ಹದಿಹರೆಯದ ಇಬ್ಬರು ನಾಪತ್ತೆ: ಮಣಿಪುರ ಮತ್ತೆ ಉದ್ವಿಗ್ನ
ಇಂಫಾಲ: ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಿಂದ ಸೋಮವಾರ ಇಬ್ಬರು ಹದಿಹರೆಯದ ಯುವಕರು ನಾಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ.
16 ವರ್ಷ ವಯಸ್ಸಿನ ಮೈಬಮ್ ಅವಿನಾಶ್ ಮತ್ತು 19 ವರ್ಷದ ನಿಂಗ್ಥೋಜಾಮ್ ಅಂಥೋನಿ ಭಾನುವಾರ ಮುಂಜಾನೆ ಒಂದು ಕಾರ್ಯಕ್ರಮಕ್ಕೆ ತೆರಳಿದ್ದವರು ಆ ಬಳಿಕ ಪತ್ತೆಯಾಗಿಲ್ಲ. ಇಂಫಾಲ ಪಶ್ಚಿಮ ಜಿಲ್ಲೆಯ ಸೆಕ್ಮಾಯ್ ಪ್ರದೇಶದಿಂದ ಈ ಇಬ್ಬರು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಲಂಶಂಗ್ ಮೂಲದ ಈ ಇಬ್ಬರನ್ನು ಅಪರಿಚಿತರು ಅಪಹರಿಸಿದ್ದಾರೆ ಎನ್ನುವುದು ಸ್ಥಳೀಯರ ಶಂಕೆ. ಲಂಶಂಗ್ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಂಗ್ಪೋಕ್ಪಿ ಜಿಲ್ಲೆ ದಾಟಿದ ಬಳಿಕ ಸೇನಾಪತಿ ಜಿಲ್ಲೆಯ ಆಯಿಲ್ ಪಂಪ್ ಬಳಿ ಈ ಯುವಕರ ಫೋನ್ ಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಕಪ್ಪು ಪಾಲಿಥಿನ್ ಪಾಕೆಟ್ ಗಳಲ್ಲಿ ಇವುಗಳನ್ನು ಸುತ್ತಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ನಾಪತ್ತೆಯಾದ ಯುವಕರನ್ನು ತಕ್ಷಣವೇ ಪತ್ತೆ ಮಾಡಬೇಕು ಎಂದು ಆಗ್ರಹಿಸಿ ಇಂಫಾಲದ ಮೂರು ಪ್ರಮುಖ ಉನ್ನತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ರ್ಯಾಲಿ ನಡೆಸಿದರು ಹಾಗೂ ಕೈಸಂಪೇಟೆ ಜಂಕ್ಷನ್ ನಲ್ಲಿ ಪ್ರತಿಭಟನಾ ಸಭೆ ನಡೆಸಿದರು.