಜಿಎಂಎಸ್ ಎಂದೇ ಖ್ಯಾತರಾಗಿದ್ದ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ನಿಧನ

Update: 2024-09-03 10:51 GMT

ತುಮಕೂರು : ಅಸೌಖ್ಯದಿಂದ ಬಳಲುತ್ತಿದ್ದ ಸಾಮಾಜಿಕ ಹೋರಾಟಗಾರ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಸೋಮವಾರ(ಸೆ.2) ರಾತ್ರಿ ನಿಧನರಾದರು.

ಪತ್ನಿಯನ್ನು ಹಿಂದೆಯೇ ಕಳೆದುಕೊಂಡಿದ್ದ ಶ್ರೀನಿವಾಸಯ್ಯನವರು ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಪುತ್ರ ಮತ್ತು ಸೊಸೆಯನ್ನು ಕಳೆದುಕೊಂಡು ಆಘಾತಕ್ಕೀಡಾಗಿದ್ದರು.

ಶ್ರೀನಿವಾಸಯ್ಯ ರನ್ನು ಇಬ್ಬರು ಮೊಮ್ಮಕ್ಕಳು, ಮಗಳು ಮತ್ತು ಅಳಿಯ ನೋಡಿಕೊಳ್ಳುತ್ತಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಜಿಎಂಎಸ್ ಕಳೆದ ರಾತ್ರಿ ಕೊನೆಯುಸಿರೆಳೆದರು.

ನೂರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಅಧ್ಯಾಪಕರಾಗಿ, ವೈಚಾರಿಕತೆ ಮತ್ತು ಪ್ರಗತಿಪರ ನಿಲುವುಗಳಿಂದ ಸದಭಿರುಚಿ ಮತ್ತು ಸಾಮರಸ್ಯದ ಜಾತ್ಯತೀತ ಸಮಾಜ ನಿರ್ಮಾಣದ ಬಗ್ಗೆ ನಿರಂತರವಾಗಿ ಹಂಬಲಿಸುವ ಸಾಮಾಜಿಕ ಹೋರಾಟಗಾರರಾಗಿ ಶ್ರೀನಿವಾಸಯ್ಯ ಗುರುತಿಸಿಕೊಂಡಿದ್ದರು.

ಕರ್ತವ್ಯ ಪ್ರಜ್ಞೆ, ಸರಳತೆ ಮತ್ತು ಪ್ರಾಮಾಣಿಕತೆಗೆ ನಮ್ಮ ಕಣ್ಣಮುಂದಿನ ಉತೃಷ್ಟ ಮಾದರಿಯಾಗಿದ್ದ ಪ್ರೊ. ಜಿ.ಎಂ.ಶ್ರೀನಿವಾಸಯ್ಯ ಅವರನ್ನು ಎಲ್ಲರೂ ಪ್ರೀತಿಯಿಂದ ಜಿಎಂಎಸ್ ಎಂದೇ ಕರೆಯುತ್ತಿದ್ದರು.

ವಿದ್ಯಾರ್ಥಿಗಳನ್ನು ಸದಭಿರುಚಿಯ ಹಾದಿಗೆ ಕೊಂಡೊಯ್ಯುವ ಅಧ್ಯಾಪಕರಾಗಿ, ಸರ್ಕಾರಿ ಸಂಸ್ಥೆಯನ್ನು ಮಾದರಿ ಎನ್ನುವಂತೆ ಕಟ್ಟುವ ದಕ್ಷ ಆಡಳಿತಗಾರನಾಗಿ, ಸಾಹಿತ್ಯ, ಸಂಗೀತ, ಕ್ರೀಡೆ, ರಂಗಭೂಮಿ ಮುಂತಾದ ಸೃಜನಶೀಲ ಆಸಕ್ತಿಗಳಲ್ಲಿ ತಮ್ಮನ್ನು ಆಳವಾಗಿ ತೊಡಗಿಸಿಕೊಂಡ ಕ್ರಿಯಾಶೀಲ ವ್ಯಕ್ತಿತ್ವ ಅವರದ್ದು.

ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಎಂಎ ಪದವೀದರರಾಗಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ಶ್ರೀನಿವಾಸಯ್ಯ ಮುಂದೆ ಪ್ರಾಂಶುಪಾಲರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News