ಮಲೆಕುಡಿಯರ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನ: ಶ್ರೀಧರ್ ಗೌಡ ಆಗ್ರಹ

Update: 2024-11-29 15:02 GMT

ಉಡುಪಿ, ನ.29: ಮಲೆಕುಡಿಯರು ಶತಮಾನಗಳಿಂದ ಪಶ್ಚಿಮಘಟ್ಟಗಳಲ್ಲಿ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಅವರಿಗೆ ಸೂಕ್ತವಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಆದುದರಿಂದ ಮಲೆಕುಡಿಯ ಸಮುದಾ ಯದ ಅಭಿವೃದ್ಧಿಗಾಗಿ ಸರಕಾರ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಉದ್ಯಾನವನ ಅಭಯಾರಣ್ಯದಿಂದ ಸ್ವಇಚ್ಛೆಯಿಂದ ಹೊರ ಬರುವ ಕುಟುಂಬಗಳಿಗೆ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ವಸತಿ ಸಹಿತ, ಕೃಷಿ ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಬೇಕು. ಅದಕ್ಕಾಗಿ 400 ಎಕರೆ ಜಾಗವನ್ನು ಮೀಸಲಿಡಬೇಕು ಎಂದರು.

ಅದೇ ರೀತಿ ಪರಿಶಿಷ್ಟ ಪಂಗಡದಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು ಮತ್ತು ಸರಕಾರಿ ಉದ್ಯೋಗ ನೇಮಕಾತಿಯಲ್ಲಿ ಅರಣ್ಯ ಇಲಾಖೆಯಲ್ಲಿರುವ ಸ್ಥಳೀಯ ಅರಣ್ಯ ಬುಡಕಟ್ಟಲು ಮೀಸಲಾತಿಯನ್ನು ಎಲ್ಲ ಇಲಾಖೆಗಳಿಗೆ ವಿಸ್ತರಣೆ ಮಾಡಬೇಕು. ಆದಿವಾಸಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಯನ್ನು ತಿರಸ್ಕರಿಸಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲ ಕುಟುಂಬಗಳಿಗೆ ರಸ್ತೆ, ವಿದ್ಯುತ್, ವಸತಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮುದಾಯದಲ್ಲಿ ವೃತ್ತಿ ಶಿಕ್ಷಣ ಪಡೆದವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ನೌಕರಿ ನೀಡಬೇಕು. ಅರಣ್ಯ ಹಕ್ಕು ಕಾಯಿದೆ ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅರಣ್ಯ ಹಕ್ಕುಪತ್ರ, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಬೇಕು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಮಾಜಿ ಅಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಉಪಾಧ್ಯಕ್ಷೆ ಶೋಭಾ, ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ, ವಕ್ತಾರ ದಿನೇಶ್ ಗೌಡ ಉಪಸ್ಥಿತರಿದ್ದರು.

‘ಮಲೆಕುಡಿಯರು ವ್ಯವಸ್ಥೆಗೆ ವಿರುದ್ಧವಾಗಿ ಹೋದವರಲ್ಲ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ, ಹುಲಿ ಯೋಜನೆ ಆತಂಕ, ಅರಣ್ಯ ಇಲಾಖೆಯ ಕಿರುಕಳಗಳಿಂದ ಕೆಲವರು ತಪ್ಪು ದಾರಿಗೆ ಹೋಗಿರಬಹುದು. ಆದರೆ ಅದನ್ನು ನಾವು ಯಾರು ಕೂಡ ಬೆಂಬಲಿಸುವುದಿಲ್ಲ. ಸರಕಾರಗಳ ನಕ್ಸಲ್ ಬದಲು ಅಭಿವೃದ್ಧಿ ಕಡೆ ಗಮನ ಹರಿಸಿದ್ದಲ್ಲಿ ಆ ಸಮಸ್ಯೆ ಯಾವತ್ತೋ ನಿವಾರಣೆ ಆಗುತ್ತಿತ್ತು. ಹೆಬ್ರಿ ತಾಲೂಕಿನ ನಾಡ್ಪಾಲು, ಕಾರ್ಕಳ ತಾಲೂಕಿನ ಈದು ಕನ್ಯಾನ, ಅಂಡಾರು ಗ್ರಾಮಗಳಲ್ಲಿ ಈಗಲೂ ಸರಿಯಾದ ರಸ್ತೆ ಇಲ್ಲ. ವಿದ್ಯುತ್ ಸಂಪರ್ಕ ಇಲ್ಲ, ಉತ್ತಮ ಮನೆಗಳಿಲ್ಲ. ಈ ಕುರಿತು ಹಲವು ಬಾರಿ ಸರಕಾರದ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಇಲ್ಲ’

-ಶ್ರೀಧರ ಗೌಡ ಈದು, ಅಧ್ಯಕ್ಷರು, ರಾಜ್ಯ ಮಲೆಕುಡಿಯ ಸಂಘ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News